ಮಂಗಳೂರು: ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶೀಯರ ಪತ್ತೆ
ಮಂಗಳೂರು: ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಪಣಂಬೂರು ಬೀಚ್ ಸಮೀಪದ ರೆಸ್ಟೋರೆಂಟ್ ಒಂದರಲ್ಲಿ ಬಾಂಗ್ಲಾದೇಶದ ಇಬ್ಬರು ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಣಂಬೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ರೆಸ್ಟೋರೆಂಟ್ಗೆ ದಾಳಿ ನಡೆಸಿ, ಅಲ್ಲಿ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶದ ಪ್ರಜೆಗಳಾದ ಅಶಿಕುಲ್ ಇಸ್ಲಾಂ ಮತ್ತು ಎಂಡಿ ಅಮೀನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಇಬ್ಬರೂ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದು ಬೆಳಕಿಗೆ ಬಂದಿದೆ. ಮುಂದಿನ ಕಾನೂನು ಪ್ರಕ್ರಿಯೆಯ ಭಾಗವಾಗಿ ಅವರನ್ನು ಅಕ್ರಮ ವಲಸಿಗರ ಬಂಧನ ಕೇಂದ್ರದಲ್ಲಿರಿಸಿ, ಬಳಿಕ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಮುಂದೆ ಹಾಜರುಪಡಿಸಲು ಹಾಗೂ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಕೈಗೊಳ್ಳಲು ಪಣಂಬೂರು ಪೊಲೀಸ್ ಠಾಣೆಯಲ್ಲಿ ಕ್ರಮ ಆರಂಭಿಸಲಾಗಿದೆ.
ಪಣಂಬೂರು ಪೊಲೀಸ್ ಇನ್ಸ್ಪೆಕ್ಟರ್ ಸಲೀಂ ಅಬ್ಬಾಸ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಶ್ರೀಕಲಾ ಕೆ.ಟಿ., ಜ್ಞಾನಶೇಖರ ಹಾಗೂ ಸಿಬ್ಬಂದಿಗಳಾದ ಇಮ್ತಿಯಾಝ್ ಫಕ್ಕಿರೇಶ್ ಮತ್ತು ರಾಕೇಶ್ ಎಲ್.ಎಂ. ಭಾಗವಹಿಸಿದ್ದರು.
