ಕೋಟ| ಎಸ್ ಐ ಆರ್ ಕರ್ತವ್ಯ ನಿರ್ವಹಿಸುತ್ತಿದ್ದ ಬಿ ಎಲ್ ಓ ಮೇಲೆ ಕರ್ತವ್ಯಕ್ಕೆ ಅಡ್ಡಿ : ಪ್ರಕರಣ ದಾಖಲು
ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಸ್ಐಆರ್ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಲ್ಓ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.
ಶಿರಿಯಾರ ಗ್ರಾಮದ ಎತ್ತಿನಟ್ಟಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್ಓ ಅಮೀತಾ ಅವರು, ಜುಲೈ 27ರಂದು ಗ್ರಾಮ ಆಡಳಿತಾಧಿಕಾರಿಗಳ ಕಚೇರಿಯಲ್ಲಿ ಎಸ್ಐಆರ್ ಕರ್ತವ್ಯದಲ್ಲಿದ್ದ ವೇಳೆ, ಪಂಚಾಯತ್ ಮಾಜಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಎಂಬವರು ಮತದಾರರ ಪಟ್ಟಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ವಿಚಾರವಾಗಿ ಪ್ರಶ್ನಿಸಿ, ಕರ್ತವ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಎಳೆದು ಅಧಿಕಾರಿಯ ಕೆಲಸಕ್ಕೆ ಅಡ್ಡಿಪಡಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅಮೀತಾ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನ ಆಧಾರದ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಸುಧೀಂದ್ರ ಶೆಟ್ಟಿ ವಿರುದ್ಧ ಬಿಎನ್ಎಸ್ ಕಲಂ 132, 74, 352 ಹಾಗೂ 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
