ಮೂಡಬಿದ್ರೆ: ಕಾರು ಢಿಕ್ಕಿ ಹೊಡೆದು 13 ವರ್ಷದ ಬಾಲಕ ಮೃತ್ಯು
ಮೂಡಬಿದ್ರೆ: ಚಾಲಕನ ಅಜಾಗರೂಕತೆಯಿಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ 13 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬುಧವಾರ ಮಧ್ಯಾಹ್ನ ಮಾರೂರು ಹೊಸಂಗಡಿ ಬಳಿ ಸಂಭವಿಸಿದೆ.
ಹೊಸಂಗಡಿ ನಿವಾಸಿ ನಝೀರ್ ಅವರ ಪುತ್ರ ಝಾಹಿರ್ (13) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಝಾಹಿರ್ ಸ್ಥಳೀಯ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದನು.
ಬುಧವಾರ ಮಧ್ಯಾಹ್ನ ತಾಯಿಯೊಂದಿಗೆ ಅಂಗಡಿಗೆಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
