ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ, ಸುರಕ್ಷತೆಯು ನಿರ್ಮಿತಿ ಕೇಂದ್ರದ ಜವಾಬ್ದಾರಿ : ಜಿಲ್ಲಾಧಿಕಾರಿ ಸೂಚನೆ
ಉಡುಪಿ: ಕಾರ್ಕಳ ತಾಲೂಕು ಬೈಲೂರು ಗ್ರಾಮದ ಯರ್ಲಪಾಡಿ ಉಮಿಕಲ್ಬೆಟ್ಟದ ಮೇಲೆ ನಿರ್ಮಾಣ ಗೊಂಡು ಈಗ ವಿವಾದದ ಕೇಂದ್ರ ಬಿಂದುವಾಗಿರುವ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಮುಕ್ತಾಯ ಗೊಳ್ಳುವವರೆಗೂ ಇದರ ನಿರ್ವಹಣೆ ಹಾಗೂ ಸುರಕ್ಷತೆ ಅನುಷ್ಠಾನ ಸಂಸ್ಥೆ ಯಾದ ನಿರ್ಮಿತಿ ಕೇಂದ್ರದ್ದಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸ್ಪಷ್ಟಪಡಿಸಿದ್ದಾರೆ.

ಥೀಮ್ ಪಾರ್ಕ್ನ ಸ್ವಚ್ಛತೆ ಹಾಗೂ ಸುರಕ್ಷತೆ ಉಡುಪಿಯ ನಿರ್ಮಿತಿ ಕೇಂದ್ರದ ಜವಾಬ್ದಾರಿಯಾಗಿದ್ದು, ಕಾಮಗಾರಿ ಪೂರ್ಣಗೊಂಡು ಹಸ್ತಾಂತರ ವಾಗುವವರೆಗೆ ಥೀಮ್ ಪಾರ್ಕ್ನಲ್ಲಿರುವ ಬೆಲೆಬಾಳುವ ಎಲೆಕ್ಟ್ರಾನಿಕ್ಸ್ ಉಪಕರಣ ಗಳು, ಸಾಮಗ್ರಿಗಳು ಹಾಗೂ ಇತರೆಲ್ಲಾ ವಸ್ತುಗಳ ಸುರಕ್ಷತೆ ಸೇರಿದಂತೆ ಪಾರ್ಕ್ನ ನಿರ್ವಹಣೆಯನ್ನು ಸಂಸ್ಥೆಯೇ ಅದನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಈ ವಿಷಯದಲ್ಲಿ ಯಾವುದೇ ಸಮಸ್ಯೆಗಳಿಗೆ ಆಸ್ಪದ ನೀಡದೇ ನಿರ್ವಹಣೆ ಮಾಡಬೇಕು. ಜೊತೆಗೆ ಈ ಕೆಳಕಂಡ ಅಂಶಗಳನ್ನು ಪಾಲಿಸುವಂತೆ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚಿಸಿದ್ದಾರೆ.
ಪ್ರಮುಖ ನಿರ್ದೇಶನ: ಪರಶುರಾಮ ಥೀಮ್ ಪಾರ್ಕ್ನ ಆವರಣದಲ್ಲಿ ಸ್ವಚ್ಛತಾ ಕಾರ್ಯ, ಗಿಡಗಂಟಿ ತೆರವು ಹಾಗೂ ಕಸ ವಿಲೇವಾರಿ ಕಾರ್ಯಗಳನ್ನು ಕೂಡಲೇ ಕೈಗೊಳ್ಳಬೇಕು. ಥೀಮ್ ಪಾರ್ಕ್ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಪಾರ್ಕ್ ಆವರಣದಲ್ಲಿ ಕೂಡಲೇ ಸಿಸಿ ಕ್ಯಾಮೆರಾ ಅಳವಡಿಸಬೇಕು. ಈ ಸ್ಥಳದಲ್ಲಿ ಭದ್ರತಾ ದೃಷ್ಟಿಯಿಂದ ದಿನದ 24 ಗಂಟೆಯೂ ಕಾವಲುಗಾರರನ್ನು ನಿಯೋಜಿಸಲು ಕ್ರಮಕೈಗೊಳ್ಳಬೇಕು.
ಸಾರ್ವಜನಿಕ ಪ್ರವೇಶ ನಿರ್ಬಂಧ: ಅಧಿಕೃತ ವ್ಯಕ್ತಿಗಳನ್ನು ಹೊರತುಪಡಿಸಿ, ಥೀಮ್ಪಾರ್ಕ್ಗೆ ಸಾರ್ವಜನಿಕರು ಸೇರಿದಂತೆ ಯಾರೊಬ್ಬರೂ ಪ್ರವೇಶಿಸ ದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ತನಿಖೆ ನಡೆಯುತ್ತಿರುವುದರಿಂದ ಇಲ್ಲಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಥೀಮ್ ಪಾರ್ಕ್ ಪ್ರದೇಶಕ್ಕೆ ಯಾರಾದರೂ ಅತಿಕ್ರಮಣ ಪ್ರವೇಶ ಮಾಡಿದರೆ ಅವರ ವಿರುದ್ಧ ಎಫ್ಐಆರ್ ಅಥವಾ ಬಿಎನ್ಎಸ್ಎಸ್ 2023ರ ಅಡಿಯಲ್ಲಿ ಮೊಕ್ಕದ್ದಮೆ ದಾಖಲಿಸಬೇಕು ಹಾಗೂ ಥೀಮ್ ಪಾರ್ಕ್ನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮವಹಿಸಬೇಕು.
ಥೀಮ್ ಪಾರ್ಕ್ ಸ್ಥಳದಲ್ಲಿರುವ ಅಮೂಲ್ಯ ವಸ್ತುಗಳು, ನಿರ್ಮಾಣ ಸಾಮಾಗ್ರಿಗಳು ಸುಸ್ಥಿತಿಯಲ್ಲಿರುವಂತೆ ನೋಡಿ ಕೊಳ್ಳಬೇಕು. ಥೀಮ್ ಪಾರ್ಕ್ ಕಾಮಗಾರಿ ಮುಕ್ತಾಯಗೊಳ್ಳುವವರೆಗೂ ಥೀಮ್ ಪಾರ್ಕ್ನ ಸಂಪೂರ್ಣ ಜವಾಬ್ದಾರಿ ಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಗಳು ನಿರ್ಮಿತಿ ಕೇಂದ್ರಕ್ಕೆ ಸೂಚನೆಗಳನ್ನು ನೀಡಿದ್ದಾರೆ.
ಮೇಲಿನ ಈ ಎಲ್ಲಾ ವಿಷಯಗಳ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಅನುಪಾಲನ ವರದಿಯನ್ನು ಜನವರಿ 10ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ನೀಡಬೇಕು. ಅಲ್ಲದೇ ಪ್ರತಿ ವಾರ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸ್ವಚ್ಛತೆಯ ಮೇಲುಸ್ತು ವಾರಿ ವಹಿಸಿಕೊಂಡು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಜಿ.ಪಿ.ಎಸ್ ಫೋಟೋದೊಂದಿಗೆ ವರದಿ ನೀಡುವಂತೆ ಸೂಚಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶದಲ್ಲಿ ತಿಳಿಸಿದ್ದಾರೆ.
ಸ್ವಚ್ಛತಾ ಕಾರ್ಯ ಆರಂಭ: ಜಿಲ್ಲಾಧಿಕಾರಿಗಳ ಸೂಚನೆಯಂತೆ ನಿರ್ಮಿತಿ ಕೇಂದ್ರ ಪರಶುರಾಮ ಥೀಮ್ ಪಾರ್ಕ್ ಪರಿಸರದ ಸ್ವಚ್ಛತಾ ಕಾರ್ಯವನ್ನು ಪ್ರಾರಂಭಿಸಿದೆ. ಸಾರ್ವಜನಿಕರಿಗೆ ಅವಕಾಶ ನೀಡದೇ ಇಲಾಖೆಯ ಮೂಲಕವೇ ಇದನ್ನು ನಡೆಸಲು ತೀರ್ಮಾನಿಸಲಾಗಿದೆ.
ಈಗಾಗಲೇ ಸ್ವಚ್ಛತಾ ಸಿಬ್ಬಂದಿಗಳು ಬೆಟ್ಟದ ಬುಡದಿಂದ ತುದಿಯಲ್ಲಿರುವ ಪರಶುರಾಮ ಥೀಮ್ ಪಾರ್ಕ್ವರೆಗಿನ ಸಂಪರ್ಕ ರಸ್ತೆಯ ಆಸುಪಾಸಿನಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿರುವ ಹುಲ್ಲು, ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡುತಿದ್ದಾರೆ.