Home Mangalorean News Kannada News ಮಣಿಪಾಲ: ಯುವಕನಿಂದ ಸ್ನೇಹಿತೆಯ ಕೊಲೆ ಯತ್ನ: ಪ್ರಕರಣ ದಾಖಲು

ಮಣಿಪಾಲ: ಯುವಕನಿಂದ ಸ್ನೇಹಿತೆಯ ಕೊಲೆ ಯತ್ನ: ಪ್ರಕರಣ ದಾಖಲು

Spread the love

ಮಣಿಪಾಲ: ಯುವಕನಿಂದ ಸ್ನೇಹಿತೆಯ ಕೊಲೆ ಯತ್ನ: ಪ್ರಕರಣ ದಾಖಲು

ಮಣಿಪಾಲ: ಕುಮಟಾ ಮೂಲದ ಮೇಘಾ ಮಂಜುನಾಥ ಗೌಡ ಅವರು ತಮ್ಮ ಸ್ನೇಹಿತೆಯರಾದ ನಾಗರತ್ನ, ಗಗನಾ ಹಾಗೂ ಯೋಗಿತಾ @ ಯೋಗೀಶ್ವರಿ ಅವರೊಂದಿಗೆ ಮಣಿಪಾಲದ ಶಾಂತಿನಗರದ ಸಮೀಪದ ವಾಗ್ಲೇ ಸ್ಟೋರ್ ಬಳಿಯ ಸುದರ್ಶನ ಕಾಂಪ್ಲೆಕ್ಸ್‌ನ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು.

ಮೇ 12, 2026ರಂದು ಸಂಜೆ 4 ಗಂಟೆಗೆ ಮೇಘಾ, ನಾಗರತ್ನ ಹಾಗೂ ಗಗನಾ ಅವರು ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದ ಯುನಿಟ್-5 ಪ್ರೆಸ್‌ನಲ್ಲಿ ಬೈಂಡಿಂಗ್ ಕೆಲಸದ ರಾತ್ರಿ ಪಾಳಿಗೆ ತೆರಳಿದ್ದರು. ಕೆಲಸ ಮುಗಿಸಿ ಮೇ 13ರಂದು ಬೆಳಿಗ್ಗೆ ಸುಮಾರು 7.15ಕ್ಕೆ ವಾಪಸು ರೂಮಿಗೆ ಬಂದಾಗ ಕೊಠಡಿಯ ಬಾಗಿಲು ಅರೆ ತೆರೆದ ಸ್ಥಿತಿಯಲ್ಲಿ ಕಂಡುಬಂದಿದೆ.

ಬಾಗಿಲನ್ನು ತಳ್ಳಿಕೊಂಡು ಒಳಗೆ ಪ್ರವೇಶಿಸಿದ ವೇಳೆ ಯೋಗಿತಾ ನೆಲದ ಮೇಲೆ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಪಕ್ಕದಲ್ಲಿ ತುಂಡಾದ ಸಿಮೆಂಟ್ ಕಲ್ಲುಗಳು ಕಂಡುಬಂದಿವೆ. ತಲೆಗೆ ಗಂಭೀರ ಪೆಟ್ಟು ಬಿದ್ದು ರಕ್ತಸ್ರಾವವಾಗುತ್ತಿದ್ದು, ಆಕೆ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಆಕೆಯ ಕುತ್ತಿಗೆಯಲ್ಲಿದ್ದ ಬಂಗಾರದ ಸರವೂ ಕಾಣೆಯಾಗಿತ್ತು.

ಗಾಯಗೊಂಡ ಯೋಗಿತಾಳನ್ನು ಕೂಡಲೇ ಆಟೋರಿಕ್ಷಾದ ಮೂಲಕ ಬೆಳಿಗ್ಗೆ ಸುಮಾರು 7.45ಕ್ಕೆ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಮೇ 12ರ ಸಂಜೆ 6 ಗಂಟೆಯಿಂದ ಮೇ 13ರ ಬೆಳಿಗ್ಗೆ 7.15ರ ನಡುವೆ ಅಪರಿಚಿತರು ಕೊಠಡಿಗೆ ನುಗ್ಗಿ, ಯೋಗಿತಾಳ ಕುತ್ತಿಗೆಯಲ್ಲಿದ್ದ ಸುಮಾರು 8 ಗ್ರಾಂ ತೂಕದ (ಅಂದಾಜು ₹80,000 ಮೌಲ್ಯದ) ಬಂಗಾರದ ಸರವನ್ನು ದೋಚಿ, ಕೊಲೆ ಮಾಡುವ ಉದ್ದೇಶದಿಂದ ಸಿಮೆಂಟ್ ಕಲ್ಲಿನಿಂದ ತಲೆಗೆ ಹಲ್ಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ   ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Spread the love

Exit mobile version