ಕ್ಯೂಎಸ್ ಏಷ್ಯಾ ವಿಶ್ವವಿದ್ಯಾನಿಲಯ ಶ್ರೇಯಾಂಕದಲ್ಲಿ ಮಂಗಳೂರು ವಿವಿಗೆ 901-950ರ ಸ್ಥಾನ
ಮಂಗಳೂರು: ನವೆಂಬರ್ 3, 2026ರಂದು ಪ್ರಕಟಗೊಂಡ ಕ್ಯೂಎಸ್ ಏಷ್ಯಾ ವಿಶ್ವವಿದ್ಯಾನಿಲಯ ಶ್ರೇಯಾಂಕ-2027ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು 901-950ರ ಶ್ರೇಣಿಯಲ್ಲಿ ಸ್ಥಾನ ಪಡೆದಿದೆ. ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಪೈಕಿ ಮಂಗಳೂರು ವಿಶ್ವವಿದ್ಯಾನಿಲಯವು ಎರಡನೇ ಸ್ಥಾನ ಗಳಿಸಿದೆ.
ದಕ್ಷಿಣ ಏಷ್ಯಾ ಮಟ್ಟದಲ್ಲಿ 287ನೇ ಹಾಗೂ ಭಾರತದಲ್ಲಿ 153ನೇ ಸ್ಥಾನವನ್ನು ಮಂಗಳೂರು ವಿಶ್ವವಿದ್ಯಾನಿಲಯ ಪಡೆದುಕೊಂಡಿದೆ. ಇದೇ ಶ್ರೇಯಾಂಕದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು 801-850ರ ಶ್ರೇಣಿಯಲ್ಲಿ ಸ್ಥಾನ ಪಡೆದಿದ್ದು, ಬೆಂಗಳೂರು ವಿಶ್ವವಿದ್ಯಾನಿಲಯವು ಮಂಗಳೂರು ವಿವಿಯ ಸಮಾನ ಶ್ರೇಣಿಯಲ್ಲಿದೆ.
ಈ ಬಾರಿ ಭಾರತದ ಒಟ್ಟು 325 ವಿಶ್ವವಿದ್ಯಾನಿಲಯಗಳು ಶ್ರೇಯಾಂಕ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ಕ್ಯೂಎಸ್ ಶ್ರೇಯಾಂಕವು ಉನ್ನತ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಖ್ಯಾತಿ, ಸಂಶೋಧನಾ ಸಾಧನೆ, ಬೋಧನೆಯ ಗುಣಮಟ್ಟ, ಉದ್ಯೋಗಾವಕಾಶಗಳು ಮತ್ತು ಅಂತರರಾಷ್ಟ್ರೀಕರಣ ಸೇರಿದಂತೆ ವಿವಿಧ ಮಾನದಂಡಗಳನ್ನು ಆಧರಿಸಿ ಮೌಲ್ಯಮಾಪನ ಮಾಡುತ್ತದೆ.
ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್ಡಿ ಪದವಿ ಹೊಂದಿರುವ ಬೋಧಕ ಸಿಬ್ಬಂದಿಯ ಪ್ರಮಾಣ ಹಾಗೂ ಸ್ಕೋಪಸ್ ದತ್ತಾಂಶದಲ್ಲಿ ಸೂಚ್ಯಂಕಿತಗೊಂಡಿರುವ ಪ್ರತಿ ಅಧ್ಯಾಪಕರ ಸಂಶೋಧನಾ ಪ್ರಕಟಣೆಗಳ ಸಂಖ್ಯೆಯಂತಹ ಪ್ರಮುಖ ಮಾನದಂಡಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಈ ಸಾಧನೆಯು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಪ್ರತಿಬಿಂಬಿಸಿದೆ.
