ಮಿಸ್ಟರ್ ಉಡುಪಿ ಕ್ಲಾಸಿಕ್ 2026 ದೇಹದಾರ್ಡ್ಯ ಸ್ಪರ್ಧೆಯ ಟ್ರೋಫಿ ಅನಾವರಣ
ಉಡುಪಿ: ಪರ್ಯಾಯ ಮಹೋತ್ಸವದ ಪ್ರಯುಕ್ತ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೊಶೀಯೇಶನ್ ಇವರ ನೇತೃತ್ವದಲ್ಲಿ ಆಯೋಜಿಸಲಾಗಿರುವ ಮಿಸ್ಟರ್ ಉಡುಪಿ ಕ್ಲಾಸಿಕ್ 2026 ಇದರ ಟ್ರೋಫಿ ಅನಾವರಣ ಕಾರ್ಯಕ್ರಮ ಜನವರಿ 3 ರಂದು ಶನಿವಾರ ಅದ್ದೂರಿಯಾಗಿ ಜರುಗಿತು.

ಉಡುಪಿ ಶ್ರೀ ಕೃಷ್ಣ ಮಠದ ಆವರಣದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಟ್ರೋಫಿ ಆನಾವರಣಗೊಳಿಸಿ ಶುಭ ಹಾರೈಸಿದರು.
ಬಳಿಕ ಟ್ರೋಫಿಯನ್ನು ತೆರೆದ ವಾಹನದಲ್ಲಿ ಬೈಕ್ ರ್ಯಾಲಿ ಮೂಲಕ ಪಾರ್ಕಿಂಗ್ ಸ್ಥಳ, ಕಲ್ಸಂಕ, ರಾಜ್ ಟವರ್ ಮೂಲಕ ಕಲ್ಸಂಕ ಮಾಂಡವಿ ಸ್ಕ್ವೆರ್ ಮಾಲ್ ಗೆ ತರಲಾಯಿತು
ಅಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ ಇಂದು ಮನುಷ್ಯನಲ್ಲಿ ಎಷ್ಟೇ ಸಂಪತ್ತು ಇದ್ದರೂ ಕೂಡ ಆರೋಗ್ಯದ ಸರಿ ಇಲ್ಲದೆ ಹೋದರೆ ಎಲ್ಲವೂ ವ್ಯರ್ಥ. ಶಾರೀರಿಕ ವ್ಯಾಯಾಮದ ಮೂಲಕ ಆರೋಗ್ಯದ ಕಾಳಜಿ ವಹಿಸಬೇಕಾಗಿದೆ. ಉಡುಪಿ ಜಿಲ್ಲೆ ಪ್ರತಿ ದಿನ ಎಂಬಂತೆ ವಿವಿಧ ರೀತಿಯ ಜಿಲ್ಲೆ, ರಾಜ್ಯ ಮಟ್ಟದ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಈಗ ಪರ್ಯಾಯದ ಸಂದರ್ಭದಲ್ಲಿ ದೇಹದಾರ್ಡ್ಯ ಸ್ಪರ್ಧೆ ಆಯೋಜಿಸಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಜಿಲ್ಲೆ ಸಾಕ್ಷಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಆಯೋಜಕರಾದ ಪ್ರಸಾದ್ ರಾಜ್ ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪರ್ಧೆ ಆಯೋಜನೆಯ ಉದ್ದೇಶವನ್ನು ವಿವರಿಸಿದರು.
ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷರಾದ ಹರಿಪ್ರಸಾದ್ ರೈ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ ಹೇರೂರು, ಉಡುಪಿ ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೋಶೀಯೇಶನ್ ಇದರ ಅಧ್ಯಕ್ಷರಾದ ಜೇಸನ್ ಡಾಯಸ್, ಉಡುಪಿಯ ಉದ್ಯಮಿ ಮಿಥಿಲೇಶ್ ಹಾಗೂ ಇತರರು ಉಪಸ್ಥಿತರಿದ್ದರು.
ಮಿಸ್ಟರ್ ಕ್ಲಾಸಿಕ್ 2026 ಕಾರ್ಯಕ್ರಮ ಜನವರಿ 17 ರಂದು ಉಡುಪಿ ಶೋಕಮಾತಾ ಚರ್ಚಿನ ಮೈದಾನದಲ್ಲಿ ಆಯೋಜಿಸಲಾಗಿದ್ದು ವಿವಿಧ ವಿಭಾಗಗಳಲ್ಲಿ ದೇಹದಾರ್ಡ್ಯ ಸ್ಪರ್ಧೆಗಳು ಜರುಗಲಿವೆ ಎಂದು ಕಾರ್ಯಕ್ರಮದ ಆಯೋಜಕರಾದ ಪ್ರಸಾದ್ ರಾಜ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.