ಮಂಗಳೂರು: ದ್ವಿಚಕ್ರ ವಾಹನ ಕಳವು ಪ್ರಕರಣ; ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕರು ಸೇರಿದಂತೆ 7 ಆರೋಪಿಗಳು ವಶಕ್ಕೆ
ಮಂಗಳೂರು: ಮಂಗಳೂರು ನಗರ ದಕ್ಷಿಣ ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಆರು ದ್ವಿಚಕ್ರ ವಾಹನ ಕಳವು ಪ್ರಕರಣಗಳನ್ನು ಪೊಲೀಸರು ಪತ್ತೆಹಚ್ಚಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಮೂವರು ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕರಾಗಿದ್ದಾರೆ. ಕಳವು ಮಾಡಲಾಗಿದ್ದ ಆರು ದ್ವಿಚಕ್ರ ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ ಮೂರು ವಾಹನಗಳು ಸೇರಿದಂತೆ ಒಟ್ಟು ಒಂಬತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಅಂದಾಜು ಮೌಲ್ಯ ₹4.50 ಲಕ್ಷವಾಗಿದೆ.
ಬಂಧಿತರನ್ನು ಮಹಮ್ಮದ್ ಸಿಯಾಮ್ (19), ಮುಹಮ್ಮದ್ ನಾಸೀಫ್ ಅಲಿಯಾಸ್ ನಸೀಫ್ (19), ಮೊಹಮ್ಮದ್ ರಾಹೀಲ್ (18) ಹಾಗೂ ನಿಖೀಲ್ (18) ಎಂದು ಗುರುತಿಸಲಾಗಿದೆ. ಮಹಮ್ಮದ್ ಸಿಯಾಮ್ ಮತ್ತು ಮೊಹಮ್ಮದ್ ರಾಹೀಲ್ ಮಂಗಳೂರಿನ ವಾಮಂಜೂರು ಮೂಡುಶೆಡ್ಡೆ ಗ್ರಾಮದ ಶಿವನಗರದ ನಿವಾಸಿಗಳಾಗಿದ್ದು, ಮುಹಮ್ಮದ್ ನಾಸೀಫ್ ಜೋಕಟ್ಟೆಯ ನಿವಾಸಿ. ನಿಖೀಲ್ ಮಂಗಳೂರಿನ ತಿರುವೈಲು, ಸದಾಶಿವನಗರದ ನಿವಾಸಿಯಾಗಿದ್ದಾನೆ. ಉಳಿದ ಮೂವರು ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕರಾಗಿದ್ದಾರೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾ ಜಂಕ್ಷನ್ನ ಡಾನ್ ಬಾಸ್ಕೋ ಹಾಸ್ಟೆಲ್ ಬಳಿ ಅಕ್ಟೋಬರ್ 12ರಂದು ನಿಲ್ಲಿಸಿದ್ದ ಕೆಟಿಎಂ ಡ್ಯೂಕ್ ಬೈಕ್, ಅಕ್ಟೋಬರ್ 19ರಂದು ಜಪ್ಪು ಮಾರ್ಕೆಟ್ ಬಳಿ ನಿಲ್ಲಿಸಿದ್ದ ಯಮಹಾ ಎಫ್ಝಡ್ ಬೈಕ್, ಅಕ್ಟೋಬರ್ 21ರಂದು ಅತ್ತಾವರದ ಕೆಎಂಸಿ ಆಸ್ಪತ್ರೆ ಬಳಿಯ ದುರ್ಗಾ ಹೋಟೆಲ್ ಎದುರು ನಿಲ್ಲಿಸಿದ್ದ ಬಜಾಜ್ ಡಿಸ್ಕವರ್ ಬೈಕ್ ಹಾಗೂ ಅಕ್ಟೋಬರ್ 22ರಂದು ಹೊಯಿಗೆ ಬಜಾರ್ನ ಭಗವತಿ ಅಪಾರ್ಟ್ಮೆಂಟ್ ಕೆಳಗೆ ನಿಲ್ಲಿಸಿದ್ದ ಕೆಟಿಎಂ ಡ್ಯೂಕ್ ಬೈಕ್ ಕಳವಾಗಿದ್ದವು.
ಅದೇ ರೀತಿ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ ಬಳಿ ಅಕ್ಟೋಬರ್ 18ರಂದು ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಬುಲೆಟ್ ಹಾಗೂ ಕುತ್ತಾರ್ ಪಂಡಿತ್ ಹೌಸ್ ಬಳಿ ಅಕ್ಟೋಬರ್ 21ರಂದು ನಿಲ್ಲಿಸಿದ್ದ ಯಮಹಾ ಎಫ್ಝಡ್ ಬೈಕ್ ಕಳವಾಗಿದ್ದವು. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ನಾಲ್ಕು ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣಗಳ ಪತ್ತೆಗಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಮತ್ತು ಅಪರಾಧ ಪತ್ತೆ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ತನಿಖೆ ನಡೆಸಿ, ಮಾಹಿತಿ ಸಂಗ್ರಹಿಸುವ ಮೂಲಕ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
ವಿಚಾರಣೆ ವೇಳೆ, ಆರೋಪಿಗಳು ಸರಗಳ್ಳತನ ಸೇರಿದಂತೆ ಇತರ ಅಪರಾಧ ಕೃತ್ಯಗಳ ಮೂಲಕ ಲಾಭ ಗಳಿಸಿ ಐಷಾರಾಮಿ ಜೀವನ ನಡೆಸುವ ಉದ್ದೇಶ ಹೊಂದಿದ್ದರು ಎಂಬುದು ತಿಳಿದುಬಂದಿದೆ. ಬೆಲೆಬಾಳುವ ಮೋಟಾರ್ ಸೈಕಲ್ಗಳನ್ನು ಗುರಿಯಾಗಿಸಿಕೊಂಡು, ಅವುಗಳನ್ನು ನಿಲ್ಲಿಸಿದ್ದ ಸ್ಥಳಗಳಿಂದ ಕಳವು ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ನಾಲ್ವರು ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಬೈಂದೂರು ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐ ಮಾರುತಿ ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಸಾಗರ ದೇವಕತ್ತಿ ಮತ್ತು ಆಂಜನೇಯ ಕೆ.ಎಸ್. ಭಾಗವಹಿಸಿದ್ದರು. ಠಾಣೆಯ ಇತರ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ಸಹಕರಿಸಿದ್ದರು.
