Home Mangalorean News Kannada News ಬಿ.ಪಿ.ಎಲ್. ಪಡಿತರ ಚೀಟಿ ಆದಾಯ ಮಿತಿ ರೂ. 3 ಲಕ್ಷಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ಪಾಲ್...

ಬಿ.ಪಿ.ಎಲ್. ಪಡಿತರ ಚೀಟಿ ಆದಾಯ ಮಿತಿ ರೂ. 3 ಲಕ್ಷಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ

Spread the love

ಬಿ.ಪಿ.ಎಲ್. ಪಡಿತರ ಚೀಟಿ ಆದಾಯ ಮಿತಿ ರೂ. 3 ಲಕ್ಷಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ

ಉಡುಪಿ: ಬಿ.ಪಿ.ಎಲ್. ಪಡಿತರ ಚೀಟಿ ಪಡೆಯಲು ಪ್ರಸ್ತುತ ಜಾರಿಯಲ್ಲಿರುವ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. 1.20 ಲಕ್ಷವನ್ನು ರೂ. 3.00 ಲಕ್ಷಕ್ಕೆ ಹೆಚ್ಚಿಸುವಂತೆ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಮುಖ್ಯಮಂತ್ರಿ ಡಿ. ಕೆ. ಶಿವ ಕುಮಾರ್ ರವರಿಗೆ ಮನವಿ ಮಾಡಿದ್ದಾರೆ.

ಪ್ರಸ್ತುತ ಬಿ.ಪಿ.ಎಲ್. ಪಡಿತರ ಚೀಟಿಗೆ ಅನ್ವಯವಾಗುತ್ತಿರುವ ರೂ. 1.20 ಲಕ್ಷ ವಾರ್ಷಿಕ ಆದಾಯದ ಮಿತಿಯನ್ನು 2017ರಲ್ಲಿ ನಿಗದಿಪಡಿಸಲಾಗಿತ್ತು. ಕಳೆದ 9 ವರ್ಷಗಳಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಆದಾಯ ಮಿತಿಯನ್ನು ಪರಿಷ್ಕರಿಸದ ಕಾರಣ ಅನೇಕ ಬಡ ಹಾಗೂ ಕೆಳಮಧ್ಯಮ ವರ್ಗದ ಕುಟುಂಬಗಳು ಬಿ.ಪಿ.ಎಲ್. ಸೌಲಭ್ಯದಿಂದ ವಂಚಿತರಾಗಿರುತ್ತಾರೆ.

ಬಹುತೇಕ ಬಿ.ಪಿ.ಎಲ್. ಕುಟುಂಬಗಳ ಆದಾಯವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇಂದಿನ ಆರ್ಥಿಕ ಪರಿಸ್ಥಿತಿ ಹಾಗೂ ಜೀವನ ನಿರ್ವಹಣೆಗೆ ಹೆಚ್ಚಾದ ವೆಚ್ಚವನ್ನು ಗಮನಿಸಿದರೆ, ರೂ. 1.20 ಲಕ್ಷ ಆದಾಯ ಮಿತಿ ಈಗಿನ ಕಾಲಘಟ್ಟಕ್ಕೆ ಹೊಂದಿಕೆಯಾಗುವುದಿಲ್ಲ. ಆದುದರಿಂದ, ಬಿ.ಪಿ.ಎಲ್. ಪಡಿತರ ಚೀಟಿಗೆ ವಾರ್ಷಿಕ ಆದಾಯ ಮಿತಿಯನ್ನು ರೂ. 3.00 ಲಕ್ಷಕ್ಕೆ ಹೆಚ್ಚಿಸುವ ಮೂಲಕ ನೈಜ ಅರ್ಹ ಕುಟುಂಬಗಳಿಗೆ ಆಹಾರ ಭದ್ರತೆ ಹಾಗೂ ಸರ್ಕಾರದ ವಿವಿಧ ಜನಪರ ಯೋಜನೆಗಳ ಸೌಲಭ್ಯ ದೊರೆಯುವಂತೆ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ರವರು ಪತ್ರ ಬರೆದು ಆಗ್ರಹಿಸಿದ್ದಾರೆ.


Spread the love

Exit mobile version