Home Mangalorean News Kannada News ನೀಟ್ ಹಗರಣ: ವಿದ್ಯಾರ್ಥಿಗಳ ಕನಸುಗಳ ನೋವು ಮೋದಿ ಅವರಿಗೆ ಅರ್ಥವಾಗುತ್ತಿಲ್ಲ ವಿಕಾಸ್ ಹೆಗ್ಡೆ

ನೀಟ್ ಹಗರಣ: ವಿದ್ಯಾರ್ಥಿಗಳ ಕನಸುಗಳ ನೋವು ಮೋದಿ ಅವರಿಗೆ ಅರ್ಥವಾಗುತ್ತಿಲ್ಲ ವಿಕಾಸ್ ಹೆಗ್ಡೆ

Spread the love

ನೀಟ್ ಹಗರಣ: ವಿದ್ಯಾರ್ಥಿಗಳ ಕನಸುಗಳ ನೋವು ಮೋದಿ ಅವರಿಗೆ ಅರ್ಥವಾಗುತ್ತಿಲ್ಲ ವಿಕಾಸ್ ಹೆಗ್ಡೆ

ಕುಂದಾಪುರ: ನೀಟ್ ವಿಚಾರದಲ್ಲಿ ಭವಿಷ್ಯದ ಕನಸುಗಳನ್ನು ಹೊತ್ತಿರುವ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ನ್ಯಾಯ ಕೇಳಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಾಗೂ ಬಾಡಿಗೆ ಗೂಂಡಾಗಳ ಮೂಲಕ ಕೇಂದ್ರ ಸರ್ಕಾರ ದೌರ್ಜನ್ಯ ನಡೆಸಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಸಂಜೆ ಶಾಸ್ತ್ರಿ ಸರ್ಕಲ್ನಲ್ಲಿ ಕುಂದಾಪುರ, ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನೀಟ್ ಪರೀಕ್ಷೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿದಿದ್ದು, ಅಘೋಷಿತ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿದೆ. ವಿದ್ಯಾರ್ಥಿಗಳ ಕನಸುಗಳ ನೋವು ಅವರಿಗೆ ಅರ್ಥವಾಗುತ್ತಿಲ್ಲ. ಪಕ್ಷಭೇದ ಮರೆತು ದೇಶದ ಜನರು ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸಬೇಕು. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವ ಸಿಇಟಿ ವ್ಯವಸ್ಥೆಯನ್ನು ಪುನಃ ಜಾರಿಗೊಳಿಸಲು ಸಂಘಟಿತ ಹೋರಾಟ ನಡೆಯಬೇಕು ಎಂದು ಅವರು ಕರೆ ನೀಡಿದರು.
ನೈತಿಕತೆ ಇದ್ದರೆ ಕೇಂದ್ರದ ಕ್ರಮವನ್ನು ವಿರೋಧಿಸಿ: ಕೋಟ, ಕೊಡ್ಗಿಗೆ ವಿಕಾಸ್ ಸವಾಲು
ಕುಂದಾಪುರದ ಕಾಲೇಜಿನಲ್ಲಿ ಹಿಜಾಬ್ ವಿಚಾರವನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳ ನಡುವೆ ಕೋಮು ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು, ಇದೀಗ ನೀಟ್ ಹಗರಣ ಮತ್ತು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ವಿಚಾರದಲ್ಲಿ ಮೌನವಾಗಿದ್ದಾರೆ. ವಿದ್ಯಾರ್ಥಿಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ, ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಹಾಗೂ ಕೇಂದ್ರ ಸರ್ಕಾರದ ವಿದ್ಯಾರ್ಥಿ ವಿರೋಧಿ ಕ್ರಮಗಳನ್ನು ಬಹಿರಂಗವಾಗಿ ಖಂಡಿಸಬೇಕು. ಧರ್ಮದ ಹೆಸರಿನ ರಾಜಕಾರಣ ಬಿಟ್ಟು ವಿದ್ಯಾರ್ಥಿಗಳ ಭವಿಷ್ಯದ ಪರವಾಗಿ ನಿಲ್ಲಬೇಕು. ದೇಶಕ್ಕಾಗಿ ತ್ಯಾಗ ಮಾಡಿದ ನೆಹರು-ಗಾಂಧಿ ಕುಟುಂಬದ ರಾಹುಲ್ ಗಾಂಧಿಯವರಿಗೆ ಎಷ್ಟೇ ತೊಂದರೆ ನೀಡಿದರೂ ಅವರು ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುತ್ತಾರೆ ಎಂದು ವಿಕಾಸ್ ಹೆಗ್ಡೆ ಗುಡುಗಿದರು.

ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳ ನ್ಯಾಯಕ್ಕಾಗಿ ವಾಂಗ್ಚುಕ್ ಕಳೆದ 20 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸದೆ, ಅವರ ಇಚ್ಛೆಗೆ ವಿರುದ್ಧವಾಗಿ ಆಸ್ಪತ್ರೆಗೆ ದಾಖಲಿಸಿರುವುದು ಖಂಡನೀಯ. ವಿದ್ಯಾರ್ಥಿಗಳ ನ್ಯಾಯಯುತ ಹೋರಾಟವನ್ನು ಬಲಪ್ರಯೋಗದಿಂದ ಹತ್ತಿಕ್ಕಬಹುದು ಎನ್ನುವ ಕೇಂದ್ರ ಸರ್ಕಾರದ ಭ್ರಮೆ ಸುಳ್ಳಾಗಿದೆ. ಮಕ್ಕಳ ಮೇಲೆ ಅಮಾನುಷವಾಗಿ ದೌರ್ಜನ್ಯ ಎಸಗಿ ತನ್ನ ಸರ್ವಾಧಿಕಾರಿ ಮನೋಭಾವವನ್ನು ಪ್ರದರ್ಶಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ಬಂಧನವೂ ಖಂಡನೀಯ ಎಂದು ಹೇಳಿದರು.

ತಾ.ಪಂ. ಮಾಜಿ ಸದಸ್ಯ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ನೀಟ್ ಹಗರಣ ಇಂದು ಕೇವಲ ಪರೀಕ್ಷಾ ಅಕ್ರಮದ ವಿಷಯವಾಗಿ ಉಳಿದಿಲ್ಲ. ಅದು ದೇಶವ್ಯಾಪಿ ಜನಾಂದೋಲನವಾಗಿ ರೂಪುಗೊಂಡಿದೆ. ಸಂವಿಧಾನವು ನ್ಯಾಯಕ್ಕಾಗಿ ಶಾಂತಿಯುತವಾಗಿ ಹೋರಾಡುವ ಹಕ್ಕು ನೀಡಿದ್ದರೂ, ಕೇಂದ್ರ ಸರ್ಕಾರ ಪ್ರತಿಭಟನಾಕಾರರನ್ನು ಬಲಪ್ರಯೋಗದಿಂದ ಹತ್ತಿಕ್ಕುವ ಮೂಲಕ ಸಂವಿಧಾನದ ಆಶಯವನ್ನೇ ಅಣಕಿಸುತ್ತಿದೆ ಎಂದು ಅವರು ಆರೋಪಿಸಿದರು.

ಕೆಪಿಸಿಸಿ ಸದಸ್ಯ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಮ್ಮ ಪೂಜಾರಿ ಮಣೂರು ಹಾಗೂ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿದರು.

ಪ್ರತಿಭಟನೆ ವೇಳೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಘಟಕದ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಜಿಲ್ಲಾಧ್ಯಕ್ಷ ರೋಶನ್ ಕುಮಾರ್ ಶೆಟ್ಟಿ, ಎನ್ಎಸ್ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸುಜನ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಮಂತ್ ಎಸ್ ಕರ್ಕೇರ, ಎನ್ಎಸ್ಯುಐ ಮುಖಂಡ ವಿವೇಕ್ ಕುಂದಾಪುರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುನಾಫ್ ಕೋಡಿ, ಪ್ರಮುಖರಾದ ದೇವಕಿ ಪಿ.ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಕೇಶವ ಭಟ್, ವಿಜಯಾಧರ ಪೂಜಾರಿ, ಚಂದ್ರ ಎ ಅಮಿನ್, ಅಬು ಮೊಹಮ್ಮದ್, ಸುರೇಶ್ ನಾಯ್ಕ್ ಆನಗಳ್ಳಿ, ಜೋಯ್ಸ್ಟನ್ ಕಳಂಜಿ, ಗಣೇಶ್ ಶೇರುಗಾರ್, ರಫೀಕ್ ಗಂಗೊಳ್ಳಿ, ಸುನಿಲ್ ಪೂಜಾರಿ ಕೋಡಿ, ರಿಯಾಝ್ ಕೋಡಿ, ರಮೇಶ್ ಶೆಟ್ಟಿ ವಕ್ವಾಡಿ, ಪ್ರಭಾಕರ ಕೋಡಿ ರೇವತಿ ಶೆಟ್ಟಿ, ಜ್ಯೋತಿ ವಿ ಪುತ್ರನ್, ಮೊಹಮ್ಮದ್ ಎಂ ಕೋಡಿ, ಆಶಾ ಕರ್ವೆಲ್ಲೊ, ಗೀತಾ, ಅಶೋಕ್ ಸುವರ್ಣ, ಶಶಿಧರ ಕೋಟಿ, ಅಬಿಬ್ ಹಂಗಳೂರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಶೆಟ್ಟಿ ಕೆದೂರು ಸ್ವಾಗತಿಸಿದರು. ನಗರಾಭಿವೃದ್ದಿ ಪ್ರಾಧಿಲಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ನಿರೂಪಿಸಿದರು. ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಗೋಪಾಲ ಬಂಗೇರ ವಂದಿಸಿದರು.


Spread the love

Exit mobile version