ಉಡುಪಿಯಲ್ಲಿ ಅ. 23ರಿಂದ 25 ರ ವರೆಗೆ ‘ನಡಿಗೆ’ ಅಭಿಯಾನ: ಹಳೆಯ ಪಾದರಕ್ಷೆಗಳಿಗೆ ಹೊಸ ಬದುಕು
ಉಡುಪಿ: ಮನೆಯಲ್ಲಿ ಬಳಸಿದ ಅಥವಾ ಬಳಕೆಯಾಗದ ಉತ್ತಮ ಗುಣಮಟ್ಟದಲ್ಲಿರುವ ಪಾದರಕ್ಷೆಗಳನ್ನು ಬಡ ಮಕ್ಕಳಿಗೆ ಕೊಡುಗೆಯಾಗಿ ನೀಡುವ ಉದ್ದೇಶದಿಂದ ಹಮ್ಮಿಕೊಂಡ ‘ನಡಿಗೆ’ ಸಾಮಾಜಿಕ ಅಭಿಯಾನವು ಅ. 23, 24 ಮತ್ತು 25ರಂದು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕ ಅವಿನಾಶ್ ಕಾಮತ್ ಹೇಳಿದರು.
ವಿನೂತನ ಹಳೆಯ ಪಾದರಕ್ಷೆಗಳ ಸಂಗ್ರಹ ಅಭಿಯಾನದ ಪೋಸ್ಟರ್ ಅನ್ನು ಉಡುಪಿಯ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಈ ವೇಳೆ ಹಳೆಯ ಪಾದರಕ್ಷೆಗಳ ಬೃಹತ್ ಸಂಗ್ರಹವಾದ ಈ ಅಭಿಯಾನವು ಅ. 23ರಿಂದ 25ರವರೆಗೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಪಾದರಕ್ಷೆಗಳನ್ನು ದಾನ ರೂಪದಲ್ಲಿ ನೀಡಬಹುದಾಗಿದೆ. ಎಲ್ಲಾ ಸಾರ್ವಜನಿಕರು ತಾವು ಬಳಸಿದ ಪಾದರಕ್ಷೆಗಳನ್ನು ನೀಡಬಹುದಾಗಿದೆ. ಹೀಲ್ಸ್ ಹಾಗೂ 10 ವರ್ಷದವರೆಗಿನ ಮಕ್ಕಳ ಪಾದರಕ್ಷೆಗಳನ್ನು ಈ ಅಭಿಯಾನದಲ್ಲಿ ಸ್ವೀಕರಿಸಲು ಅವಕಾಶವಿರುವುದಿಲ್ಲ ಉಳಿದಂತೆ ಶೂಗಳು, ಸ್ಥಿಪರ್ಗಗಳು, ರಬ್ಬರ್ ಶೂಗಳು ಚಪ್ಪಲಿಗಳನ್ನು ನೀಡಬಹುದಾಗಿದೆ. ಪಾದರಕ್ಷೆಗಳನ್ನು ನೀಡಬಯಸುವ ಸಾರ್ವಜನಿಕರು ಉಡುಪಿ ಜಿಲ್ಲೆಯ ಎಂಜಿಎಂ ಕಾಲೇಜಿಗೆ ಆಗಮಿಸಿ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.
2023ರಲ್ಲಿ ಆಯೋಜಿಸಿದ ಮೊದಲ ನಡಿಗೆ ಅಭಿಯಾನದಲ್ಲಿ ಸುಮಾರು 5ರಿಂದ 6 ಸಾವಿರ ಪಾದರಕ್ಷೆಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ ಉಡುಪಿಯ ಜನರಿಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರಕಿದ್ದು, ಬರೋಬ್ಬರಿ 18 ಸಾವಿರ ಪಾದರಕ್ಷೆಗಳನ್ನು ಸಂಗ್ರಹಿಸಲಾಗಿದೆ ಎಂದರು. ಮೊದಲ ಪ್ರಯತ್ನವನ್ನು ಗುರುತಿಸಿದ ಗ್ರೀನ್ ಸೋಲ್ ಫೌಂಡೇಶನ್ ದೇಶದಲ್ಲೇ ಈ ರೀತಿಯ ಅಭಿಯಾನ ಮೊದಲ ಬಾರಿಗೆ ನಡೆದ ಅಭಿಯಾನ ಎಂಬ ಪ್ರಮಾಣ ಪತ್ರವನ್ನೂ ನೀಡಿ ಗೌರವಿಸಿದೆ ಎಂದರು.
ಸಂಗ್ರಹವಾದ ಅಷ್ಟೂ ಪಾದರಕ್ಷೆಗಳನ್ನು ಮುಂಬೈ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಗ್ರೀನ್ಸೋಲ್ (Greensol) ಸಂಸ್ಥೆಗೆ ಕಚ್ಚಾ ವಸ್ತುಗಳ ರೂಪದಲ್ಲಿ ನೀಡಲಿದ್ದು, ಗ್ರೀನ್ ಸೋಲ್ ಫೌಂಡೇಶನ್ ಈ ಪಾದರಕ್ಷೆಗಳಿಂದ ಹೊಸ ಪಾದರಕ್ಷೆಗಳನ್ನು ತಯಾರಿಸಿ ದೇಶದಾದ್ಯಂತ ಇರುವ ಅಶಕ್ತರಿಗೆ, ಪಾದರಕ್ಷೆರಹಿತರಿಗೆ ಉಚಿತವಾಗಿ ನೀಡುತ್ತಾರೆ. ಪರಿಸರಕ್ಕೆ ಪೂರಕವಾಗಿರುವ ಈ ಚಟುವಟಿಕೆಯನ್ನು ಗ್ರೀನ್ಸೋಲ್ ಸಂಸ್ಥೆ 2016ರಿಂದ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ.
ಗ್ರೀನ್ಸೋಲ್ ಫೌಂಡೇಶನ್ ಸಂಸ್ಥಾಪಕರಾದ ರಮೇಶ್ ಧಾಮಿ ಮತ್ತು ಶ್ರಿಯಾನ್ಸ್ ಭಂಡಾರಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವೇಳೆ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕೋಶಾಧಿಕಾರಿ ಭರತ್ ಶೆಟ್ಟಿ, ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ-ಸಂಸ್ಥಾಪಕರಾದ ಅಶ್ವತ್ ಎಸ್.ಎಲ್. ಮಣಿಪಾಲದ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಉಪ ಪ್ರಾಂಶುಪಾಲ ಶರತ್ ಎಸ್. ಆತ್ಮ, ಎಂ.ಜಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚಿತ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
