ಅಲೆವೂರಿನಲ್ಲಿ ಅಧಿಕಾರಿಗಳ ದಾಳಿ: ಕೃತಕ ಬಣ್ಣದ 5,000 ಕೆಜಿ ಬಾಳೆಕಾಯಿ ವಶ
ಉಡುಪಿ: ದೇಶದ ಹಲವೆಡೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ ಸೇವಿಸಲು ಯೋಗ್ಯವಲ್ಲದ ಆಹಾರ ಉತ್ಪನ್ನಗಳನ್ನು ಪತ್ತೆ ಮಾಡುತ್ತಿರುವ ನಡುವೆಯೇ, ಸಾಮಾನ್ಯರು ಹೆಚ್ಚಾಗಿ ಬಳಸುವ ಬಾಳೆಹಣ್ಣಿಗೂ ಕೃತಕ ಬಣ್ಣ ಹಚ್ಚಿ ಮಾರಾಟ ಮಾಡುತ್ತಿದ್ದ ಜಾಲ ಉಡುಪಿಯಲ್ಲಿ ಬಯಲಾಗಿದೆ.
ಗುರುವಾರ (ಆ.20) ಉಡುಪಿ ತಾಲೂಕಿನ ಅಲೆವೂರಿನಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ (ಎಸಿ) ನೇತೃತ್ವದ ತಂಡ ಬಾಳೆಕಾಯಿ ಮಂಡಿಗೆ ದಾಳಿ ನಡೆಸಿದ್ದು, ಕೃತಕ ಬಣ್ಣ ಹಚ್ಚಿ ಮಾರಾಟಕ್ಕೆ ಸಿದ್ಧಪಡಿಸಿದ್ದ ಸುಮಾರು 5 ಸಾವಿರ ಕೆಜಿ ಬಾಳೆಕಾಯಿಗಳನ್ನು ಸೀಜ್ ಮಾಡಿದೆ. ವಶಪಡಿಸಿಕೊಂಡ ಬಾಳೆಕಾಯಿಗಳ ಮೌಲ್ಯ ಸುಮಾರು 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ದಾಳಿ ವೇಳೆ ಬಾಳೆಕಾಯಿಗಳಿಗೆ ಕೃತಕ ಬಣ್ಣ ಹಚ್ಚಲು ಬಳಸುತ್ತಿದ್ದ ರಾಸಾಯನಿಕಗಳನ್ನು ಕೂಡ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಎಡಿಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಉಪ ವಿಭಾಗಾಧಿಕಾರಿ ರಶ್ಮಿ ನೇತೃತ್ವದ ತಂಡವು ಅಲೆವೂರಿನ ಮೂರು ಕಡೆ ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದು, ಈ ವೇಳೆ ಅಕ್ರಮ ಬಯಲಾಗಿದೆ.
ದಾಳಿ ನಡೆಸಿದ ತಂಡದಲ್ಲಿ ಆರೋಗ್ಯ ಪರಿವೀಕ್ಷಣಾಧಿಕಾರಿ ವಿವೇಕ್ ತಿರುಮಲ, ತಹಶೀಲ್ದಾರ್ ಗುರುರಾಜ್, ಗ್ರಾಮ ಲೆಕ್ಕಾಧಿಕಾರಿಗಳಾದ ಕಾರ್ತಿಕ್ ಭಟ್, ವಿಜಯ ಹಾಗೂ ಆಹಾರ ನಿರೀಕ್ಷಕ ಲೀಲಾನಂದ ಇದ್ದರು.
