ಮಣಿಪಾಲ| ಅಕ್ರಮವಾಗಿ ಸ್ಫೋಟಕ ಬಳಸಿ ಬಂಡೆ ಸ್ಫೋಟ: ಇಬ್ಬರ ಬಂಧನ
ಮಣಿಪಾಲ: ಸರ್ಕಾರಿ ಜಮೀನಿನಲ್ಲಿ ಯಾವುದೇ ಇಲಾಖೆಯ ಅನುಮತಿ ಅಥವಾ ಪರವಾನಗಿ ಪಡೆಯದೆ ಸ್ಫೋಟಕ ವಸ್ತುಗಳನ್ನು ಬಳಸಿ ಬಂಡೆ ಕಲ್ಲು ಸ್ಫೋಟಿಸಿದ ಆರೋಪದಡಿ ಇಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಸೆ.5ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಡುಪಿ ತಾಲೂಕು ಮರ್ಣೆ ಗ್ರಾಮದ ಕುಕ್ಕಿಪಲ್ಕೆ, ಸರ್ವೇ ನಂ.112/2ರಲ್ಲಿರುವ 1.54 ಎಕರೆ ಸರ್ಕಾರಿ ಜಮೀನಿನಲ್ಲಿ ಘಟನೆ ನಡೆದಿತ್ತು. ಆರೋಪಿಗಳು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೆ ಸ್ಫೋಟಕ ವಸ್ತುಗಳನ್ನು ಅನಧಿಕೃತವಾಗಿ ಬಳಸಿ ಜಮೀನಿನಲ್ಲಿದ್ದ ಬಂಡೆ ಕಲ್ಲನ್ನು ಸ್ಫೋಟಿಸಿದ್ದರು ಎನ್ನಲಾಗಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಮಣಿಪಾಲ ಠಾಣೆಯ ಪಿಎಸ್ಐ ತಿಮ್ಮೇಶ್ ಬಿ.ಎನ್. ಕೈಗೊಂಡಿದ್ದು, ತನಿಖೆಯ ಬಳಿಕ ಆರೋಪಿಗಳಾದ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಕೆ. ಗೋವಿಂದ ರಾಜ್ (40) ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಡದಿನ್ನಿ ಗ್ರಾಮದ ಶೇಖಪ್ಪ ಚಲವಾದಿ ಅಲಿಯಾಸ್ ಚಂದ್ರು (28) ಅವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಡ್ರಿಲ್ಲಿಂಗ್ ಕಂಪ್ರೆಸರ್ ಯಂತ್ರ ಅಳವಡಿಸಿರುವ ಮಹೀಂದ್ರಾ ಟ್ರ್ಯಾಕ್ಟರ್ ಹಾಗೂ ನಿಸ್ಸಾನ್ ಟೆರಾನೊ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
