ಪೆಟ್ರೋಲ್, ಡೀಸೆಲ್ ದರ ಭರ್ಜರಿ ಏರಿಕೆ; ಜನಸಾಮಾನ್ಯರಿಗೆ ಬೆಲೆ ಏರಿಕೆಯ ಆಘಾತ
ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 3 ರೂ. ಏರಿಕೆಯಾಗಿದೆ. ಇಂಧನ ದರ ಏರಿಕೆ ಬಗ್ಗೆ ತೈಲ ಕಂಪನಿಗಳು ಶುಕ್ರವಾರ ಬೆಳಗ್ಗೆ ಘೋಷಣೆ ಮಾಡಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ. ಸದ್ಯ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈಗ ಲೀಟರ್‌ಗೆ 97.77 ರೂ.ಗಳಿಂದ 94.77 ರೂ.ಗಳಿಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ 87.67 ರೂ.ಗಳಿಂದ 90.67 ರೂ.ಗಳಿಗೆ ಏರಿಕೆಯಾಗಿದೆ. ಆಯಾ ರಾಜ್ಯಗಳಲ್ಲಿ ಸ್ಥಳೀಯ ತೆರಿಗೆಗಳಿಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಲ್ಲಿ ತುಸು ವ್ಯತ್ಯಾಸವಾಗಬಹುದು.
ಬೆಂಗಳೂರಿನಲ್ಲಿ ಎಷ್ಟಾಯ್ತು ಪೆಟ್ರೋಲ್ ದರ?
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 3.27 ರೂಪಾಯಿ ಏರಿಕೆಯಾಗಿದ್ದು, ಡಿಸೇಲ್ ಬೆಲೆ ಲೀಟರ್‌ಗೆ 3.12 ರೂಪಾಯಿ ಏರಿಕೆಯಾಗಿದೆ. ಈ ಹಿಂದೆ ಪೆಟ್ರೋಲ್ ಬೆಲೆ 102.90 ರೂ. ಇತ್ತು. ಈಗ 106.17 ರೂ. ಆಗಿದೆ. ಡಿಸೇಲ್ ಬೆಲೆ 90.98 ರೂ. ಇತ್ತು. ಈಗ 94.10 ರೂ. ಆಗಿದೆ.
ಪೆಟ್ರೋಲ್, ಡೀಸೆಲ್ ದರ: ಯಾವ ನಗರದಲ್ಲಿ ಎಷ್ಟಿದೆ?
ಕೋಲ್ಕತ್ತಾದಲ್ಲಿ ಪೆಟ್ರೋಲ್ ಈಗ ಲೀಟರ್‌ಗೆ 3.29 ರೂ. ಹೆಚ್ಚಳವಾಗಿ 108.74 ರೂ.ಗೆ ಮಾರಾಟವಾಗುತ್ತಿದೆ. ಡೀಸೆಲ್ ಲೀಟರ್‌ಗೆ 3.11 ರೂ.ಗಳಷ್ಟು ಏರಿಕೆಯಾಗಿ 95.13 ರೂ.ಗೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 3.14 ರೂ. ಏರಿಕೆಯಾಗಿ 106.68 ರೂ.ಗೆ ತಲುಪಿದೆ, ಡೀಸೆಲ್ ಬೆಲೆ ಈಗ ಲೀಟರ್‌ಗೆ 3.11 ರೂ. ಏರಿಕೆಯಾಗಿ 93.14 ರೂ.ಗೆ ತಲುಪಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 2.83 ರೂ. ಏರಿಕೆಯಾಗಿ 103.67 ರೂ.ಗೆ ತಲುಪಿದೆ ಮತ್ತು ಡೀಸೆಲ್ ದರ ಲೀಟರ್‌ಗೆ 2.86 ರೂ. ಏರಿಕೆಯಾಗಿ 95.25 ರೂ.ಗೆ ತಲುಪಿದೆ.
ಇಂಧನ ಬೆಲೆ ಏರಿಕೆ ತಪ್ಪಿಸಿದ್ದ ತೈಲ ಕಂಪನಿಗಳು
ಮಧ್ಯಪ್ರಾಚ್ಯ ಸಂಘರ್ಷ, ಯುದ್ಧದ ಸನ್ನಿವೇಶ, ಕಚ್ಚಾ ತೈಲ ಬೆಲೆ ಭಾರೀ ಏರಿಕೆ ಇತ್ಯಾದಿಗಳ ಹೊರತಾಗಿಯೂ ಭಾರತ ಈವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ತಪ್ಪಿಸಿತ್ತು. ಬದಲಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳುತೆರಿಗೆ ಹೊಂದಾಣಿಕೆಗಳು ಮತ್ತು ಪೂರೈಕೆ ನಿರ್ವಹಣಾ ಕ್ರಮಗಳ ಮೂಲಕ ಒತ್ತಡವನ್ನು ನಿಭಾಯಿಸಿದ್ದವು.
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ್ದ ಕೇಂದ್ರ ಸರ್ಕಾರ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರವು 2026 ರ ಮಾರ್ಚ್ 27 ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂಪಾಯಿಗಳಷ್ಟು ಕಡಿತಗೊಳಿಸಿತ್ತು. ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಅಬಕಾರಿ ಸುಂಕ 3 ರೂಪಾಯಿಗೆ ಮತ್ತು ಡೀಸೆಲ್‌ಗೆ ಶೂನ್ಯಕ್ಕೆ ಇಳಿದಿತ್ತು. ಆದರೆ, ಇದರ ಪರಿಣಾಮವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗಿರಲಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದ ತೈಲ ಕಂಪನಿಗಳಿಗೆ ಆಗಬಹುದಾದ ನಷ್ಟವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಹಾಗೂ ಬೆಲೆ ಏರಿಕೆ ತಡೆಯುವುದಕ್ಕಾಗಿ ಸುಂಕ ಇಳಿಕೆ ನಿರ್ಧಾರ ಕೈಗೊಳ್ಳಲಾಗಿತ್ತು.
ಬೆಲೆ ಏರಿಕೆ ಸುಳಿವು ನೀಡಿದ್ದ ಕೇಂದ್ರ
ಜಾಗತಿಕ ಇಂಧನ ವ್ಯಾಪಾರ ಮಾರ್ಗಗಳಲ್ಲಿನ ಅಡಚಣೆಗಳ ಹೊರತಾಗಿಯೂ, ತಕ್ಷಣದ ಪೂರೈಕೆ ಅಡಚಣೆಯನ್ನು ತಪ್ಪಿಸಲು ಭಾರತವು ಪ್ರಸ್ತುತ ಸಾಕಷ್ಟು ಇಂಧನ ದಾಸ್ತಾನು ಹೊಂದಿದೆ ಎಂದು ಈ ವಾರದ ಆರಂಭದಲ್ಲಿ ತೈಲ ಇಲಾಖೆ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದರು. ಆದರೂ ಕಚ್ಚಾ ತೈಲ ಬೆಲೆಗಳು ಇನ್ನಷ್ಟು ಹೆಚ್ಚುತ್ತಲೇ ಇದ್ದರೆ ಮತ್ತು ಚಿಲ್ಲರೆ ಇಂಧನ ಬೆಲೆಗಳನ್ನು ಪರಿಷ್ಕರಿಸದಿದ್ದರೆ, ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಒಂದೇ ತ್ರೈಮಾಸಿಕದೊಳಗೆ ಸುಮಾರು 1 ಲಕ್ಷ ಕೋಟಿ ರೂ. ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದರು.
