ಮಂಚಿ ಕುಮೇರಿಯ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಯತ್ನ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಉಡುಪಿ: ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಉಡುಪಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಂಚಿ ಕುಮೇರಿ ನಿವಾಸಿ ರಮಾನಾಥ ರೈ ಅವರ ಪತ್ನಿ ಸುಮತಿ ಅವರನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣ ಇದಾಗಿದೆ. ರಮಾನಾಥ ರೈ ಅವರು ಮಣಿಪಾಲದ ಟೈಗರ್ ಸರ್ಕಲ್ ಬಳಿ ನಂದಿನಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದರು. 2022ರ ಫೆಬ್ರವರಿ 18 ರಂದು ಅವರು ಅಂಗಡಿಗೆ ತೆರಳಿದ್ದ ವೇಳೆ ಮನೆಯಲ್ಲಿ ಸುಮತಿ ಮಾತ್ರ ಇದ್ದು, ಸಂಜೆ ಸುಮಾರು 7:15ರ ಸುಮಾರಿಗೆ ಸುಮತಿಯವರ ಅಕ್ಕನ ಮಗ ಮಿಥುನ್ ಹಾಗೂ ಅವನ ಸ್ನೇಹಿತ ನಾಗೇಶ್ ಮನೆಗೆ ಬಂದು, ಪರಿಚಯದ ಕಾರಣದಿಂದ ಸುಮತಿ ಬಾಗಿಲು ತೆರೆಯುತ್ತಿದ್ದಂತೆ ಇಬ್ಬರು ಒಳನುಗ್ಗಿ, ಅವರನ್ನು ಗಟ್ಟಿಯಾಗಿ ಹಿಡಿದು ಕುತ್ತಿಗೆ ಹಿಸುಕಿದರು. ಇದರಿಂದ ಸುಮತಿ ಪ್ರಜ್ಞೆ ಕಳೆದುಕೊಂಡರು. ನಂತರ ಅವರನ್ನು ಚೀಲದಲ್ಲಿ ಹಾಕಿ ಸೂಟ್ಕೇಸ್ನಲ್ಲಿ ತುಂಬಿಸಿ ಸ್ಥಳಾಂತರಿಸಲು ಯತ್ನಿಸಿದರು.
ಈ ವೇಳೆ ಮನೆಗೆ ಬಂದ ರಮಾನಾಥ ರೈ ಹಾಗೂ ಸ್ಥಳೀಯರು ಬಾಗಿಲು ತಟ್ಟಿದಾಗ ಆರೋಪಿಗಳು ಬಾಗಿಲು ತೆರೆಯದೇ ಓಡಿಹೋಗಲು ಪ್ರಯತ್ನಿಸಿದರು. ಆದರೆ ಸ್ಥಳದಲ್ಲಿದ್ದ ಸಾರ್ವಜನಿಕರು ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಬಳಿಕ ಸೂಟ್ಕೇಸ್ ತೆರೆಯುವಾಗ ಸುಮತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಒಂದು ವಾರ ಚಿಕಿತ್ಸೆ ಪಡೆದ ಬಳಿಕ ಅವರು ಚೇತರಿಸಿಕೊಂಡರು.
ಈ ಕುರಿತು ನೀಡಲಾದ ದೂರಿನ ಮೇರೆಗೆ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಅಂದಿನ ಪೊಲೀಸ್ ಉಪನಿರೀಕ್ಷಕರಾದ ರಾಜಶೇಖರ ವಂದಲಿ ರವರು ಆರೋಪಿತರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 449, 325, 307 ಹಾಗೂ 34ರಡಿ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣವರ್ ಅವರು ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ, ಮಿಥುನ್ ಮತ್ತು ನಾಗೇಶ್ ಅವರಿಗೆ ಕಲಂ 449 ಮತ್ತು 307ರಡಿ ಜೀವಾವಧಿ ಶಿಕ್ಷೆ ಹಾಗೂ ತಲಾ ₹20,000 ದಂಡ ವಿಧಿಸಿದರು. ಜೊತೆಗೆ ಕಲಂ 325ರಡಿ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ₹5,000 ದಂಡ ವಿಧಿಸಿದರು.
ಆರೋಪಿಗಳಿಂದ ವಸೂಲಾದ ದಂಡದ ಮೊತ್ತದಲ್ಲಿ ₹45,000 ಅನ್ನು ಗಾಯಾಳು ಸುಮತಿ ಅವರಿಗೆ ಪರಿಹಾರವಾಗಿ ನೀಡಲು ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಜಯರಾಮ ಶೆಟ್ಟಿ ವಾದ ಮಂಡಿಸಿದರು.
