ಮಲ್ಪೆ ಬಂದರಿನಲ್ಲಿ ಸುಗಮ ಮೀನುಗಾರಿಕಾ ಚಟುವಟಿಕೆಗೆ ಅಗತ್ಯ ಕ್ರಮವಹಿಸಿ ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ
ಉಡುಪಿ: ಮಲ್ಪೆ ಬಂದರಿನಲ್ಲಿ ಈ ಸಾಲಿನ ಮೀನುಗಾರಿಕಾ ಋತು ಈಗಾಗಲೇ ಪ್ರಾರಂಭವಾಗಿದ್ದು ಸುಗಮ ಮೀನುಗಾರಿಕಾ ಚಟುವಟಿಕೆಗಳು ನಡೆಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸಮನ್ವಯತೆಯೊಂದಿಗೆ ಕಾರ್ಯ ನಿರ್ವಹಿಸುವಂತೆ ಮಲ್ಪೆ ಮೀನುಗಾರರ ಸಂಘದ ಸಭಾಭವನದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಮೀನುಗಾರ ಮುಖಂಡರ ಸಭೆ ನಡೆಸಿ ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಲ್ಪೆ ಬಂದರಿನ ಮುಖ್ಯ ಪ್ರವೇಶ ದ್ವಾರದ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆ ಈ ದ್ವಾರದ ಮೂಲಕ ವಾಹನ ಸಂಚಾರ ನಿಷೇಧಿಸಿರುವ ಹಿನ್ನಲೆಯಲ್ಲಿ ಈಗಾಗಲೇ ವಾಹನಗಳ ಸಂಚಾರಕ್ಕೆ ಈಗಾಗಲೇ ಸೂಚಿಸಿರುವ ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬಂದರು ಭಾಗದಲ್ಲಿ ವಾಹನಗಳ ವ್ಯವಸ್ಥಿತ ಪಾರ್ಕಿಂಗ್ ಮಾಡುವ ನಿಟ್ಟಿನಲ್ಲಿ ಮುಂಜಾನೆ 3 ಗಂಟೆಯಿಂದಲೇ ಸಿಬ್ಬಂದಿಗಳ ನಿಯೋಜನೆ, ಕರಾವಳಿ ಕಾವಲು ಪೊಲೀಸ್ ಇಲಾಖೆ ಬಂದರಿನ ಚಟುವಟಿಕೆಗಳ ನಿರ್ವಹಣೆಗೆ ಅಗತ್ಯ ಸಿಬ್ಬಂದಿಗಳ ನಿಯೋಜನೆ ಮಾಡುವಂತೆ ಸೂಚನೆ ನೀಡಿದರು.
ಬಂದರು ಇಲಾಖೆಯ ಮೂಲಕ ಈಗಾಗಲೇ ಗುರುತಿಸಿರುವ ಸ್ಥಳಗಳಲ್ಲಿ ಪೊಲೀಸ್ ಇಲಾಖೆಯ ಅಭಿಪ್ರಾಯ ಪಡೆದು ಆಧುನಿಕ ತಂತ್ರಜ್ಞಾನದ ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸಲಹೆ ನೀಡಿದ ಶಾಸಕರು, ಮುಖ್ಯ ಪ್ರವೇಶ ದ್ವಾರದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಕಾಮಗಾರಿಗಾಗಿ ತೆಗೆದ ಮರಳನ್ನು ತಕ್ಷಣ ಪಾರ್ಕಿಂಗ್ ಪ್ರದೇಶದಿಂದ ತೆರವು ಮಾಡಬೇಕು ಎಂದರು.
ಬಂದರಿನ ನಿರ್ವಹಣೆ ನಡೆಸುತ್ತಿರುವ ಕೆ.ಎಫ್.ಡಿ.ಸಿ. ಸ್ವಚ್ಚತೆ ಹಾಗೂ ಭದ್ರತೆಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕು. ಮೀನುಗಾರ ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡುವಂತೆ ಹೇಳಿದರು.
ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಡೀಸಲ್ ಪಾಸ್ ಬುಕ್ ನವೀಕರಣ ಪ್ರಕ್ರಿಯೆಯನ್ನು ಶೀಘ್ರ ನಡೆಸಿ ಮೀನುಗಾರಿಕಾ ಬೋಟುಗಳಿಗೆ ಡಿಸೇಲ್ ಪೂರೈಕೆಗೆ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಸಹಿತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ಮೀನುಗಾರರ ಸಂಘದ ಸಹಯೋಗದಲ್ಲಿ ಅರ್ಹ ಮೀನುಗಾರರಿಗೆ ತಲುಪಿಸುವಂತೆ ಕ್ರಮ ವಹಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ನಾರಾಯಣ ಕರ್ಕೇರ, ನಿಕಟಪೂರ್ವ ಅಧ್ಯಕ್ಷರಾದ ದಯಾನಂದ ಕೆ. ಸುವರ್ಣ, ಕಾರ್ಯದರ್ಶಿ ಜಗನ್ನಾಥ ಕಡೆಕಾರು, ಮೀನುಗಾರ ಮುಖಂಡರಾದ ರಾಮಚಂದ್ರ ಕುಂದರ್, ಸಾಧು ಸಾಲ್ಯಾನ್, ರಮೇಶ್ ಕೋಟ್ಯಾನ್, ಕಿಶೋರ್ ಡಿ. ಸುವರ್ಣ, ಮಧುಕರ್, ಕರುಣಾಕರ ಸಾಲ್ಯಾನ್, ದಯಾಕರ ಸುವರ್ಣ, ಸುರೇಶ್ ಬಿ. ಕುಂದರ್, ಪ್ರಕಾಶ್ ಬಂಗೇರ, ಗೀತಾ ಕರ್ಕೇರ, ಗೋಪಾಲ ಆರ್. ಕೆ., ನಾಗರಾಜ ಕುಂದರ್ ಹಾಗೂ ಮೀನುಗಾರಿಕೆ, ಬಂದರು, ಕರಾವಳಿ ಕಾವಲು ಪೊಲೀಸ್, ಪೊಲೀಸ್ ಇಲಾಖೆ, ಅಗ್ನಿಶಾಮಕದಳ ಇಲಾಖೆಗಳ ಅಧಿಕಾರಿಗಳು, ವಿವಿಧ ಮೀನುಗಾರಿಕಾ ಸಹಕಾರಿ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
