ಮೆಸ್ಕಾಂ ನಿಂದ ಗ್ರಾಹಕರಿಗೆ ‘ವಿದ್ಯುತ್ ಶಾಕ್’: ಸ್ಮಾರ್ಟ್ ಮೀಟರ್ ದರ ಏರಿಕೆಗೆ ಕೆ. ವಿಕಾಸ್ ಹೆಗ್ಡೆ ಆಕ್ರೋಶ
ಕುಂದಾಪುರ: ಹೊಸ ವರ್ಷಾರಂಭದಲ್ಲೇ ಮೆಸ್ಕಾಂ ಇಲಾಖೆ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ ‘ವಿದ್ಯುತ್ ಶಾಕ್’ ನೀಡಿದೆ. ಈವರೆಗೆ ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕಕ್ಕೆ ಹಳೆಯ ಮೀಟರ್ ದರ ರೂ. 936 ಇದ್ದರೆ, ಇದೀಗ ಖಾಸಗಿ ಸಂಸ್ಥೆಗಳ ಮೂಲಕ ಖರೀದಿಸಬೇಕಾದ ಸ್ಮಾರ್ಟ್ ಮೀಟರ್ ದರವನ್ನು ರೂ. 4,785ಕ್ಕೆ ಏರಿಸಲಾಗಿದೆ.
ಅದೇ ರೀತಿ, ತ್ರೀ ಫೇಸ್ ವಿದ್ಯುತ್ ಸಂಪರ್ಕಕ್ಕೆ ಹಿಂದೆ ರೂ. 2,300 ಇದ್ದ ಮೀಟರ್ ದರವನ್ನು ಈಗ ರೂ. 8,400ಕ್ಕೆ ಹೆಚ್ಚಿಸಲಾಗಿದೆ. ಈ ದರ ಏರಿಕೆಯಿಂದ ತಾತ್ಕಾಲಿಕ ಸಂಪರ್ಕ ಪಡೆಯುವವರು ಹಾಗೂ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ರೈತರು ಮತ್ತು ಜನಸಾಮಾನ್ಯರಿಗೆ ಭಾರೀ ಆರ್ಥಿಕ ಹೊರೆಯಾಗಲಿದೆ ಎಂದು ಆರೋಪಿಸಲಾಗಿದೆ.
ಸ್ಮಾರ್ಟ್ ಮೀಟರ್ ಯೋಜನೆಯ ಮುಂದುವರಿದ ಭಾಗವಾಗಿ, ಮುಂದಿನ ದಿನಗಳಲ್ಲಿ ಮೆಸ್ಕಾಂ ಇಲಾಖೆ ಪ್ರಿಪೇಯ್ಡ್ ವಿದ್ಯುತ್ ಬಿಲ್ ವ್ಯವಸ್ಥೆಯನ್ನು ಜಾರಿಗೆ ತರುವ ಉದ್ದೇಶ ಹೊಂದಿದೆ. ಇದರೊಂದಿಗೆ ಶಕ್ತಿ ಯೋಜನೆಯಡಿ ರೈತರಿಗೆ ನೀಡಲಾಗುತ್ತಿರುವ ಹತ್ತು ಅಶ್ವಶಕ್ತಿ ತನಕದ ಕೃಷಿ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಹಂತ ಹಂತವಾಗಿ ನಿಲ್ಲಿಸುವ ಹುನ್ನಾರವೂ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಆದ್ದರಿಂದ, ಸ್ಮಾರ್ಟ್ ಮೀಟರ್ ಹೆಸರಿನಲ್ಲಿ ವಿದ್ಯುತ್ ಗ್ರಾಹಕರ ಮೇಲೆ ಆಗುತ್ತಿರುವ ಅನಗತ್ಯ ಆರ್ಥಿಕ ನಷ್ಟವನ್ನು ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕುಂದಾಪುರ ತಾಲ್ಲೂಕು ರೈತ ಸಂಘದ ಮುಖಂಡ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.
