ಪರಿಷತ್ ಸದಸ್ಯ ಐವನ್ ಡಿಸೋಜಾರ ನೇತೃತ್ವದಲ್ಲಿ ಕಾರ್ಮಿಕ ದಿನಾಚರಣೆ
ಮಂಗಳೂರು : ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ ರವರ ನೇತೃತ್ವದಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್, ಬಸ್ ನೌಕರರ ಸಂಘ ಹಾಗೂ ಆಟೋ ರಿಕ್ಷಾ ಚಾಲಕ-ಮಾಲೀಕರ ಸಂಘದ ವತಿಯಿಂದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಮಂಗಳೂರಿನ ಹಂಪನಕಟ್ಟೆಯ ತಾಜ್ ಮಹಲ್ ಎದುರಿನ ರಿಕ್ಷಾ ನಿಲ್ದಾಣದ ಬಳಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಮಿಕ ರಂಗದಲ್ಲಿ ವಿಶೇಷ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರಗಳ ಆರು ಮಂದಿಯನ್ನು ಸನ್ಮಾನಿಸಲಾಯಿತು. ಅಲ್ಲದೆ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂದರ್ಭದಲ್ಲಿ ಧೈರ್ಯದಿಂದ ಸೇವೆ ಸಲ್ಲಿಸಿದ್ದ ಶ್ರೀ ಪುರುಷೋತ್ತಮ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯಲ್ಲಿ ನೋಂದಾಯಿತ ಆಟೋ ರಿಕ್ಷಾ ಚಾಲಕರಿಗೆ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲಾಯಿತು. ಈ ಕಾರ್ಡ್ ಹೊಂದಿದವರಿಗೆ ಕುಟುಂಬಕ್ಕೆ ₹5 ಲಕ್ಷ, ಗಾಯಗೊಂಡಲ್ಲಿ ₹2 ಲಕ್ಷ ಹಾಗೂ ಆಸ್ಪತ್ರೆ ಚಿಕಿತ್ಸೆಗೆ ₹1 ಲಕ್ಷದವರೆಗೆ ಸೌಲಭ್ಯ ದೊರೆಯಲಿದೆ ಎಂದು ತಿಳಿಸಲಾಯಿತು.
ಅದೇ ರೀತಿ ರಿಕ್ಷಾ ಚಾಲಕರಿಗೆ ಸಮವಸ್ತ್ರ (ಯೂನಿಫಾರ್ಮ್) ವಿತರಿಸಲಾಯಿತು. ಕಾರ್ಮಿಕ ಅಧಿಕಾರಿಯಾದ ಶ್ರೀಮತಿ ವಿಲ್ಮಾ ಎಲಿಜಬೆತ್ ಅವರು ಕಾರ್ಮಿಕರಿಗೆ ಹಾಗೂ ಚಾಲಕರಿಗೆ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಡಿ.ಸಿ.ಪಿ ಶ್ರೀ ರವಿಶಂಕರ ಅವರು ಮಾತನಾಡಿ, ರಿಕ್ಷಾ ಚಾಲಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ಶ್ರೀ ಐವನ್ ಡಿ’ಸೋಜಾ ಅವರು ಮಾತನಾಡಿ, ರಿಕ್ಷಾ ಚಾಲಕರಿಗೆ ವಿಮಾ ಯೋಜನೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು. ಹಾಗೆಯೇ 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ನಿವೃತ್ತಿ ವೇತನ ಸೌಲಭ್ಯವನ್ನು ವಿಸ್ತರಿಸಬೇಕು ಹಾಗೂ ಪ್ರಸ್ತುತ ನೀಡಲಾಗುತ್ತಿರುವ ₹3000 ಮಾಸಿಕ ಪಿಂಚಣಿಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು. ರಿಕ್ಷಾ ಚಾಲಕರು ಹಾಗೂ ವಿವಿಧ ಅಸಂಘಟಿತ ಕಾರ್ಮಿಕರಿಗೂ ಈ ಯೋಜನೆಗಳನ್ನು ವಿಸ್ತರಿಸುವ ಕುರಿತು ಮುಂದಿನ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಶ್ರೀ ಶಶೀಧರ ಹೆಗ್ಡೆ, ಮಾಜಿ ಕಾರ್ಪೊರೇಟರ್ಗಳಾದ ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಸತೀಶ್ ಪೈಂಗಳ್, ಮುಖಂಡರಾದ ಅಬ್ಬಾಸ್ ಅಲಿ, ವಸಂತ ಶೆಟ್ಟಿ ವೀರನಗರ, ಪಿಯುಸ್ ಮೊಂಟೆರೋ, ಆ್ಯಲಿಸ್ಟನ್ ಡಿಕುನ್ನ, ಹುಸೇನ್ ಕೂಳೂರು, ಇಮ್ರಾನ್ ಎ.ಆರ್, ಚಂದ್ರಹಾಸ್ ಪೋಜಾರಿ, ಹಬೀಬುಲ್ಲಾ ಕನ್ನೂರು, ರಾಜೇಶ್, ಅನಿಲ್ ಲೋಬೋ, ಶೇಖರ್,ಅನಿಲ್ ವೆಲೆನ್ಸಿಯಾ ತಾಜ್ ಮಹಲ್ ಹೋಟೆಲ್ ಮಾಲಕರಾದ ರಾಮನಾಥ್ ಶೆಣೈ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
