ಮಹಾರುದ್ರಯಾಗ ಪೂರ್ಣಾಹುತಿ: ಕೊಡವೂರಿನಲ್ಲಿ ಭಕ್ತಿಭಾವದ ಸಂಭ್ರಮ
ಉಡುಪಿ: ಕೊಡವೂರುದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಆಯೋಜಿಸಲಾಗಿದ್ದ ಮಹಾರುದ್ರಯಾಗದ ಪೂರ್ಣಾಹುತಿ ಮಂಗಳವಾರ ಬೆಳಿಗ್ಗೆ ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ವೇದಮೂರ್ತಿ ಹಯವದನ ತಂತ್ರಿಗಳು ಪುತ್ತೂರು, ಮಧುಸೂದನ ತಂತ್ರಿಗಳು, ಸುಬ್ರಹ್ಮಣ್ಯ ಭಟ್ ಹಾಗೂ ವಾದಿರಾಜ ತಂತ್ರಿಗಳ ನೇತೃತ್ವದಲ್ಲಿ ಯಾಗದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಾಲಯದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಅಗ್ನಿಕುಂಡಗಳಲ್ಲಿ ಹೋಮ–ಹವನಗಳು ಜರುಗಿದರೆ, ಪುರೋಹಿತರಿಂದ ವೇದಮಂತ್ರ ಪಠಣ ನೆರವೇರಿತು. ಬಳಿಕ ಕಲಶಾಭಿಷೇಕ, ಪಲ್ಲಪೂಜೆ ಹಾಗೂ ಮಹಾಪೂಜೆ ನಡೆಯಿತು.
ಮಹಾರುದ್ರಯಾಗದ ಕಾರ್ಯಾಧ್ಯಕ್ಷ ಹಾಗೂ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ದಂಪತಿ ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ದಂಪತಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಸಂಜೆ ದೀಪಾರಾಧನೆ, ಪೂರ್ವಕರಂಗ ಪೂಜೆ ಹಾಗೂ ರಂಗಪೂಜೆ ಬಲಿ ಕಾರ್ಯಕ್ರಮಗಳು ನಡೆಯಲಿವೆ.
ಸಮಾರೋಪ ಸಮಾರಂಭದಲ್ಲಿ ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬಳಿಕ ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ‘ಶಿವಗಾನ ಭಕ್ತಿ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ.