Home Mangalorean News Kannada News ನಾಗರ ಪಂಚಮಿ ಹಬ್ಬದಂದು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ...

ನಾಗರ ಪಂಚಮಿ ಹಬ್ಬದಂದು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ

Spread the love

ನಾಗರ ಪಂಚಮಿ ಹಬ್ಬದಂದು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವಂತೆ ಜಿಲ್ಲಾಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ

ಉಡುಪಿ: ಕರ್ನಾಟಕ ರಾಜ್ಯಾದ್ಯಂತ ಜನರು “ನಾಗರ ಪಂಚಮಿ ಹಬ್ಬವನ್ನು” ವಿಶಿಷ್ಟ ರೀತಿಯಲ್ಲಿ ಶ್ರದ್ದಾ-ಭಕ್ತಿ ಪೂರ್ವಕವಾಗಿ ಆಚರಿಸಿಕೊಂಡು ಬರುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದ್ದು, ಈ ಬಾರಿಯ ನಾಗರಪಂಚಮಿಯ ಹಬ್ಬದಂದು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಸ್ಥಳೀಯ ರಜೆಯನ್ನು ಘೋಷಿಸುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಬಹು ಮುಖ್ಯವಾಗಿ ಬದುಕಿನ ಅನಿವಾರ್ಯತೆಗಾಗಿ ಉದ್ಯೋಗ ನಿಮಿತ್ತ ಎಲ್ಲೆಲೋ ಚದುರಿಹೋಗಿರುವ ಸಂಬಂಧಿಕರನ್ನು ಬೆಸೆಯುವ ಕಾರ್ಯವನ್ನು ನಾಗರ ಪಂಚಮಿಯು ಮಾಡುತ್ತಿದೆ. ನಾಗರ ಪಂಚಮಿಯಂದು ಕುಟುಂಬದ ಹೆಚ್ಚಿನ ಸದಸ್ಯರು ಮಾತೃ ಕುಟುಂಬ ಹಾಗೂ ಪಿತೃ ಕುಟುಂಬದ ಮೂಲ ನಾಗ ಬನಕ್ಕೆ ಹೋಗಿ ಅಲ್ಲಿ ತನು ಹಾಕಿ ಬರುವ ಧಾರ್ಮಿಕ ನಂಬಿಕೆ ಹಾಗೂ ಸಂಪ್ರದಾಯ ಇದೆ. ಬೇರೆ ಬೇರೆ ಕಡೆಯಲ್ಲಿರುವ ಎರಡೂ ಭಾಗದ ಕುಟುಂಬದ ಸದಸ್ಯರು ನಾಗ ದೇವರಿಗೆ ತನು ಅರ್ಪಿಸುವ ಧಾರ್ಮಿಕ ಆಚರಣೆಯ ಮೂಲಕ ಒಂದೇ ಸೂರಿನಡಿಯಲ್ಲಿ ಸೇರುತ್ತಾರೆ.

ಕರಾವಳಿಯ ಜಿಲ್ಲೆಗಳಲ್ಲಿ ಪ್ರತಿ ಕುಟುಂಬಕ್ಕೂ ಒಂದು ಮೂಲ ಸ್ಥಾನ ನಾಗಬನ ಇದ್ದು, ನಾಗನ ಕಲ್ಲುಗಳು ಇರುವ ತಾಣಕ್ಕೆ ಹಿರಿಯರು-ಮಕ್ಕಳೂ ಸೇರಿದಂತೆ ಕುಟುಂಬ ಸಮೇತರಾಗಿ ತೆರಳಿ, ಭಕ್ತರು ನಾಗ ದೇವರಿಗೆ ಹಾಲೆರೆದು ಪೂಜೆ ಸಲ್ಲಿಸುತ್ತಾರೆ.

ಇಂತಹ ಸಂಸ್ಕೃತಿ ಹೊಂದಿರುವ ನಮ್ಮ ತುಳುನಾಡಿಗೆ ಪುರಾಣಗಳಲ್ಲಿ ‘ನಾಗರಖಂಡ’ ಎಂದು ಕರೆಯುವ ಉಲ್ಲೇಖವಿದೆ. ದೈವಿಕ ಶಕ್ತಿ, ಧಾರ್ಮಿಕ ಆಚರಣೆಯ ತಳಹದಿಯ ಮೇಲೆ ನಿಂತಿರುವ ತುಳುನಾಡಿನಲ್ಲಿ ನಾಗಾರಾಧನೆಯು ಹೆಚ್ಚು ವಿಶೇಷತೆಯನ್ನು ಹೊಂದಿದೆ.

ಪಾರಂಪರಿಕವಾಗಿ ಮತ್ತು ಶೃದ್ಧಾ-ಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವ ನಾಗರ ಪಂಚಮಿ ಹಬ್ಬದ ಬಗ್ಗೆ ಯುವ ಪೀಳಿಗೆಯ ವಿದ್ಯಾರ್ಥಿಗಳಿಗೆ ಪರಿಚಯಿಸಿ ಮುಂದುವರೆಸಿಕೊಂಡು ಹೋಗಲು ಅನುಕುಲವಾಗುವಂತೆ ಹಾಗೂ ಸಾರ್ವಜನಿಕರ ಮನವಿಯ ಮೇರೆಗೆ ಆಗಸ್ಟ್ 17 ರಂದು ಆಚರಿಸುವ ನಾಗರ ಪಂಚಮಿಯಂದು ಶೈಕ್ಷಣಿಕ ಸಂಸ್ಥೆಗಳಿಗೆ ಜಿಲ್ಲಾದ್ಯಂತ ಸ್ಥಳೀಯ ರಜೆ ಘೋಷಣೆ ಮಾಡಲು ಕ್ರಮ ವಹಿಸುವಂತೆ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ.


Spread the love

Exit mobile version