ಕೋಟ | ಅಪಹರಣ ಮತ್ತು ಹಣಕ್ಕೆ ಬೇಡಿಕೆ ಪ್ರಕರಣ: 7 ಆರೋಪಿಗಳಯ ಬಂಧನ, ಇಬ್ಬರು ಪರಾರಿ
ಕೋಟ: ಸಾಸ್ತಾನದಲ್ಲಿ ನಡೆದ ಅಪಹರಣ ಮತ್ತು ಹಣಕ್ಕೆ ಬೇಡಿಕೆ ಪ್ರಕರಣವನ್ನು ಭೇದಿಸಿರುವ ಕೋಟ ಪೊಲೀಸರು 7 ಮಂದಿಯನ್ನು ಬಂಧಿಸಿ, ಪ್ರಕರಣಕ್ಕೆ ಸಂಘಟಿತ ಅಪರಾಧ ತಡೆ ಕಾಯ್ದೆಯಾದ KCOCA (2000) ಅನ್ವಯಿಸಿದ್ದಾರೆ.
ಸಿದ್ದಾಪುರ ಗ್ರಾಮದ ಮೋಹನ ದಾಸ್ ಶೆಟ್ಟಿ ಅವರ ಮಗ ತೇಜಸ್ ಅಪಹರಣಕ್ಕೊಳಗಾದ ಘಟನೆಗೆ ಸಂಬಂಧಿಸಿದಂತೆ, ತೇಜಸ್ ಸ್ನೇಹಿತ ಪ್ರಜ್ವಲ್ ಮಧ್ಯಾಹ್ನ ಫೋನ್ ಮೂಲಕ ಪಿರ್ಯಾದಿದಾರರಿಗೆ ಮಾಹಿತಿ ನೀಡಿದ್ದು, ಸಾಸ್ತಾನದ ಕೋಸ್ಟಲ್ ಪ್ಯಾರಡೈಸ್ ಹೋಟೆಲ್ ಎದುರು ಅಪರಿಚಿತರು ತೇಜಸ್ನನ್ನು ಕಿಡ್ನಾಪ್ ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದ್ದಾನೆ.

ಸ್ಥಳಕ್ಕೆ ಬಂದ ಪಿರ್ಯಾದಿದಾರರು ತಮ್ಮ ಮಗನ KA-15-Z-0007 ಸಂಖ್ಯೆಯ ಕಾರು ಅಲ್ಲೇ ಇರುವುದನ್ನು ಗಮನಿಸಿದ್ದು, ಕಾರಿನ ಕೀ ಕೂಡ ಕಾರಿನ ಕೆಳಗಡೆ ಪತ್ತೆಯಾಗಿದೆ. ಬಳಿಕ ಪ್ರಜ್ವಲ್ ನೀಡಿದ ಮಾಹಿತಿಯಂತೆ, ತೇಜಸ್ ತನ್ನ ವಾಟ್ಸಪ್ ಮೂಲಕ ಆಡಿಯೋ ಕಾಲ್ ಮಾಡಿ, ಮನೋಜ್ ಕೋಡಿಕೆರೆ ಸೂಚನೆಯಂತೆ 2-3 ಜನ ಅಪರಿಚಿತರು ತನ್ನನ್ನು ಅಪಹರಿಸಿರುವುದಾಗಿ ತಿಳಿಸಿದ್ದಾನೆ.
ಇದಾದ ಬಳಿಕ ಅಪರಿಚಿತರಿಂದ ವಾಟ್ಸಪ್ ಕರೆಗಳ ಮೂಲಕ ಮೊದಲು ₹50 ಲಕ್ಷ ಮತ್ತು ನಂತರ ₹3 ಕೋಟಿ ಪಣ ಕೇಳಿ, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 208/2025 ಅಡಿಯಲ್ಲಿ BNS ವಿಧಿಗಳಂತೆ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಕೋಟ ಪೊಲೀಸರು ಆರೋಪಿಗಳು ಸಂಘಟಿತವಾಗಿ ಅಪರಾಧ ನಡೆಸಿರುವುದು ದೃಢಪಟ್ಟ ಹಿನ್ನೆಲೆ ಪ್ರಕರಣಕ್ಕೆ KCOCA ಕಾಯ್ದೆ ಅನ್ವಯಿಸಿದ್ದಾರೆ.
ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಹೆಚ್.ಡಿ. ಕುಲಕರ್ಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಪ್ರಕರಣದ ಆರೋಪಿಗಳಾದ ದೇವಿ ಪ್ರಸಾದ್ ಶೆಟ್ಟಿ @ ದೀಕ್ಷಿತ್ (33), ಸುಜಿತ್ (27), ಸುದೀಪ್ (22), ಶ್ರೀಷಾ ಆನಂದ ಶೆಟ್ಟಿ (35), ಮಿಥುನ್ @ ಮಿಥುನ್ ಕೈಕಂಬ (20), ಸುಹಾಸ್ (31) ಮತ್ತು ಮನೋಜ್ ವಿ. ಕೊಟ್ಯಾನ್ (34) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ್ ಕೋಡಿಕೆರೆ (42) ಮತ್ತು ಚೇತನ್ ಪಡೀಲ್ @ ಚೇತನ್ ಕುಲಾಲ್ (38) ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಮನೋಜ್ ಕೋಡಿಕೆರೆ ವಿರುದ್ಧ ಮಂಗಳೂರು ನಗರದಲ್ಲಿ 18 ಮತ್ತು ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದು, ಚೇತನ್ ಪಡೀಲ್ ವಿರುದ್ಧ ಮಂಗಳೂರು ನಗರದಲ್ಲಿ 11 ಮತ್ತು ಉಡುಪಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ.
ಆರೋಪಿಗಳ ಬಗ್ಗೆ ಮಾಹಿತಿ ಹೊಂದಿರುವವರು ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಹೆಚ್.ಡಿ. ಕುಲಕರ್ಣಿ (ಮೊಬೈಲ್: 9480805422) ಅವರನ್ನು ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ. ಮಾಹಿತಿ ನೀಡುವವರಿಗೆ ₹50,000 ನಗದು ಬಹುಮಾನ ನೀಡಲಾಗುವುದಾಗಿ ತಿಳಿಸಲಾಗಿದ್ದು, ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.