ಪ್ರಕಾಶ್ರಾಜ್ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ
- ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಅ.31ರಂದು ವಿವಿಧ ಸಮುದಾಯಗಳ ಸ್ನೇಹ ಸಮಾವೇಶ
ಉಡುಪಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ ಗಣ್ಯರನ್ನು ಗುರುತಿಸಿ ಕೊಡಲಾಗುವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಿವಿಧ ಸಮುದಾಯಗಳ ಸ್ನೇಹ ಸಮಾವೇಶವನ್ನು ಅ.೩೧ರಂದು ಸಂಜೆ ೬.೩೦ಕ್ಕೆ ಉಡುಪಿಯ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ಒಕ್ಕೂಟದ ನೂತನ ಕಚೇರಿಯಲ್ಲಿ ಬುಧವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಮೌಲಾ ಹಾಗೂ ನಿಕಟಪೂರ್ವ ಅಧ್ಯಕ್ಷ ಯಾಸೀನ್ ಮಲ್ಪೆ ಈ ಕುರಿತು ಮಾಹಿತಿ ನೀಡಿದರು.

ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಒಕ್ಕೂಟವು ಪ್ರತಿ ಎರಡು ವರ್ಷಗಳಿಗೊಮ್ಮೆ ಮಾನವ ರತ್ನ’, ಸೇವಾ ರತ್ನ’ ಹಾಗೂ ಸೌಹಾರ್ದ ರತ್ನ’ ಎಂಬ ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದ್ದು, ೨೦೨೫- ೨೦೨೬ನೇ ಸಾಲಿನ ಪ್ರಶಸ್ತಿಗಳಿಗೆ ಕ್ರಮವಾಗಿ ಬಹುಭಾಷಾ ಚಿತ್ರನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ರಾಜ್, ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಕೊಡುಗೈದಾನಿ ಹಿದಾಯತುಲ್ಲಾ ಅಬ್ಬಾಸ್ ಮತ್ತು ಹಿರಿಯ ಹೋರಾಟಗಾರ, ಲೇಖಕ ಹಾಗೂ ಚಿಂತಕ ಸುರೇಶ್ ಭಟ್ ಬಾಕ್ರಬೈಲು ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವರು ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಗಣ್ಯರ ಸಮ್ಮುಖದಲ್ಲಿ ಮೂವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳಾದ ಹಂಗಾರಕಟ್ಟೆ ಇಬ್ರಾಹಿಂ ಸಾಹೇಬ್, ಚಂದ್ರಶೇಖರ ಶೆಟ್ಟಿ ಕುಂದಾಪುರ, ಬಿಪಿನ್ ಚಂದ್ರಪಾಲ್ ಕಾರ್ಕಳ, ಗೀತಾ ಸುರೇಶ್ ಕುಮಾರ್, ಜೆರಾಲ್ಡ್ ಪಿಂಟೋ, ಫಾತಿಮಾ ರಲಿಯಾ ಅವರನ್ನು ಸನ್ಮಾನಿಸಲಾಗುವುದು.
ಆರು ವರ್ಷಗಳ ಹಿಂದೆ ಈ ಪ್ರಶಸ್ತಿಗಳನ್ನು ಆರಂಭಿಸಿದ್ದು, ೨೦೧೯-೨೦೨೦ನೆ ಸಾಲಿನಲ್ಲಿ ಜಿ.ರಾಜಶೇಖರ್ ಅವರಿಗೆ ಮಾನವ ರತ್ನ ಮತ್ತು ಎನ್. ಇಸ್ಮಾಯಿಲ್ ಅವರಿಗೆ ಸೇವಾ ರತ್ನ, ೨೦೨೧-೨೨ನೆ ಸಾಲಿನಲ್ಲಿ ಗೋಪಾಲ ಬಿ.ಶೆಟ್ಟಿ ಅವರಿಗೆ ಮಾನವ ರತ್ನ ಮತ್ತು ಹಾಜಿ ಅಬ್ದುಲ್ಲಾ ಪರ್ಕಳ ಅವರಿಗೆ ಸೇವಾ ರತ್ನ ಹಾಗೂ ೨೦೨೩-೨೪ನೆ ಸಾಲಿನಲ್ಲಿ ಸಸಿಕಾಂತ್ ಸೆಂಥಿಲ್ ಅವರಿಗೆ ಮಾನವ ರತ್ನ, ಫಾ.ವಿಲಿಯಂ ಮಾರ್ಟಿಸ್ ಅವರಿಗೆ ಸೌಹಾರ್ದ ರತ್ನ, ನಿರ್ಸಾ ಅಹ್ಮದ್ ಅವರಿಗೆ ಸೇವಾ ರತ್ನ ಪ್ರಶಸ್ತಿ ನೀಡಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.
ಕಳೆದ ೨೫ ವರ್ಷಗಳಿಂದ ಸಾಮಾಜಿಕ ಸೇವೆ, ಸಮುದಾಯದ ಏಕತೆ ಹಾಗೂ ವಿವಿಧ ಧರ್ಮಗಳ ನಡುವಿನ ಸೌಹಾರ್ದ ಮತ್ತು ಸಹಬಾಳ್ವೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ತನ್ನ ಸಾರ್ಥಕ ಪ್ರಯಾಣದ ೨೫ ವರ್ಷಗಳನ್ನು ಪೂರೈಸುತ್ತಿದೆ. ಒಕ್ಕೂಟಕ್ಕೆ ಸ್ವಂತ ಹಾಗೂ ವಿಶಾಲವಾದ ಕಚೇರಿ ಮತ್ತು ಸಭಾಂಗಣ ಹೊಂದಬೇಕೆಂಬುದು ಹಲವು ವರ್ಷಗಳ ಕನಸಾಗಿತ್ತು. ದಾನಿಗಳ ಉದಾರ ಸಹಕಾರ, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ಹಿತೈಷಿಗಳ ನಿರಂತರ ಪರಿಶ್ರಮದ ಫಲವಾಗಿ, ಒಕ್ಕೂಟದ ೨೫ನೇ ವರ್ಷದ ಈ ಐತಿಹಾಸಿಕ ಸಂದರ್ಭದಲ್ಲಿ ಆ ಕನಸು ನನಸಾಗಿದೆ.
ಉಡುಪಿ ನಗರದ ಹೃದಯಭಾಗದಲ್ಲಿರುವ ಜಾಮಿಯಾ ಮಸೀದಿ ಸಮೀಪದ ವಿ.ಕೆ.ಪ್ಯಾರಡೈಸ್ ಕಟ್ಟಡದಲ್ಲಿ ಒಕ್ಕೂಟವು ತನ್ನ ಸ್ವಂತ ಕಚೇರಿಯನ್ನು ಸ್ಥಾಪಿಸಿದೆ. ನೂತನ ಕಚೇರಿಯನ್ನು ಅ.೪ರಂದು ರಾಜ್ಯ ವಕ್ಫ್, ಹಜ್, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಒಕ್ಕೂಟದ ಪದಾಧಿಕಾರಿಗಳು ಹಾಗೂ ಹಿರಿಯರ ಸಮ್ಮುಖದಲ್ಲಿ ಉದ್ಘಾಟಿಸಿದರು. ಸ್ವಂತ ಕಚೇರಿ ಹಾಗೂ ಸಭಾಂಗಣದ ಕನಸು ನನಸಾಗಿರುವುದು ಒಕ್ಕೂಟದ ೨೫ ವರ್ಷಗಳ ಸೇವಾ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷರಾದ ಶಭೀ ಅಹ್ಮದ್ ಖಾಝಿ, ನಸೀರ್ ಅಹ್ಮದ್ ಕಾರ್ಕಳ, ಸಯ್ಯದ್ ಫರೀದ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ, ಕಾರ್ಯದರ್ಶಿ ಜಫ್ರುಲ್ಲಾ ತೋನ್ಸೆ, ಖಜಾಂಚಿ ಇಕ್ಬಾಲ್ ಎಸ್.ಕೆ., ಸಂಘಟನಾ ಕಾರ್ಯದರ್ಶಿ ಜಮೀರ್ ಮೌಲಾನಾ, ಜಿಲ್ಲಾ ಸದಸ್ಯ ಪೀರು ಸಾಹೇಬ್, ಮಾಜಿ ಅಧ್ಯಕ್ಷ ಅಶ್ಪಕ್ ಅಹ್ಮದ್ ಹಾಗೂ ಟಿ.ಎಸ್.ಅನ್ಸಾರ್ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರ ಪರಿಚಯ
ಪ್ರಕಾಶ್ ರಾಜ್ ಅವರ ಮೂಲ ಹೆಸರು ಪ್ರಕಾಶ್ ರೈ. ರಂಗಭೂಮಿಯ ಮೂಲಕ ಕಲಾ ಕ್ಷೇತ್ರಕ್ಕೆ ಪ್ರವೇಶಿಸಿದ ಅವರು ಬಳಿಕ ಕನ್ನಡ ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡರು. ನಂತರ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಗಳ ನೂರಾರು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡರು. ಅವರ ಅಭಿನಯಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ.
ಕಲಾವಿದರಾಗಿ ಮಾತ್ರವಲ್ಲದೆ, ಸಾಮಾಜಿಕ ಹಾಗೂ ಸಾರ್ವಜನಿಕ ಬದುಕಿನ ವಿಚಾರಗಳಲ್ಲಿ ತಮ್ಮ ನೇರ ಮತ್ತು ಸ್ಪಷ್ಟ ನಿಲುವುಗಳಿಗೂ ಅವರು ಹೆಸರುವಾಸಿಯಾಗಿದ್ದಾರೆ. ಯಾವುದೇ ರೀತಿಯ ಕೋಮುವಾದವನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿರುವ ಪ್ರಕಾಶ್ರಾಜ್, ಜನಸಾಮಾನ್ಯರು, ಅಲ್ಪಸಂಖ್ಯಾತರು, ಕಾರ್ಮಿಕರು, ರೈತರು, ಆದಿವಾಸಿಗಳು ಹಾಗೂ ಮಹಿಳೆಯರ ಹಕ್ಕುಗಳು ಮತ್ತು ನ್ಯಾಯದ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದಾರೆ.
ಮತದಾನ ಪ್ರತಿಯೊಬ್ಬ ನಾಗರಿಕನ ಹಕ್ಕು ಎಂಬ ಅರಿವು ಮೂಡಿಸುವುದು ಸೇರಿದಂತೆ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ಅವರು ಸಕ್ರಿಯರಾಗಿದ್ದಾರೆ. ಸದ್ಯ ಎಸ್ ಐ ರ್ಆ ವಿಷಯದಲ್ಲಿ ಆಗುತ್ತಿರುವ ಅನ್ಯಾಯಗಳ ವಿರುದ್ಧ ಬೀದಿಗಿಳಿದು ಹೋರಾಡುತ್ತಿದ್ದಾರೆ.ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಹಾಗೂ ಮಾನವೀಯ ಮೌಲ್ಯಗಳ ಪರವಾಗಿ ಅವರು ನಿರಂತರವಾಗಿ ವ್ಯಕ್ತಪಡಿಸುತ್ತಿರುವ ಬದ್ಧತೆಯನ್ನು ಪರಿಗಣಿಸಿ ಅವರನ್ನು ೨೦೨೫-೨೦೨೬ ನೇ ಸಾಲಿನ ಮಾನವ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇಂದು ಹಿದಾಯತ್ ಗ್ರೂಪ್ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅವರು ಉದ್ಯಮಿಯಾಗಿ ಯಶಸ್ಸು ಸಾಧಿಸುವುದರ ಜೊತೆಗೆ ಸೇವಾ ಕ್ಷೇತ್ರದಲ್ಲಿಯೂ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಹಲವು ಸಂಘ-ಸಂಸ್ಥೆಗಳಿಗೆ ಪೋಷಕರಾಗಿ ಹಾಗೂ ಬೆನ್ನೆಲುಬಾಗಿ ನಿಂತಿರುವ ಅವರು, ಸಮಾಜದ ಒಳಿತಿಗಾಗಿ ತಮ್ಮ ಸಂಪನ್ಮೂಲಗಳನ್ನು ಉದಾರವಾಗಿ ವಿನಿಯೋಗಿಸುತ್ತಿದ್ದಾರೆ. ರಾಜ್ಯಾದ್ಯಂತ, ಅದರಲ್ಲೂ ವಿಶೇಷವಾಗಿ ಉಡುಪಿ ಜಿಲ್ಲೆಯಲ್ಲಿ, ಅವರ ಸಹಕಾರದಿಂದ ಅನೇಕ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಂಸ್ಥೆಗಳು ತಮ್ಮ ಸೇವಾ ಕಾರ್ಯಗಳನ್ನು ಮುಂದುವರಿಸುತ್ತಿವೆ.
ಉದ್ಯಮದ ಯಶಸ್ಸಿನೊಂದಿಗೆ ಸಮಾಜಕ್ಕೆ ಮರಳಿ ನೀಡುವ ಜವಾಬ್ದಾರಿಯನ್ನೂ ಅಳವಡಿಸಿಕೊಂಡಿರುವ ಅವರ ಸೇವಾ ಮನೋಭಾವವನ್ನು ಗುರುತಿಸಿ ಸೇವಾ ರತ್ನ’ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ಸುರತ್ಕಲ್ನ ಎನ್ಐಟಿಕೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಶಿಕ್ಷಣ ಪಡೆದ ಅವರು, ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಬಳಿಕ ನಿವೃತ್ತಿ ಜೀವನವನ್ನು ಸಂಪೂರ್ಣವಾಗಿ ಸಾಮಾಜಿಕ ಚಟುವಟಿಕೆಗಳಿಗೆ ಸಮರ್ಪಿಸಿಕೊಂಡರು.
ಕಳೆದ ಸುಮಾರು ಎರಡು ದಶಕಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವರು ನಡೆಸಿಕೊಂಡು ಬಂದಿರುವ ಕೋಮುವಾದ ವಿರೋಧಿ ಹೋರಾಟ, ಸೌಹಾರ್ದ ಮತ್ತು ಸಹಬಾಳ್ವೆಗಾಗಿ ಸಲ್ಲಿಸಿರುವ ನಿರಂತರ ಹಾಗೂ ನಿಸ್ವಾರ್ಥ ಸೇವೆ, ಅಧ್ಯಯನ, ಸಂಶೋಧನೆ ಮತ್ತು ಬರಹಗಳು ಸಾಮಾಜಿಕ ಕಾರ್ಯಕರ್ತರಿಗೆ ಮಾದರಿಯಾಗಿವೆ.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷರಾಗಿ, ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಸೇರಿದಂತೆ ಹಲವರೊಂದಿಗೆ ಅವರು ನಡೆಸಿದ ಕೋಮುವಾದ ವಿರೋಧಿ ಹೋರಾಟ ಗಮನಾರ್ಹ ವಾದುದು. ಲೇಖಕರಾಗಿಯೂ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಹಲವು ಅಮೂಲ್ಯ ಕೃತಿಗಳನ್ನು ರಚಿಸಿರುವ ಅವರು, ಹಿರಿಯ ಚಿಂತಕರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕರಾವಳಿ ಪ್ರದೇಶದಲ್ಲಿ ಕೋಮುವಾದದ ಪರಿಣಾಮಗಳನ್ನು ಆಳವಾಗಿ ಅಧ್ಯಯನ ಮಾಡಿ ದಾಖಲಿಸಿರುವುದು ಅವರ ಸಾಮಾಜಿಕ ಬದ್ಧತೆಯ ಮತ್ತೊಂದು ಪ್ರಮುಖ ಆಯಾಮವಾಗಿದೆ.