ಸಾಮಾಜಿಕ ಜಾಲತಾಣದಲ್ಲಿ ನಯನಾ ಮೋಟಮ್ಮ ವಿರುದ್ದ ಅಶ್ಲೀಲ ಕಾಮೆಂಟ್: ಆರೋಪಿ ಬಂಧನ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಹಾಗೂ ಅವಮಾನಕಾರಿ ಕಾಮೆಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ರಾಮನಗರ ಮೂಲದ ಯಕ್ಷಿತ್ ರಾಜ್ ಎಂಬ ಯುವಕನನ್ನು ಮೂಡಿಗೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶಾಸಕಿ ನಯನಾ ಮೋಟಮ್ಮ ಇನ್ಸ್ಟಾಗ್ರಾಮ್ನಲ್ಲಿ ಎರಡು ಅಧಿಕೃತ ಖಾತೆ ಹೊಂದಿದ್ದಾರೆ. ವೈಯಕ್ತಿಕ ವಿಚಾರ ಹಂಚಿಕೊಳ್ಳಲು ಒಂದು ಖಾತೆಯಾದರೆ ರಾಜಕೀಯ ವಿಚಾರ ಹಂಚಿಕೊಳ್ಳಲು ಮತ್ತೊಂದು ಖಾತೆ. ಖಾಸಗಿ ಪ್ರವಾಸ, ವೈಯಕ್ತಿಕ ವಿಚಾರ ಹಂಚಿಕೊಳ್ಳುತ್ತಿದ್ದ ವೈಯಕ್ತಿಕ ಖಾತೆಯಲ್ಲಿ ಬಟ್ಟೆ ಬಗ್ಗೆ ಕಿಡಿಗೇಡಿಗಳು ಅಶ್ಲೀಲ ಕಾಮೆಂಟ್ ಮಾಡಿದ್ದಾರೆ. ಈ ಕುರಿತು ಮೋಟಮ್ಮ ಅವರ ಪಿಎ ಸಂಸುದ್ದೀನ್ ಅವರು ಕಳೆದ ಅಕ್ಟೋಬರ್ ತಿಂಗಳಲ್ಲೇ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆರೋಪಿಯು ನಿರಂತರವಾಗಿ ಶಾಸಕಿ ಅವರ ಬಟ್ಟೆ ವಿಚಾರವಾಗಿ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸುವ ಪ್ರಯತ್ನ ನಡೆಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ತನಿಖೆಯ ಬಳಿಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯಕ್ಷಿತ್ ರಾಜ್ನನ್ನು ಬಂಧಿಸಲಾಗಿದೆ.
