ಶಾಲಾ ಬಸ್ ನಿಯಂತ್ರಣ ತಪ್ಪಿದ ವೇಳೆ ಸಮಯಪ್ರಜ್ಞೆ ಮೆರೆದ ವಿದ್ಯಾರ್ಥಿಗೆ ಶಾಸಕ ಯಶ್ಪಾಲ್ ಅಭಿನಂದನೆ
ಮಣಿಪಾಲ: ಮಾಧವ ಕೃಪಾ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಂಶೆಲ್ ಶರುನ್ ಅವರು ಸಮಯಪ್ರಜ್ಞೆ ಮೆರೆದು ಶಾಲಾ ಬಸ್ಸಿನಲ್ಲಿದ್ದ 40 ವಿದ್ಯಾರ್ಥಿಗಳ ಜೀವವನ್ನು ರಕ್ಷಿಸಿದ ಘಟನೆ ನಡೆದಿದೆ.
ಶಾಲಾ ಬಸ್ಸಿನ ಚಾಲಕರು ವಾಹನ ಚಲಾಯಿಸುತ್ತಿದ್ದ ವೇಳೆ ಹಠಾತ್ ಅನಾರೋಗ್ಯಕ್ಕೀಡಾಗಿ ಬಸ್ ನಿಯಂತ್ರಣ ತಪ್ಪಿದ ಸಂದರ್ಭ, ವಿದ್ಯಾರ್ಥಿ ಅಂಶೆಲ್ ಶರುನ್ ತಕ್ಷಣ ಹ್ಯಾಂಡ್ ಬ್ರೇಕ್ ಹಾಕಿ ಬಸ್ಸನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿ, ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ.
ವಿದ್ಯಾರ್ಥಿಯ ಈ ಸಾಹಸ ಹಾಗೂ ಸಮಯಪ್ರಜ್ಞೆಯನ್ನು ಮೆಚ್ಚಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಶಾಲೆಗೆ ಭೇಟಿ ನೀಡಿ ಅಂಶೆಲ್ ಶರುನ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಅಧ್ಯಕ್ಷ ರುಡಾಲ್ಫ್ ಡಿಸೋಜಾ, ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡೆನಿಸ್ ಮಸ್ಕರೇನ್ಹಸ್, ಯುವ ಮೋರ್ಚಾ ಪದಾಧಿಕಾರಿಗಳಾದ ನಿತಿನ್ ಪೈ, ಧನುಷ್ ಬಿ.ಕೆ., ಭೂಷಣ್ ಕುಮಾರ್ ಹಾಗೂ ಶಾಲೆಯ ವ್ಯವಸ್ಥಾಪಕ ರಮೇಶ್ ಭಟ್ ಉಪಸ್ಥಿತರಿದ್ದರು.
