MRPLನಲ್ಲಿ ಭಾರೀ ಸ್ಫೋಟ | ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ: ಸಚಿವ ಯು.ಟಿ. ಖಾದರ್
ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ
ಮಂಗಳೂರು: ಎಂಆರ್ಪಿಎಲ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿರುವುದಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ವೆನ್ಲಾಕ್ ಆಸ್ಪತ್ರೆಯ ಬಳಿ ಬುಧವಾರ ರಾತ್ರಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೆ ಮುಖ್ಯಮಂತ್ರಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ತನಿಖೆಗೆ ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಿಸುವುದಾಗಿ ಭರವಸೆ ನೀಡಿದ್ದಾರೆ. ಗುರುವಾರ ಅಧಿಕಾರಿಗಳ ಹೆಸರನ್ನು ಮುಖ್ಯಮಂತ್ರಿ ಪ್ರಕಟಿಸಬಹುದು ಎಂದು ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿ ಜನರ ಅಹವಾಲು ಆಲಿಸಲು ಮತ್ತು ಸಂತ್ರಸ್ತರಿಗೆ ಸಾಂತ್ವನ ನೀಡಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಅದರಂತೆ ತಾನು ತುರ್ತಾಗಿ ಪ್ರವಾಸ ಮೊಟಕುಗೊಳಿಸಿ ಮಂಗಳೂರಿಗೆ ಬಂದಿರುವೆ. ಈ ಮಧ್ಯೆ ಎಂಆರ್ಪಿಎಲ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಸಂತ್ರಸ್ತರ ಜೊತೆ ಮಾತನಾಡದ ವಿಚಾರ ತಿಳಿದು ಬಂತು. ಇದು ಸರಿಯಲ್ಲ. ಮೃತ ಯುವಕನ ಕುಟುಂಬ ಮತ್ತು ಗಾಯಗೊಂಡವರ ಜೊತೆ ಅಧಿಕಾರಿಗಳು ಮಾತನಾಡಬೇಕಿತ್ತು ಎಂದ ಖಾದರ್, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ಎಂಆರ್ಪಿಎಲ್ ಸಂಸ್ಥೆಯ ಜೊತೆ ಮಾತನಾಡುವುದಾಗಿ ಯು.ಟಿ.ಖಾದರ್ ತಿಳಿಸಿದರು.
ಸ್ಫೋಟದಿಂದ ಮನೆಗಳು ಮತ್ತು ಪ್ರಾರ್ಥನಾ ಕೇಂದ್ರಗಳಿಗೆ ಹಾನಿಯಾದ ಬಗ್ಗೆ ಮಾಹಿತಿ ಲಭಿಸಿದೆ. ಜಿಲ್ಲಾಧಿಕಾರಿಗಳ ಮೂಲಕ ತನಿಖೆ ನಡೆಸಿ ಎಂಆರ್ಪಿಎಲ್ ಸಂಸ್ಥೆಯಿಂದಲೇ ನಷ್ಟ ಪರಿಹಾರ ನೀಡಲು ಸೂಚಿಸಲಾಗಿದೆ ಎಂದು ಯು.ಟಿ.ಖಾದರ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
