ವಾರಾಹಿ ನೀರಿಗಾಗಿ ಪಾದಯಾತ್ರೆ ಯಶಸ್ವಿಗೊಳಿಸಿ – ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ವಂಡ್ಸೆ ಮತ್ತು ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಇವರ ಸಹಯೋಗದಲ್ಲಿ ಮಾಜಿ ಶಾಸಕರಾದ ಕೆ ಗೋಪಾಲ ಪೂಜಾರಿಯವರ ನೇತೃತ್ವದಲ್ಲಿ ಮಾರ್ಚ್ 3 ಮತ್ತು4 ನೇ ತಾರೀಕಿನಂದು ನಡೆಯುವ ವಾರಾಹಿ ಬಲದಂಡೆ ಯೋಜನೆ ಅನುಷ್ಠಾನ ಮತ್ತು ಸಿದ್ದಾಪುರ ಮತ್ತು ಸೌಕೂರು ಏತ ನೀರಾವರಿಯಲ್ಲಿ ಬಿಟ್ಟು ಹೋದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಸರ್ಕಾರದ ಗಮನ ಸೆಳೆಯಲು ಕೈಗೊಂಡಿರುವ ಪಾದಯಾತ್ರೆಯಲ್ಲಿ ವಾರಾಹಿ ನದಿ ನೀರನ್ನು ಕುಡಿಯಲು ಮತ್ತು ಕೃಷಿಗೆ ಬಳಸುವ ಹಾಗೂ ಬಲದಂಡೆ ಯೋಜನೆಯ ಫಲಾನುಭವಿ ರೈತ ಬಂಧುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಮನವಿ ಮಾಡಿದ್ದಾರೆ.
1979 ರಲ್ಲಿ ಅಂದಿನ ಮುಖ್ಯಮಂತ್ರಿ ದಿವಂಗತ ಗುಂಡೂರಾವ್ ರವರು ವಾರಾಹಿ ನೀರಾವರಿ ಯೋಜನೆಗೆ ಶಂಖುಸ್ಥಾಪನೆ ಮಾಡಿ ಸುಮಾರು ನಾಲ್ಕು ದಶಕಗಳೇ ಕಳೆದು ಅದೆಷ್ಟೋ ಜನಪ್ರತಿನಿದಿನಗಳು ಅಧಿಕಾರ ಅನುಭವಿಸಿದರೂ ಸಹ ಇಂದಿಗೂ ವಾರಾಹಿ ಬಲದಂಡೆ ಯೋಜನೆ ಕಾಮಗಾರಿ ಇಂದಿಗೂ ಪ್ರಾರಂಭವಾಗದೆ ಇರುವ ಹಿನ್ನೆಲೆಯಲ್ಲಿ ಹಾಗೂ ಸಿದ್ದಾಪುರ ಏತ ನೀರಾವರಿ ಯೋಜನೆ ಹಾದುಹೋಗುವ ಪ್ರದೇಶಗಳಲ್ಲಿ ಹೆಚ್ಚಿನ ಭಾಗಕ್ಕೆ ನೀರಿನ ಸೌಲಭ್ಯ ನೀಡದೆ ಕೃಷಿಕರನ್ನು, ಕುಡಿಯುವ ನೀರು ಬೇಡಿಕೆದಾರರನ್ನು ವಂಚಿಸಿ ಕಾಟಾಚಾರಕ್ಕೆ ನಡೆಸುತ್ತಿರುವ ಕಾಮಗಾರಿ ವಿರುದ್ದ ಮಾಜಿ ಶಾಸಕರಾದ ಗೋಪಾಲ ಪೂಜಾರಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಬ್ರಹತ್ ಪಾದಯಾತ್ರೆಯಲ್ಲಿ ವಾರಾಹಿ ನದಿ ಪಾತ್ರದ ರೈತರು ಹಾಗೂ ಕುಡಿಯುವ ನೀರು ಬಳಕೆದಾರರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಒಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅವರು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.
