Home Mangalorean News Kannada News ಕೊಂಕಣಿ ಸಾಹಿತ್ಯ ಅಕಾಡಮಿ 2025ನೇ ಸಾಲಿನ ಗೌರವ, ಪುಸ್ತಕ ಪ್ರಶಸ್ತಿ ಪ್ರಕಟ

ಕೊಂಕಣಿ ಸಾಹಿತ್ಯ ಅಕಾಡಮಿ 2025ನೇ ಸಾಲಿನ ಗೌರವ, ಪುಸ್ತಕ ಪ್ರಶಸ್ತಿ ಪ್ರಕಟ

Spread the love

ಕೊಂಕಣಿ ಸಾಹಿತ್ಯ ಅಕಾಡಮಿ 2025ನೇ ಸಾಲಿನ ಗೌರವ, ಪುಸ್ತಕ ಪ್ರಶಸ್ತಿ ಪ್ರಕಟ

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ವತಿಯಿಂದ ನೀಡಲಾಗುವ 2025ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪುರಸ್ಕಾರಗಳನ್ನು ಪ್ರಕಟಿಸಲಾಗಿದೆ.

ಗೌರವ ಪ್ರಶಸ್ತಿಗೆ ಕೊಂಕಣಿ ಸಾಹಿತ್ಯ ವಿಭಾಗದಲ್ಲಿ ರೊನ್ ರೋಚ್ ಕಾಸ್ಸಿಯಾ, ಕೊಂಕಣಿ ಕಲೆ ವಿಭಾಗದಲ್ಲಿ ರಾಮದಾಸ ದತ್ತಾತ್ರೇಯ ಗುಲ್ವಾಡಿ ಹಾಗೂ ಕೊಂಕಣಿ ಜಾನಪದ ವಿಭಾಗದಲ್ಲಿ ಸೈರು (ಮುರಳೀಧರ) ಪುತ್ತು ನಾಯ್ಕ ಆಯ್ಕೆಯಾಗಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಕೊಂಕಣಿ ಪುಸ್ತಕ ಪುರಸ್ಕಾರದಡಿ ಕೊಂಕಣಿ ಕವನ ವಿಭಾಗದಲ್ಲಿ ಆ್ಯಂಡ್ರು ಎಲ್. ಡಿಕುನ್ಹರವರ ‘ಉಡ್ವಾಡಾಚ್ಯೆ ವೆಂಗೆಂತ್’, ಲೇಖನ ವಿಭಾಗದಲ್ಲಿ ರೋಶನ್ ಮುಲ್ಕಿ ಸಿಕ್ವೇರ ಅವರ ‘ಕೊಂಕಣಿ ಸರ್ಕಸ್’ ಹಾಗೂ ಕೊಂಕಣಿ ಸಣ್ಣ ಕಥೆಗಳ ವಿಭಗಾದಲ್ಲಿ ರಿಚರ್ಡ್ ಅಲ್ವಾರಿಸ್ ಅವರ ‘ಫಿತುರಿ’ ಪುಸ್ತಕಗಳು ಆಯ್ಕೆಯಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಶಿವರಾಜ್ ಎಸ್. ತಂಗಡಗಿ ಉದ್ಘಾಟಿಸಲಿದ್ದಾರೆ. ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ಉಡುಪಿ ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಖಾರ್ವಿ, ಸಿದ್ಧಿ, ಕುಡುಬಿ ಸಮುದಾಯದ ಸಾಂಸ್ಕೃತಿಕ ನೃತ್ಯ, ಬ್ರಾಸ್ ಬ್ಯಾಂಡ್ ಹಾಗೂ ಕೊಂಕಣಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

ಪ್ರಶಸ್ತಿ ಪುರಸ್ಕೃತರ ಪರಿಚಯ:

ಕೊಂಕಣಿ ಸಾಹಿತ್ಯ ಗೌರವ ಪ್ರಶಸ್ತಿ:
ಪ್ರಶಸ್ತಿ ಪುರಸ್ಕೃತರು: ಶ್ರೀ ರೊನಾಲ್ಡ್‌ ರೊಚ್‌ (ರೊನ್‌ ರೊಚ್‌ ಕಾಸ್ಸಿಯಾ)

79 ವರ್ಷ ಪ್ರಾಯದ ರೊನ್‌ ರೊಚ್‌ ಕಾಸ್ಸಿಯಾರವರು ಕೊಂಕಣಿಯ ಉತ್ತಮ ಬರಹಗಾರರಲ್ಲಿ ಒಬ್ಬರು. ಲೇಖಕರು ಹಾಗೂ ಹಿರಿಯ ಸಾಹಿತಿಗಳು. ಇವರು 12 ಪತ್ತೇದಾರಿ ಕಾದಂಬರಿಗಳನ್ನು ಬರೆದು ಕೊಂಕಣಿ ಸಮಾಜಕ್ಕೆ ಅರ್ಪಿಸಿದ್ದಾರೆ. 150ಕ್ಕೂ ಮಿಕ್ಕಿ ಸಣ್ಣ ಕಥೆಗಳು, 200ಕ್ಕೂ ಮಿಕ್ಕಿ ಲೇಖನಗಳನ್ನು ಬರೆದಿದ್ದಾರೆ. ಇವರ ಸಾಹಿತ್ಯವು ಕೊಂಕಣಿಯ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಸರಳಾಂ ಪಾಟ್ಲ್ಯಾನ್‌, ಆಮಿ ನೋವ್‌, ಹಾಂವ್‌ ರಡ್ತಾಂ, ತಾಚಿಂ ಹಾಡಾಂ, ಕಲಾವತಿ, ಠೋಕನ್‌ ನಂ.13, ಹೊ ಹಾತ್‌ ಖುನ್ಯೆಚೊ, ಮ್ಹಾಕಾ ಜಿಯೆಂವ್ಕ್‌ ಸೊಡಾ, ತಾಂಬ್ಡೊ ವಾಕೊರ್‌, ಹಾಂವ್‌ ತಾಚ್ಯೆ ಸೊಧ್ನೆರ್‌, ಜರ್‌ ಹಾಂವ್‌ ಸಾಂಗಿನ್‌ ತರ್‌, ಘಾತಾ ಪಾಟ್ಲೊ ಹಾತ್‌ ಇವರ ಪ್ರಕಟಿತ ಕಾದಂಬರಿಗಳು. ರೊನ್‌ ರೊಚ್‌ ಕಾಸ್ಸಿಯಾ ರವರು ಅನೇಕ ಹಾಡುಗಳನ್ನು ರಚಿಸಿದ್ದಾರೆ. ಅವರು ಒಬ್ಬ ಉತ್ತೀಮ ಗಾಯಕರೂ ಆಗಿದ್ದಾರೆ.

ರೊನ್‌ ರೊಚ್‌ರವರಿಗೆ ವಿಕ್ಟರ್‌ ರೊಡ್ರಿಗಸ್‌ ಮೆಮೋರಿಯಲ್‌ ಲಿಟರರಿ ಅವಾರ್ಡ್‌ (2017), ಹಾಗೂ ದಾಯ್ಜಿ ದುಬಾಯ್‌ ಲಿಟರರಿ ಪುರಸ್ಕಾರ 2018 ದೊರಕಿವೆ. ಪ್ರಸ್ತುತ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ವಿಭಾಗದ ಗೌರವ ಪ್ರಶಸ್ತಿ ಲಭಿಸಿದೆ.

ಕೊಂಕಣಿ ಕಲಾ ಗೌರವ ಪ್ರಶಸ್ತಿ:
ಪ್ರಶಸ್ತಿ ಪುರಸ್ಕೃತರು: ಶ್ರೀ ರಾಮದಾಸ ದತ್ತಾತ್ರೇಯ ಗುಲ್ವಾಡಿ

89 ವರ್ಷ ಪ್ರಾಯದ ರಾಮದಾಸ ದತ್ತಾತ್ರೇಯ ಗುಲ್ವಾಡಿಯವರು ಕೊಂಕಣಿಯ ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಸಮುದಾಯದವರು. ದತ್ತಾತ್ರೇಯ ಶಿವಾನಂದ್‌ ಭಟ್‌ ಗುಲ್ವಾಡಿ ಹಾಗೂ ಶಾರದ ಬಾಯಿ ದತ್ತಾತ್ರೇಯ ಗುಲ್ವಾಡಿ ಯವರ ಮಗನಾಗಿ ಬೆಳ್ತಂಗಡಿಯಲ್ಲಿ ಜನಿಸಿದರು. ಇವರು BA BSc ಪದವೀದರರು.

ತಮ್ಮ 7ನೇ ವರುಷದ ಪ್ರಾಯದಲ್ಲಿ ಕಲಾಕಾರರಾಗಿ ರಂಗಭೂಮಿಗೆ ಕಾಲಿಟ್ಟ ಇವರು ನಾಟಕರಂಗದಲ್ಲಿ 80 ವರುಷಗಳ ಅನುಭವ ಹೊಂದಿದ್ದಾರೆ. ಅವರ ಅಜ್ಜ ಹರಿದಾಸ್‌ ಶಿವಾನಂದ್‌ ಭಟ್‌ರವರು ಅವರನ್ನು ರಂಗಭೂಮಿಗೆ ಪರಿಚಯಿಸಿದ್ದರು. ಇವರು ಬಹುಮುಖಿ ಪ್ರತಿಭೆ ಉಳ್ಳವರಾಗಿದ್ದು, ಹರಿಕಥೆ, ನಾಟಕ, ಸಿನಿಮಾ ಕಥೆ ಬರಹಗಾರರು, ನಟನೆ, ನಿರ್ದೇಶನ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಅನೇಕ ಸಂಗೀತ ವಾದನಗಳನ್ನು ನುಡಿಸಬಲ್ಲವರು.

1964 ರಿಂದ 2000ವರೆಗೆ ಮುಂಬಯಿಯ ಹವ್ಯಾಸಿ ನಾಟಕ ತಂಡದ ಸದಸ್ಯರಾಗಿ, ವಾರ್ಷಿಕ ನಾಟಕ ಹಬ್ಬಗಳಲ್ಲಿ ದುಡಿದಿದ್ದಾರೆ. 2001 ರಲ್ಲಿ ಮಂಗಳೂರಿಗೆ ಹಿಂದಿರುಗಿದ ಬಳಿಕ ಕೊಂಕಣಿ ಸ್ಟೇಜ್‌ ಕ್ರಾಫ್ಟ್ಸ್‌ ತಂಡದ ಸಹ ಸ್ಥಾಪಕರಾಗಿ ನಾಟಕ ರಂಗದ ದಿಗ್ಗಜರೊಂದಿಗೆ ಅನೇಕ ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇವರಿಗೆ ಕೊಂಕಣಿ ಸಾಂಸ್ಕೃತಿಕ ಸಂಘ ಮಂಗಳೂರು ಇವರು ಕೊಂಕಣಿ “ಸಾಂಸ್ಕೃತೀಯ ರಾಯಭಾರಿ” ಬಿರುದನ್ನು ಕೊಟ್ಟಿರುತ್ತಾರೆ. ವಿಶ್ವ ಕೊಂಕಣಿ ರಂಗಶ್ರೇಷ್ಟ ಪುರಸ್ಕಾರ ಲಭಿಸಿದೆ. ಪ್ರಸ್ತುತ ಇವರಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕಲಾ ವಿಭಾಗದ ಗೌರವ ಪ್ರಶಸ್ತಿ ಲಭಿಸಿದೆ.

ಕೊಂಕಣಿ ಜಾನಪದ ಗೌರವ ಪ್ರಶಸ್ತಿ:
ಪ್ರಶಸ್ತಿ ಪುರಸ್ಕೃತರು: ಶ್ರೀ ಸೈರು (ಮುರಳೀಧರ) ಪುತ್ತು ನಾಯ್ಕ

ಸುಮಾರು 51 ವರುಷಗಳ ಹಿಂದೆ ಕನ್ನಡದ ಯಕ್ಷಗಾನದಂತಿರುವ ಕೊಂಕಣಿಯ ಖೇಳ ಪ್ರಕಾರವು ಪ್ರಸ್ತುತವಿದ್ದು, ಇವರು 1974 ರಲ್ಲಿ ಖೇಳ ಕಲಾವಿದರಾಗಿ ರಂಗಪ್ರವೇಶ ಮಾಡಿದರು. 1998ರಲ್ಲಿ ಶ್ರೀ ರಾಮನಾಥ ಖೇಳ – ನಾಟ್ಯ ಸಂಘದ ಮುಖ್ಯಸ್ಥರಾಗಿ ಆಯ್ಕೆಯಾದರು. ಹಾಗೂ ಭಾಗವತರಾಗಿ ಪದೋನ್ನತಿ ಪಡೆದರು. ಅಂದಿನಿಂದ ಸುಮಾರು 400ಕ್ಕೂ ಮೀರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರ ತಂಢದೊಂದಿಗೆ ಕಲಾವಿದರಾಗಿ ಸೇವೆ ಸಲ್ಲಿಸಿರುತ್ತಾರೆ.

ಕೊಂಕಣಿ ಖೇಳ ಕಲಾವಿದ ನಿರ್ದೇಶಕ ಹರಿದಾಸ ಲೇಖಕರಾಗಿ ಕಳೆದ 27 ವರ್ಷಗಳಲ್ಲಿ ಕೊಂಕಣಿ ಖೇಳ ಪಾತ್ರದಾರಿಯಾಗಿ ಹಲವು ಪ್ರಸಂಗಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ.

ಕೊಂಕಣಿ ಖೇಳದಂತೆ, ಸೊಂಗಾ ಖೇಳ ಕೂಡಾ ಅವರ ತಂಡದಿಂದ ಪ್ರಸ್ತುತಪಡಿಸಲಾಗಿದೆ. ಗುಮಟ್‌ ವಾದನ ಕಲಾವಿದರಾಗಿ 40 ವರ್ಷಗಳಿಂದ ದುಡಿದಿದ್ದಾರೆ.

ಅವರ ಕಲಾ ಪ್ರದರ್ಶನಗಳಿಗಾಗಿ ಅನೇಕ ಸನ್ಮಾನ, ಪುರಸ್ಕಾರಗಳು ಲಭಿಸಿವೆ.
ಪ್ರಸ್ತುತ ಇವರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಜಾನಪದ ವಿಭಾಗದಲ್ಲಿ ಗೌರವ ಪ್ರಶಸ್ತಿ ಲಭಿಸಿದೆ.

ಪುಸ್ತಕ ಪುರಸ್ಕೃತ ಕೊಂಕಣಿ ಕವನ ಪುಸ್ತಕ: “ಉಜ್ವಾಡಾಚ್ಯೆ ವೆಂಗೆಂತ್”
ಪ್ರಶಸ್ತಿ ಪುರಸ್ಕೃತರು: ಆಂಡ್ರ್ಯೂ ಎಲ್.‌ ಡಿಕುನ್ಹಾ

ದಿವಂಗತ ಡೆನಿಸ್‌ ಹಾಗೂ ಮೇರಿ ಡಿಕುನ್ಹಾರವರ ಕಿರಿ ಮಗನಾದ ಆಂಡ್ರ್ಯೂ ಎಲ್‌ ಡಿಕುನ್ಹಾರವರು ಒಬ್ಬ ಜನಪ್ರಿಯ ಕವಿ. ಮೂಲತಃ ಗುರುಪುರ ಕಿನ್ನಿಕಂಬ್ಳದವರಾದ ಇವರು ಪ್ರಸ್ತುತ ಬಿಜೈನಲ್ಲಿ ನೆಲೆಸಿರುತ್ತಾರೆ. ಇವರು ಕಳೆದ 42 ವರ್ಷಗಳಿಂದ ಕೊಂಕಣಿಯಲ್ಲಿ ಸಾಹಿತ್ಯ ರಚಿಸುತ್ತಾ ಬಂದಿರುತ್ತಾರೆ. 800ಕ್ಕೂ ಮಿಕ್ಕಿ ಕವಿತೆಗಳು, 100ಕ್ಕೂ ಮಿಕ್ಕಿ ಲೇಖನಗಳು, 30 ಸಣ್ಣ ಕಥೆಗಳನ್ನು ಬರೆದಿರುತ್ತಾರೆ.

ವ್ಹಳೂ ವ್ಹಳೂ ವ್ಹಾಳ್‌ ವಾಳ್ಯಾ, ಅಂಜುರಾಚೆಂ ಪಾನ್‌, ಆಯೆರಾಚೊ ಬೂಕ್‌ ಇವರ ಪ್ರಕಟಿತ ಕವಿತೆ ಪುಸ್ತಕಗಳು. ಅಂಜುರಾಚೆಂ ಪಾನ್‌ (2013) ಪುಸ್ತಕಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಅಖಿಲ ಭಾರತ ಕೊಂಕಣಿ ಬರಹಗಾರರ ಒಕ್ಕೂಟ ಪುರಸ್ಕಾರ ( AIKWO), ವಿಮಲಾ ವಿ. ಪೈ.ವಿಶ್ವ್‌ ಕೊಂಕಣಿ ಕವಿತಾ ಪುರಸ್ಕಾರ ಮತ್ತು ಟಿ.ಎಮ್.ಎ. ಪೈ ಪುಸ್ತಕ ಪುರಸ್ಕಾರ ಲಭಿಸಿವೆ. 2023 ರ ರಾಜ್ಯ ಮಟ್ಟದ ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ ಕೂಡ ಲಭಿಸಿದೆ.

ಮಂಗಳೂರು ಆಕಾಶವಾಣಿಯಲ್ಲಿ 40 ಕೊಂಕಣಿ ಕಾರ್ಯಕ್ರಮಗಳನ್ನು ಸಾದರಪಡಿಸಿರುತ್ತಾರೆ. ರಾಕ್ಣೊ ಪತ್ರಿಕೆಯಲ್ಲಿ ʼಆಂದ್ರು ಮಾಮ್‌ʼ ಹೆಸರಲ್ಲಿ ಮಕ್ಕಳ ವಿಭಾಗವನ್ನು ನಡೆಸಿರುತ್ತಾರೆ. ಆಮ್ಚೊ ಯುವಕ್‌ ಪತ್ರಿಕೆಯ ನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸಿರುತ್ತಾರೆ. ವಿವಿಧ ಪತ್ರಿಕೆಗಳಲ್ಲಿ, ಅಂತರ್ಜಾಲಗಳಲ್ಲಿ ಕವಿತೆಗಳ ಅಂಕಣಗಳನ್ನು ನಡೆಸಿರುತ್ತಾರೆ. ದೇಶ ವಿದೇಶಗಳಲ್ಲಿ ಅನೇಕ ಕವಿಗೋಶ್ಟಿಗಳನ್ನು ನಡೆಸಿರುತ್ತಾರೆ. ಕವಿತೆಗಳ ಬಗ್ಗೆ ಪ್ರಬಂಧ ಮಂಡನೆ ಹಾಗೂ ಉಪನ್ಯಾಸಗಳನ್ನು ಕೊಟ್ಟಿರುತ್ತಾರೆ. ಕವಿತಾ ಟ್ರಸ್ಟ್‌ ನ ಟ್ರಸ್ಟಿಯಾಗಿದ್ದಾರೆ. ವೃತ್ತಿಯಲ್ಲಿ ಆರ್ಥಿಕ ಸಲಹೆಗಾರರು. ತಮ್ಮದೇ WINWIN ಸಂಸ್ಥೆಯನ್ನು ಹೊಂದಿರುತ್ತಾರೆ.

ಪ್ರಸ್ತುತ ಅವರ ಉಜ್ವಾಡಾಚ್ಯೆ ವೆಂಗೆಂತ್‌ ಕವಿತಾ ಪುಸ್ತಕಕ್ಕೆ 2025ನೇ ಸಾಲಿನ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕವನ ವಿಭಾಗದ ಪುಸ್ತಕ ಪುರಸ್ಕಾರ ಲಭಿಸಿದೆ. ‌

ಪುಸ್ತಕ ಪುರಸ್ಕೃತ ಕೊಂಕಣಿ ಲೇಖನ ಪುಸ್ತಕ: “ಕೊಂಕ್ಣಿ ಸರ್ಕಸ್‌”
ಪ್ರಶಸ್ತಿ ಪುರಸ್ಕೃತರು: ರೋಶನ್‌ ಮೆಲ್ಕಿ ಸಿಕ್ವೇರಾ, ಬಜ್ಪೆ

“ರೋಶು ಬಜ್ಪೆ” ಹೆಸರಲ್ಲಿ ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರಾದ ರೋಶನ್‌ ಮೆಲ್ಕಿ ಸಿಕ್ವೇರಾರವರು ದಿವಂಗತ ಬೊನವೆಂಚರ್‌ ಹಾಗೂ ದಿವಂಗತ ಮೇರಿ ಸಿಕ್ವೇರಾರವರ ಒಂಬತ್ತು ಜನ ಮಕ್ಕಳಲ್ಲಿ ಕೊನೆಯವರು. ಸಂತ ಎಲೋಶಿಯಸ್‌ ಕಾಲೇಜಿನಿಂದ ಬಿ.ಕಾಮ್. ಪದವಿ ಹಾಗೂ ಮೈಸೂರು ಯುನಿವರ್ಸಿಟಿಯಿಂದ ಎಮ್.ಕೊಮ್.‌ ಪದವಿ ಪಡೆದಿರುತ್ತಾರೆ.

ಅನೇಕ ವರುಷಗಳಿಂದ ಕವಿತೆ, ಸಣ್ಣ ಕಥೆ, ಹಾಸ್ಯ, ವಿಡಂಬನೆ,ಲೇಖನ, ಲಲಿತ ಪ್ರಬಂದ ಮುಂತಾದ ಕ್ಷೇತ್ರಗಳಲ್ಲಿ ತಮ್ಮ ಸೇವೆ ಸಲ್ಲಿಸಿರುತ್ತಾರೆ. ಹೆಚ್ಚಿನ ಎಲ್ಲಾ ಪತ್ರಿಕೆಗಳಲ್ಲಿ ಅವರ ಬರಹಗಳು ಪ್ರಕಟಿತವಾಗಿದ್ದು, ಅನೇಕ ಕವಿಗೋಶ್ಟಿಗಳಲ್ಲಿ ಭಾಗವಹಿಸಿರುತ್ತಾರೆ. ಆಕಾಶವಾಣಿಯಲ್ಲಿ ಅವರ ಬರಹಗಳು ಪ್ರಸಾರವಾಗಿವೆ. ಗಝಲ್‌ ಗೀತೆಗಳನ್ನು ಬರೆಯುವುದರಲ್ಲಿ ಅವರ ಎತ್ತಿದ ಕೈ. ಕೊಂಕಣಿ ಧ್ವನಿಮುದ್ರಣಗಳಿಗೆ ಹಾಡುಗಳನ್ನು ಬರೆದಿರುತ್ತಾರೆ. ವೃತ್ತಿಯಲ್ಲಿ ಆರ್ಥಿಕ ಸಲಹೆಗಾರರಾಗಿದ್ದಾರೆ.

ತೀಂತ್‌ ಜಾಲೆಂ ರಗತ್‌, ಗಿರ್ಬುಜಿ ಎಂಬ ಕವಿತಾ ಪುಸ್ತಕಗಳು, ಹಾಸ್ಯ್‌ ಎಟ್ಯಾಕ್, ಓಪನ್‌ ಹಾಸ್ಯ್‌ ಸರ್ಜರಿ, ಫೆಲಿಸ್‌ ನವಿಡಾಡ್‌, ಪೋಲಿ-ಟಿಕಲ್‌, ಕೊಂಕ್ಣಿ ಸರ್ಕಸ್‌ ಮುಂತಾದ ಹಾಸ್ಯ ಪುಸ್ತಕಗಳು, “ಪೇಯಿಂಗ್‌ ಗೆಸ್ಟ್‌ ಆನಿ ಹೆರ್‌ ಕಥಾ” ಎಂಬ ಸಣ್ಣ ಕಥೆಗಳ ಪುಸ್ತಕ, ಸಾಂಡುನ್‌ ಘಾಲ್ಲಿ ಶೆಳಿ ಕಾದಂಬರಿ ಪುಸ್ತಕ. ಹೋಂ ಸ್ವೀಟ್‌ ಹೋಂ, ಆದಾಂವ್‌ ಎವೆನ್‌ ಉಘಡ್ಲೆ ದೊಳೆ, ರಚ್ನಾರಾ ಆತಾಂ ತುಂಚ್‌ ಪಳೆ, ವಿಶೆವ್‌ ಅಪಾರ್ಟ್‌ಮೆಂಟ್‌, ಅನುವಾದಿತ ನಾಟಕಗಳು ಪ್ರಕಟವಾಗಿವೆ. ಇವರಿಗೆ ಸಮನ್ವಯ ಸಂಸ್ಥೆಯಿಂದ ಯುವಕಿರಣ್‌ ಪುರಸ್ಕಾರ, ಕಿಟಾಳ್‌ ಯುವ ಪುರಸ್ಕಾರ, ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಡಾ. ಟಿ.ಎಮ್.ಎ. ಪೈ ಪ್ರಶಂಸಾರ್ಹ ಪುರಸ್ಕಾರ, ಗೋವಾ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಮುಂತಾದ ಪುರಸ್ಕಾರಗಳು ಲಭಿಸಿವೆ. ಇವರ “ಕೊಂಕ್ಣಿ ಸರ್ಕಸ್‌” ಪುಸ್ತಕಕ್ಕೆ ಪ್ರಸ್ತುತ 2025ನೇ ಸಾಲಿನ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಲೇಖನ ವಿಭಾಗದ ಪುಸ್ತಕ ಪುರಸ್ಕಾರ ಲಭಿಸಿದೆ.

ಪುಸ್ತಕ ಪುರಸ್ಕೃತ ಕೊಂಕಣಿ ಸಣ್ಣಕಥೆ ಪುಸ್ತಕ: “ಫಿತುರಿ”
ಪ್ರಶಸ್ತಿ ಪುರಸ್ಕೃತರು: ರಿಚರ್ಡ್‌ ಅಲ್ವಾರಿಸ್‌, ಕುಲ್ಶೇಕರ್‌

ಶ್ರೀ ರಿಚರ್ಡ್‌ ಅಲ್ವಾರಿಸ್‌ರವರು ಮಂಗಳೂರಿನ ಕುಲಶೇಖರ ಪರಿಸರದವರು. “ಆನಂದ್‌” ಕಾವ್ಯನಾಮದಿಂದ ಸುಮಾರು 50 ವರುಷಗಳ ಹಿಂದೆ ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಬಂದವರು. ಇತ್ತೀಚಿನ ಕೆಲ ವರುಷಗಳಲ್ಲಿ ಗುರೂಜಿ ಎಂಬ ಕಾವ್ಯನಾಮದಿಂದಲೂ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಹಾಸ್ಯ ಬರಹಗಳು, ಕಥೆಗಳು, ಲೇಖನಗಳು ಕೊಂಕಣಿಯ ವಿವಿಧ ಪತ್ರಿಕೆಗಳಲ್ಲಿ ಪ್ರಸಾರಗೊಂಡಿವೆ. ದೈವಿಕ್ ಅಮೃತ್‌‌ ಹಾಗೂ ಕೊರ್ಡೆಲ್ಚೆಂ ಜಯ್ತ್‌ ಪತ್ರಿಕೆಗಳ ಸ್ಥಾಪಕ ಸಂಪಾದಕೀಯ ಮಂಡಳಿಯ ಸದಸ್ಯರಾಗಿ, ಕೊರ್ಡೆಲ್ಚೆಂ ಜಯ್ತ್‌ ಪತ್ರಿಕೆಯ ಸಹಸಂಪಾದಕರಾಗಿ ಸೇವೆ ಸಲ್ಲಿಸಿರುತ್ತಾರೆ. ಕಾಣಿಕ್‌ ಪತ್ರಿಕೆಯ ಸಹಸಂಪಾದಕ, ಯುವತಾರೆ ಪತ್ರಿಕೆಯ ಸಹಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

ಮೊಲಾಧಿಕ್‌ ಮೊತಿಯಾಂ ಎಂಬ 100 ಲೇಖನಗಳನ್ನೊಳಗೊಂಡ ಪುಸ್ತಕ ಪ್ರಕಟಗೊಂಡಿದೆ. ಅಲ್ಲದೇ ಕೊಲ್ಕತ್ತಾಚಿ ಭಾಗೆವಂತ್ ತೆರೆಸಾ, ಮರಿಯೆಸಂಗಿಂ ಸೊಡ್ವಣೆಚೊ ನಿಯಾಳ್‌, ಜೆಜುಸಂಗಿಂ ಮಾಗ್ಯಾಂ, ಹಾಗೂ ಇನ್ನಿತರ ಪುಸ್ತಕಗಳು ಪ್ರಕಟಿತವಾಗಿವೆ. ಕನ್ನಡದಲ್ಲಿ ಹೊಸ ಬೆಳಕು, ಕ್ರಿಸ್ತ ಪ್ರೀತಿ, ದಾರಿದೀಪ, ದೀಪಿಕಾ ಎಂಬ ಪುಸ್ತಕಗಳನ್ನು ಬರೆದಿದ್ದಾರೆ.

ಕೊಂಕಣಿ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುತ್ತಾರೆ. ಇವರ ಹೊಸಬೆಳಕು ಪುಸ್ತಕಕ್ಕೆ 1998 ಇಸವಿಯ ದಾಂತಿ ಪ್ರಶಸ್ತಿ ಲಭಿಸಿದೆ. ವೃತ್ತಿಯಲ್ಲಿ ಶಿಕ್ಷಕರಾದ ಇವರಿಗೆ ಜೆಸಿಐ ಸಿಲಿಕಾನ್‌ ಸಿಟಿ ವತಿಯಿಂದ “ಗುರು” ಪುರಸ್ಕಾರ ಲಭಿಸಿದೆ. 2011ನೇ ಇಸವಿಯ ಜಣಗಣತಿ ಕೆಲಸಗೋಸ್ಕರ ರಾಷ್ಟ್ರಪತಿ ಸಿಲ್ವರ್‌ ಮೆಡಲ್‌, 2014ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ದ.ಕ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿವೆ. ಪ್ರಸ್ತುತ ಅವರ ಫಿತುರಿ ಸಣ್ಣಕಥೆ ಸಂಗ್ರಹಕ್ಕೆ 2025 ನೇ ಸಾಲಿನ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಣ್ಣಕಥೆ ವಿಭಾಗದ ಪುಸ್ತಕ ಪುರಸ್ಕಾರ ಲಭಿಸಿದೆ.


Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
Inline Feedbacks
View all comments
wpDiscuz
0
0
Would love your thoughts, please comment.x
()
x
Exit mobile version