Home Mangalorean News Kannada News ಗೋವಾದಲ್ಲಿ ಮಲ್ಪೆಯ ಸಂದೀಪ್ ಸಾಲಿಯಾನ್ ಕೊಲೆ ಪ್ರಕರಣ: ಮಂಗಳೂರಿನ ಮೂಲದ ಯುವತಿಯ ಬಂಧನ?

ಗೋವಾದಲ್ಲಿ ಮಲ್ಪೆಯ ಸಂದೀಪ್ ಸಾಲಿಯಾನ್ ಕೊಲೆ ಪ್ರಕರಣ: ಮಂಗಳೂರಿನ ಮೂಲದ ಯುವತಿಯ ಬಂಧನ?

Spread the love

ಗೋವಾದಲ್ಲಿ ಮಲ್ಪೆಯ ಸಂದೀಪ್ ಸಾಲಿಯಾನ್ ಕೊಲೆ ಪ್ರಕರಣ: ಮಂಗಳೂರಿನ ಮೂಲದ ಯುವತಿಯ ಬಂಧನ?

ಉಡುಪಿ/ಗೋವಾ: ಗೋವಾದ ಕ್ಯಾಲಂಗುಟ್ನ ಅತಿಥಿ ಗೃಹದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ಉಡುಪಿ ಜಿಲ್ಲೆಯ ಮಲ್ಪೆ ನಿವಾಸಿ ಸಂದೀಪ್ ಸಾಲಿಯಾನ್ (40) ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಕ್ಯಾಲಂಗುಟ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತೆಯನ್ನು ಅಕ್ಷತಾ ಎಂ.ಕೆ. ಎಂದು ಗುರುತಿಸಲಾಗಿದ್ದು, ಮೂಲತಃ ಮಂಗಳೂರಿನವರಾದ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಂಗಳೂರಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಮಲ್ಪೆಯ ನಿವಾಸಿಯಾಗಿದ್ದ ಸಂದೀಪ್ ಸಾಲಿಯಾನ್ ಕೆಲ ದಿನಗಳ ಹಿಂದೆ ಪ್ರವಾಸಕ್ಕಾಗಿ ಗೋವಾಗೆ ತೆರಳಿದ್ದರು. ಬಳಿಕ ಕ್ಯಾಲಂಗುಟ್ನ ಅತಿಥಿ ಗೃಹವೊಂದರಲ್ಲಿ ಅವರ ಮೃತದೇಹ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ನಿರಂತರ ತನಿಖೆಯ ಬಳಿಕ ಪ್ರಮುಖ ಆರೋಪಿಯ ಸುಳಿವು ಪತ್ತೆಹಚ್ಚಿದ ಪೊಲೀಸರು ಬೆಂಗಳೂರಿನಲ್ಲಿ ಅಕ್ಷತಾ ಎಂ.ಕೆ. ಅವರನ್ನು ಬಂಧಿಸಿದ್ದಾರೆ. ಆರೋಪಿಯನ್ನು ಟ್ರಾನ್ಸಿಟ್ ರಿಮಾಂಡ್ ಮೂಲಕ ಗೋವಾಗೆ ಕರೆತಂದು ಹೆಚ್ಚಿನ ವಿಚಾರಣೆ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸಂದೀಪ್ ಸಾಲಿಯಾನ್ ಈ ಹಿಂದೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು. ಹಲವು ವರ್ಷಗಳ ಹಿಂದೆ ಸಕ್ರಿಯ ರಾಜಕೀಯದಿಂದ ದೂರ ಸರಿದಿದ್ದಯ ಅವರು, ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಮಲ್ಪೆಯಲ್ಲಿ ಪ್ರವಾಸಿ ದೋಣಿ (ಟೂರಿಸ್ಟ್ ಬೋಟ್) ನಡೆಸುತ್ತಿದ್ದರು.

ಜುಲೈ 1ರಂದು ಗೋವಾದ ಕ್ಯಾಲಂಗುಟ್ ಬೀಚ್ ಸಮೀಪದ ಅತಿಥಿ ಗೃಹದಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಆರಂಭದಲ್ಲಿ ಹೃದಯಾಘಾತವೇ ಅಥವಾ ಬೇರೆ ಯಾವುದೇ ಕಾರಣವೇ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ತನಿಖೆಯ ವೇಳೆ ಕೊಲೆ ಪ್ರಕರಣ ಎಂಬುದು ಬೆಳಕಿಗೆ ಬಂದಿದ್ದು, ಇದೀಗ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.

ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು, ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.


Spread the love

Exit mobile version