Home Mangalorean News Kannada News ಸಿಬ್ಬಂದಿ ಕೊರತೆಯಿಂದ ಕಚೇರಿ ಸೇವೆಯಲ್ಲಿ ವಿಳಂಬ ಹಿನ್ನೆಲೆ ಉಡುಪಿ ಆರ್.ಟಿ. ಓ. ಕಚೇರಿಗೆ ಶಾಸಕ ಯಶ್ಪಾಲ್...

ಸಿಬ್ಬಂದಿ ಕೊರತೆಯಿಂದ ಕಚೇರಿ ಸೇವೆಯಲ್ಲಿ ವಿಳಂಬ ಹಿನ್ನೆಲೆ ಉಡುಪಿ ಆರ್.ಟಿ. ಓ. ಕಚೇರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ

Spread the love

ಸಿಬ್ಬಂದಿ ಕೊರತೆಯಿಂದ ಕಚೇರಿ ಸೇವೆಯಲ್ಲಿ ವಿಳಂಬ ಹಿನ್ನೆಲೆ ಉಡುಪಿ ಆರ್.ಟಿ. ಓ. ಕಚೇರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ

ಉಡುಪಿ ಆರ್. ಟಿ. ಓ. ಕಚೇರಿಯಲ್ಲಿ ಪ್ರಮುಖ ಹುದ್ದೆಗಳು ಖಾಲಿ ಇದ್ದು ಸಾರ್ವಜನಿಕರ ಕಚೇರಿ ಸಂಬಂಧಿತ ಕೆಲಸಗಳು ವಿಳಂಬವಾಗುತ್ತಿರುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಆರ್ ಟಿ ಓ ಕಚೇರಿಯ ಪ್ರಮುಖ ಹುದ್ದೆಗಳಾದ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಸಹಾಯಕ ಸಾರಿಗೆ ಅಧಿಕಾರಿ ಹುದ್ದೆ ಖಾಲಿ ಇದ್ದು, ಹಿರಿಯ ಮೋಟಾರು ವಾಹನ ನಿರೀಕ್ಷಕರು ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಸುತ್ತಿದ್ದಾರೆ. 5 ಮೋಟಾರು ವಾಹನ ನಿರೀಕ್ಷಕ ಹುದ್ದೆಯಲ್ಲಿ 4 ಖಾಲಿ ಇದೆ.

ಸಿಬ್ಬಂದಿ ಕೊರತೆಯಿಂದ ಡ್ರೈವಿಂಗ್ ಲೈಸೆನ್ಸ್, ವಾಣಿಜ್ಯ, ರಿಕ್ಷಾ, ಬಸ್ಸು, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಸಹಿತ ಸಾರಿಗೆ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ವಾಹನ ಮಾಲಕರು ಹರಸಾಹಸ ಪಡುತ್ತಿದ್ದಾರೆ.

ಕೇವಲ ಇಬ್ಬರು ಮೋಟಾರು ವಾಹನ ನಿರೀಕ್ಷಕರು ವಾರದಲ್ಲಿ 3 ದಿನ ವಿವಿಧ ತಾಲೂಕು ಕ್ಯಾಂಪ್ ಜೊತೆಗೆ ಜಿಲ್ಲಾ ಕಚೇರಿಯ ವಾಹನಗಳ ಪರಿಶೀಲನೆ ನಡೆಸುವ ಪರಿಸ್ಥಿತಿ ಇದ್ದು, ಉಡುಪಿ ಜಿಲ್ಲೆಯ 22 ಪೊಲೀಸ್ ಠಾಣೆಗಳಿಗೆ ಸಂಬಂಧಿತ ಅಪರಾಧ ಪ್ರಕರಣಗಳ ವಾಹನ ತಪಾಸಣೆಯನ್ನು ಇದೇ ಅಧಿಕಾರಿಗಳು ಮಾಡಬೇಕಿದೆ.

ರಾಜ್ಯ ಸರ್ಕಾರಕ್ಕೆ ವಾರ್ಷಿಕ 312 ಕೋಟಿ ಆದಾಯ ಸಂಗ್ರಹಿಸುವ ಗುರಿ ಹೊಂದಿರುವ ಉಡುಪಿ ಆರ್ ಟಿ ಓ ಕಚೇರಿಯಲ್ಲಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡದೇ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

ಬ್ರಹ್ಮಾವರ ತಾಲೂಕಾಗಿ ಹಲವು ವರ್ಷಗಳು ಕಳೆದರೂ ರಿಕ್ಷಾ, ಟ್ಯಾಕ್ಸಿ ಚಾಲಕರು ಬ್ರಹ್ಮಾವರದಲ್ಲಿ ಆರ್ ಟಿ ಓ ಕ್ಯಾಂಪ್ ನಡೆಸಲು ಬೇಡಿಕೆ ಇಟ್ಟಿದ್ದರೂ ಸಿಬ್ಬಂದಿ ಕೊರತೆಯಿಂದ ಈವರೆಗೆ ಕ್ಯಾಂಪ್ ಆರಂಭವಾಗಿಲ್ಲ.

ರಿಕ್ಷಾ, ಟ್ಯಾಕ್ಸಿಗಳಲ್ಲಿ ಬಾಡಿಗೆ ಮಾಡಿ ದುಡಿದು ತಿನ್ನುವ ಕಾರ್ಮಿಕ ವರ್ಗದ ಜನತೆ ಆರ್. ಟಿ. ಓ. ಕಚೇರಿ ಕೆಲಸಕ್ಕೆ ದಿನ ಅಲೆದಾಡುವಂತಾಗಿದೆ.

ಕಚೇರಿಯ ಸಿಬ್ಬಂದಿಗಳ ಖಾಲಿ ಹುದ್ದೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಈ ಬಗ್ಗೆ ಸಾರಿಗೆ ಸಚಿವರನ್ನು ಭೇಟಿಯಾಗಿ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ ಮಾಡುವುದಾಗಿ ತಿಳಿಸಿಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಶೀಘ್ರ ಸೇವೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಆರ್. ಟಿ. ಓ. ಕಚೇರಿ ಪ್ರಾಂಗಣದಲ್ಲಿ ಗಿಡಗಂಟಿಗಳು ಬೆಳೆದಿರುವುದನ್ನು ಗಮನಿಸಿದ ಶಾಸಕರು ತಕ್ಷಣ ಅದನ್ನು ತೆರವು ಮಾಡಿ ಕಚೇರಿ ಪರಿಸರದಲ್ಲಿ ಸ್ವಚ್ಚತೆ ಕಾಪಾಡುವಂತೆ ಅಧಿಕಾರಿಗಳಿಗೆ ಹೇಳಿದರು.


Spread the love

Exit mobile version