ಆ.1ರಂದು ಹೆಜಮಾಡಿ ಟೋಲ್ ವಿರುದ್ದ ಬೃಹತ್ ಹೋರಾಟ: ಪೋಸ್ಟರ್ ಬಿಡುಗಡೆ
ಪಡುಬಿದ್ರಿ : ಹೆಜಮಾಡಿ ಟೋಲ್ನಲ್ಲಿ ಸ್ಥಳೀಯ ವಾಹನಗಳಿಗೆ ಶಾಶ್ವತ ಟೋಲ್ ವಿನಾಯಿತಿ ಹಾಗೂ ಸ್ಥಳೀಯ ಪಾಸ್ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ಆಗಸ್ಟ್ 1ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಬೃಹತ್ ಟೋಲ್ ಹೋರಾಟದ ಹಿನ್ನೆಲೆಯಲ್ಲಿ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಪೂರ್ವಭಾವಿ ಸಭೆ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ಮಾರ್ಗದರ್ಶನದಲ್ಲಿ ಹೆಜಮಾಡಿ ಟೋಲ್ ಪ್ಲಾಜಾ ಬಳಿ ನಡೆಯಲಿರುವ ಪ್ರತಿಭಟನೆಯನ್ನು ಯಶಸ್ವಿಗೊಳಿಸುವ ಕುರಿತು ಸಮಾಲೋಚನೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಬೃಹತ್ ಟೋಲ್ ಹೋರಾಟದ ಅಧಿಕೃತ ಪೋಸ್ಟರ್ನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸ್ಥಳೀಯ ವಾಹನಗಳಿಗೆ ಶಾಶ್ವತ ಟೋಲ್ ವಿನಾಯಿತಿ ನೀಡಬೇಕು ಹಾಗೂ ಸ್ಥಳೀಯರಿಗೆ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ, ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವಂತೆ ವ್ಯಾಪಕ ಜನಸಂಪರ್ಕ ನಡೆಸಲು ತೀರ್ಮಾನಿಸಲಾಯಿತು.
ಅದೇ ರೀತಿ, ಪಿಡಬ್ಲ್ಯೂಡಿ (PWD) ರಸ್ತೆಯಲ್ಲಿರುವ ಅನಧಿಕೃತ ಟೋಲ್ ತೆರವುಗೊಳಿಸುವಂತೆ ಆಗ್ರಹಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಹೋರಾಟದ ದಿನ ಪ್ರತಿಯೊಂದು ಬೂತ್ನಿಂದ ಕನಿಷ್ಠ 50 ಮಂದಿ ಸದಸ್ಯರು ಕಡ್ಡಾಯವಾಗಿ ಭಾಗವಹಿಸುವಂತೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.
ಈಗಾಗಲೇ ಹೆಜಮಾಡಿ, ಎರ್ಮಾಳು, ಪಲಿಮಾರು ಹಾಗೂ ಪಡುಬಿದ್ರಿ ಭಾಗದ ವಿವಿಧ ಸಂಘ-ಸಂಸ್ಥೆಗಳು, ಧಾರ್ಮಿಕ, ಸಾಮಾಜಿಕ, ವಿದ್ಯಾರ್ಥಿ ಹಾಗೂ ಯುವ ಸಂಘಟನೆಗಳು ಸೇರಿದಂತೆ ಸಾರ್ವಜನಿಕರು ಪಕ್ಷಾತೀತವಾಗಿ ಈ ಹೋರಾಟಕ್ಕೆ ಬೆಂಬಲ ಸೂಚಿಸಿರುವುದಾಗಿ ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಅಧ್ಯಕ್ಷ ವ್ಯೆ. ಸುಕುಮಾರ್, ಕೆಪಿಸಿಸಿ ಸಂಯೋಜಕ ನವೀನ್ಚಂದ್ರ ಜೆ. ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಸುಧೀರ್ ಕರ್ಕೇರ, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಭೋದ್ ಚಂದ್ರ ಹೆಜಮಾಡಿ, ಪ್ರಮುಖರಾದ ನವೀನ್ ಎನ್. ಶೆಟ್ಟಿ, ಮಹಮ್ಮದ್ ನಿಯಾಜ್, ಸುಚರಿತಾ ಅಮೀನ್, ಅಶೋಕ್ ಸಾಲಿಯಾನ್, ಹಸನ್ ಬಾವ, ವಿಶಾಲ್ ವಿ. ಬಂಗೇರ, ದೀಕ್ಷಾ ಕೆ. ಹೆಜಮಾಡಿ, ಅಬ್ದುಲ್ ಮಜೀದ್, ಸುನಂದಾ ಸಾಲಿಯಾನ್, ಅಬ್ದುಲ್ ಖಾದರ್, ಸುಬ್ಬಯ್ಯ ಮುಲ್ಯ, ರಿಫಾನ್, ನಾರಾಯಣ್ ಕಲ್ಲಟ್ಟೆ, ಲಿಯಾಖಾತ್ ಮುನ್ನ, ವಿಠಲ್ ಮಾಸ್ಟರ್, ಕೀರ್ತಿ ಕುಮಾರ್, ಮುಬೀನಾ ಬೇಗಮ್, ತಸ್ಲೀನ್ ಆರಾ, ಜ್ಯೋತಿ ಮೆನನ್, ಅಬ್ದುಲ್ ರಜಾಕ್, ಮುಯ್ಯಿದ್ದೀನ್ ಪಿ.ಕೆ., ಕಿರಣ್ ಪ್ರತಾಪ್, ಉಷಾ, ಹಕೀಮ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೀಜ್ ಹುಸೇನ್ ಸಭೆಯನ್ನು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ ವಂದಿಸಿದರು.
