ಆರು ಗ್ರಾಮ ಪಂಚಾಯತ್‌ಗಳಿಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ
ಪುತ್ತೂರು: ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ದಾಖಲಾಗಿರುವ ಸ್ವಯಂಪ್ರೇರಿತ (Suo Motu) ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನ ಒಟ್ಟು ಆರು ಗ್ರಾಮ ಪಂಚಾಯತ್‌ಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪುತ್ತೂರು ತಾಲೂಕಿನ ಉಪ್ಪಿನಂಗಡಿ ಹಾಗೂ ನೆಕ್ಕಿಲಾಡಿ, ಸುಳ್ಯ ತಾಲೂಕಿನ ಕಲ್ಮಡ್ಕ ಹಾಗೂ ಗುತ್ತಿಗಾರು, ಬೆಳ್ತಂಗಡಿ ತಾಲೂಕಿನ ಉಜಿರೆ ಹಾಗೂ ಲಾಯಿಲ ಗ್ರಾಮ ಪಂಚಾಯತ್‌ಗಳಿಗೆ ಅಧಿಕಾರಿಗಳು ಭೇಟಿ ನೀಡಿದರು.
ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಘಟಕದ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಭಾರತಿ ಜಿ. ಹಾಗೂ ಕಾರವಾರ ಲೋಕಾಯುಕ್ತ ಘಟಕದ ಪೊಲೀಸ್ ಉಪಾಧೀಕ್ಷಕರಾದ ಧನ್ಯ ನಾಯಕ್, ಪೊಲೀಸ್ ನಿರೀಕ್ಷಕರಾದ ರವಿ ಎನ್.ಎನ್., ಉಡುಪಿ ಲೋಕಾಯುಕ್ತ ಘಟಕದ ಪೊಲೀಸ್ ಉಪಾಧೀಕ್ಷಕರಾದ ಹಾಲಮೂರ್ತಿ ರಾವ್ ವಿ.ಎಸ್., ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಸೇರಿದಂತೆ ಸಿಬ್ಬಂದಿ ಪರಿಶೀಲನೆಯಲ್ಲಿ ಭಾಗವಹಿಸಿದ್ದರು.
ಪರಿಶೀಲನೆ ವೇಳೆ ಗ್ರಾಮ ಪಂಚಾಯತ್‌ಗಳಲ್ಲಿ ಕಂಡುಬಂದ ನ್ಯೂನತೆಗಳು ಹಾಗೂ ಲೋಪದೋಷಗಳ ಕುರಿತು ವರದಿ ಸಿದ್ಧಪಡಿಸಿ ಲೋಕಾಯುಕ್ತ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
