Home Mangalorean News Kannada News ರಾಮನ ಹೆಸರಲ್ಲಿ ಲೂಟಿ: ಪ್ರಧಾನಿ ಮೋದಿ, ಸಿಎಂ ಯೋಗಿ ಈಗ ಯಾಕೆ ಮೌನಿ ಬಾಬಾಗಳಾಗಿದ್ದಾರೆ? – ...

ರಾಮನ ಹೆಸರಲ್ಲಿ ಲೂಟಿ: ಪ್ರಧಾನಿ ಮೋದಿ, ಸಿಎಂ ಯೋಗಿ ಈಗ ಯಾಕೆ ಮೌನಿ ಬಾಬಾಗಳಾಗಿದ್ದಾರೆ? –   ವಿ.ಎಸ್. ಉಗ್ರಪ್ಪ 

Spread the love

ರಾಮನ ಹೆಸರಲ್ಲಿ ಲೂಟಿ: ಪ್ರಧಾನಿ ಮೋದಿ, ಸಿಎಂ ಯೋಗಿ ಈಗ ಯಾಕೆ ಮೌನಿ ಬಾಬಾಗಳಾಗಿದ್ದಾರೆ? –   ವಿ.ಎಸ್. ಉಗ್ರಪ್ಪ 

ಮಂಗಳೂರು “ಸುದೀರ್ಘ ಕಾಲದಿಂದ ಶ್ರೀರಾಮನ ಹೆಸರನ್ನು ಬಳಸಿಕೊಂಡು ರಾಜಕೀಯ ಬೆಳೆ ಬೇಯಿಸಿಕೊಂಡು ಬಂದವರೇ ಈಗ ರಾಮನ ಆಸ್ತಿಯನ್ನು ಲಪಟಾಯಿಸಲು ಮುಗಿಬಿದ್ದಿದ್ದಾರೆ. ತಮ್ಮನ್ನು ತಾವು ದೇಶಪ್ರೇಮಿಗಳು ಎಂದು ಕರೆದುಕೊಳ್ಳುವ ಬಿಜೆಪಿಯವರಿಗೆ ಕನಿಷ್ಠ ಮಾನ, ಮರ್ಯಾದೆ ಇದೆಯೇ? ಇಷ್ಟೆಲ್ಲಾ ಹಗರಣಗಳು ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೌನಿ ಬಾಬಾಗಳಂತೆ ಕುಳಿತಿರುವುದರ ಅರ್ಥವೇನು?” ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತೀವ್ರವಾಗಿ ಪ್ರಶ್ನಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಲ್ಲಿ ಆರೆಸ್ಸೆಸ್, ವಿಎಚ್‌ಪಿ ಮತ್ತು ಬಿಜೆಪಿ ಮುಖಂಡರ ಮೂಗಿನ ನೇರಕ್ಕೆ ಸಾವಿರಾರು ಕೋಟಿ ರೂಪಾಯಿ ಲೂಟಿಯಾಗಿದೆ ಎಂದು ಗಂಭೀರ ಆರೋಪ ಮಾಡಿದರು.

“ತ್ರೇತಾಯುಗದ ಇತಿಹಾಸ ನೋಡಿದರೆ ರಾಮ-ಭರತರ ಸಂಭಾಷಣೆಯಲ್ಲಿ ಭ್ರಷ್ಟಾಚಾರ ಮುಕ್ತ ರಾಜ್ಯಭಾರ ಹೇಗಿರಬೇಕು ಎಂಬುದನ್ನು ಸ್ಪಷ್ಟವಾಗಿ ಕಟ್ಟಿಕೊಡಲಾಗಿದೆ. ಯಾವ ದೇಶದಲ್ಲಿ ಭ್ರಷ್ಟಾಚಾರ ಇರುತ್ತದೋ ಆ ದೇಶ ಎಂದಿಗೂ ಉದ್ಧಾರವಾಗಲ್ಲ ಎಂದು ಮರ್ಯಾದಾ ಪುರುಷೋತ್ತಮ ಶ್ರೀರಾಮ ಹೇಳಿದ್ದಾನೆ. ರಾಮನೇ ಈ ದೇಶದ ಅಸ್ಮಿತೆ. ಆದರೆ, ಕೇಂದ್ರ ಸರ್ಕಾರವೇ ರಚಿಸಿರುವ ಈ ಟ್ರಸ್ಟ್‌ನಲ್ಲಿ ಪ್ರಧಾನಿ ಮೋದಿಯವರ ಮಾಜಿ ಸೆಕ್ರೆಟರಿ ನೃಪೇಂದ್ರ ಮಿಶ್ರಾ, ಮಾಜಿ ಅಧಿಕಾರಿ ಪ್ರಶಾಂತ್ ಲೇಖಂಡೆ ಅವರಂತಹ ಪ್ರಮುಖರಿದ್ದಾರೆ. ರಥಯಾತ್ರೆ ನಡೆಸಿ ಇಡೀ ದೇಶದ ಜನರಿಂದ ಕಲೆಕ್ಟ್ ಮಾಡಿದ ಕೋಟ್ಯಂತರ ರೂಪಾಯಿ ಹಣವನ್ನು ಇವರೆಲ್ಲ ಸೇರಿ ಲೂಟಿ ಹೊಡೆದಿದ್ದಾರೆ. ಈ ಲೂಟಿಯಲ್ಲಿ ಕರ್ನಾಟಕದ ಪ್ರಚಾರಕ್ ಗೋಪಾಲ ರಾವ್ ಎಂಬವರಿಗೂ ಪಾಲಿದೆ ಎಂಬ ಮಾಹಿತಿ ಇದೆ” ಎಂದು ಉಗ್ರಪ್ಪ ದೂರಿದರು.

“ಹಿಂದೆ ರೈಲು ಅಪಘಾತವಾದಾಗ ನೈತಿಕ ಹೊಣೆ ಹೊತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ತಮ್ಮದೇ ಮೂಗಿನ ನೇರಕ್ಕೆ ರಾಮನ ಹೆಸರಲ್ಲಿ ಇಷ್ಟೊಂದು ದೊಡ್ಡ ಲೂಟಿಯಾಗಿದ್ದರೂ ಪ್ರಧಾನಿ ಮೋದಿ, ಸಿಎಂ ಯೋಗಿ ಮತ್ತು ಗೃಹ ಸಚಿವ ಅಮಿತ್ ಷಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿಲ್ಲ. ತಕ್ಷಣವೇ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು” ಎಂದು ಅವರು ಆಗ್ರಹಿಸಿದರು.

ಇದೇ ವೇಳೆ ರಾಜ್ಯದ ಹೆಚ್ಚುವರಿ ಮೀಸಲಾತಿ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವನ್ನು ಉಗ್ರಪ್ಪ ತರಾಟೆಗೆ ತೆಗೆದುಕೊಂಡರು. “2025ರ ಬೆಳಗಾವಿ ಅಧಿವೇಶನದಲ್ಲಿ ಸಿದ್ಧರಾಮಯ್ಯ ಸರ್ಕಾರವು ಒಬಿಸಿ, ಎಸ್ಸಿ-ಎಸ್ಟಿ ಸಮುದಾಯಗಳ ಹೆಚ್ಚುವರಿ ಮೀಸಲಾತಿ ತಿದ್ದುಪಡಿಯನ್ನು ಸರ್ವಾನುಮತದಿಂದ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ, ಕೇಂದ್ರ ಸರ್ಕಾರ ಇದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸದೇ ಬಾಕಿ ಉಳಿಸಿಕೊಂಡಿದೆ. ಇದರಿಂದಾಗಿ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ 75 ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆಯಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಎರಡು ಸಾವಿರಕ್ಕೂ ಹೆಚ್ಚು ಉದ್ಯೋಗ ನಷ್ಟವಾಗುತ್ತಿದೆ. ಈ ಸಾಮಾಜಿಕ ಅನ್ಯಾಯವನ್ನು ಸರಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ತಕ್ಷಣವೇ ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿ ಬಳಿಗೆ ಕೊಂಡೊಯ್ಯಬೇಕು” ಎಂದು ಒತ್ತಾಯಿಸಿದರು.


Spread the love

Exit mobile version