₹49 ಲಕ್ಷ ವೆಚ್ಚದಲ್ಲಿ ಕಲ್ಸಂಕ ಸೇತುವೆ ಅಗಲೀಕರಣ (ಫ್ರೀ ಲೆಫ್ಟ್) ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ
ಉಡುಪಿ: ನಗರಸಭೆಯ ಮೂಲಕ ₹49 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಲ್ಸಂಕ ಜಂಕ್ಷನ್ ನಲ್ಲಿ ಅಂಬಾಗಿಲು ತಿರುವು ಸೇತುವೆ ಅಗಲೀಕರಣ ( ಫ್ರೀ ಲೆಫ್ಟ್ ) ಕಾಮಗಾರಿಗೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಉಡುಪಿ ನಗರದ ವಾಹನ ದಟ್ಟಣೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬಹು ವರ್ಷಗಳ ಬೇಡಿಕೆಯಾಗಿದ್ದ ಫ್ರೀ ಲೆಫ್ಟ್ ಕಾಮಗಾರಿಗೆ ನಗರಸಭೆಯ ಮೂಲಕ 49 ಲಕ್ಷ ವೆಚ್ಚದಲ್ಲಿ ಅನುದಾನ ಒದಗಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಂಡ ಬಳಿಕ ಕಲ್ಸಂಕ ಜಂಕ್ಷನ್ ನಿಂದ ಅಂಬಾಗಿಲು ಕಡೆಗೆ ಸಾಗುವ ವಾಹನಗಳಿಗೆ ಸುಗಮ ಸಂಚಾರ ಸಾಧ್ಯವಾಗಲಿದ್ದು ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ನಿಕಟಪೂರ್ವ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಟಿ. ಜಿ. ಹೆಗ್ಡೆ, ಗಿರೀಶ್ ಅಂಚನ್, ಸುಂದರ ಕಲ್ಮಾಡಿ, ಜಯಂತಿ ಪೂಜಾರಿ, ಅಶೋಕ್ ನಾಯ್ಕ್, ಗಿರಿಧರ ಆಚಾರ್ಯ, ಲಕ್ಷ್ಮೀ ಮಂಜುನಾಥ, ಸವಿತಾ ಹರೀಶ್ ರಾಮ್, ಭಾರತಿ ಪ್ರಶಾಂತ್,ಮಾನಸ ಸಿ. ಪೈ, ಅನಿಟ ಡಿಸೋಜ, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷರಾದ ಶ್ರೀವತ್ಸ, ಪ್ರಮುಖರಾದ ಕಿಶೋರ್ ಕರಂಬಳ್ಳಿ, ದಯಾಶಿನಿ ಮೊದಲಾದವರು ಉಪಸ್ಥಿತರಿದ್ದರು.
