ಬ್ರಹ್ಮಾವರದಲ್ಲಿ ಪಂಚ ಗ್ಯಾರಂಟಿ ಸಮಾವೇಶ: “ನುಡಿದಂತೆ ನಡೆದ ಸರ್ಕಾರ” – ಪ್ರಸಾದ್ ರಾಜ್ ಕಾಂಚನ್
ಉಡುಪಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆದು ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ.
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆದ ಪಂಚ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದಿದ್ದರೂ ಗ್ಯಾರಂಟಿ ಯೋಜನೆಗಳನ್ನು ಹೆಚ್ಚಿನ ಸಂಖ್ಯೆಯ ಜನರಿಗೆ ತಲುಪಿಸಲಾಗಿದೆ. ಆರಂಭದಲ್ಲಿ ಯೋಜನೆಗಳನ್ನು ಟೀಕಿಸಿದ್ದ ಬಿಜೆಪಿ ಇದೀಗ ಇತರ ರಾಜ್ಯಗಳಲ್ಲಿ ಇದೇ ಮಾದರಿಯ ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಿದೆ ಎಂದು ಟೀಕಿಸಿದರು. 2014ರಿಂದ ಬಿಜೆಪಿ ಆಡಳಿತದಲ್ಲಿ ಬಡವರಿಗೆ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ನಾಯಕರನ್ನು ನಂಬಬೇಡಿ ಎಂದು ಕರೆ ನೀಡಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಬಿಜೆಪಿ ಚುನಾವಣೆಗಾಗಿ ಭಾವನಾತ್ಮಕ ವಿಚಾರಗಳನ್ನು ಮುಂದಿರಿಸುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಬಡಜನರಿಗೆ ನೇರವಾಗಿ ಉಪಯೋಗವಾಗುವ ಯೋಜನೆಗಳನ್ನು ನೀಡುತ್ತಿದೆ. ನಾವು ನೀಡಿದ ಮಾತಿನಂತೆ ಕಾರ್ಯನಿರ್ವಹಿಸಿದ್ದೇವೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ನೀಡಿದರೆ ಸಾಧ್ಯವಾಗುತ್ತದೆ ಎಂದಾದರೆ ಬಿಜೆಪಿಗೆ ಯಾಕೆ ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿದರು.
ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಕಾಂಗ್ರೆಸ್ ಸರ್ಕಾರವು 5 ಕೆಜಿ ಅಕ್ಕಿ ಹಾಗೂ ಅದರ ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡುತ್ತಿದೆ. 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುವುದರಿಂದ ಬಡ ಮತ್ತು ಮಧ್ಯಮ ವರ್ಗದವರಿಗೆ ನೆರವಾಗಿದೆ. ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಗಿನ್ನೆಸ್ ದಾಖಲೆಗೂ ಪಾತ್ರವಾಗಿದೆ. ಬಿಜೆಪಿಯವರು ಮಹಿಳೆಯರ ಪರವಾಗಿ ಮಾತನಾಡುತ್ತಿದ್ದರೂ ಬಡ ಮಹಿಳೆಯರಿಗೆ ಏನು ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಉಡುಪಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಪೂಜಾರಿ ಹೇರೂರು, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಮುಖಂಡರಾದ ಡಾ. ಸುನೀತಾ ಶೆಟ್ಟಿ, ರಮೇಶ್ ತಿಂಗಳಾಯ, ಅಬ್ಬು ಸಾಹೇಬ್, ರ್ಪಭಾಕರ ಶೆಟ್ಟಿ, ಜಯಂತಿ ಪೂಜಾರಿ, ಯೋಗೀಶ್ ಪೂಜಾರಿ, ಸುದೇಶ್ ಶೆಟ್ಟಿ, ಜಸಿಂತಾ ಪಾಯಸ್, ಲಕ್ಷ್ಮೀಶ್ ಶೆಟ್ಟಿ, ಬ್ರಹ್ಮಾವರ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಕುಮಾರ್ ಸುವರ್ಣ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
