ಕಸ್ತೂರಿ ರಂಗನ್ ವರದಿಯ ಬಗ್ಗೆ ವರ್ಷದೊಳಗೆ ತಳ ಮಟ್ಟದಿಂದ ಭೌತಿಕ ಸಮೀಕ್ಷೆ: ರಾಮಲಿಂಗ ರೆಡ್ಡಿ
ಮಂಗಳೂರು: ಕಸ್ತೂರಿ ರಂಗನ್ ವರದಿಯ ಬಗ್ಗೆ ಒಂದು ವರ್ಷದೊಳಗೆ ಭೌತಿಕ ಸಮೀಕ್ಷೆ ನಡೆಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅರಣ್ಯ ,ಪರಿಸರ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಅವರು ರವಿವಾರ ಕರಾವಳಿಗೆ ಭೇಟಿ ನೀಡಿದ ಬಳಿಕ ನಗರದ ಪಿಲಿಕುಳ ನಿಸರ್ಗ ಧಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕಸ್ತೂರಿ ರಂಗನ್ ವರದಿಯನ್ನು 6ಬಾರಿ ತಿರಸ್ಕರಿಸಿ ರಾಜ್ಯ ಸರಕಾರ ತೀರ್ಮಾನ ತೆಗೆದುಕೊಂಡಿತ್ತು.ಇದೀಗ ಏಳನೆ ಬಾರಿಗೆ ತಳ ಮಟ್ಟದಲ್ಲಿ ಸಮೀಕ್ಷೆ ನಡೆಸಿ ಒಂದು ವರ್ಷದೊಳಗೆ ಇಲ್ಲಿನ ವಾಸ್ತವಿಕ ಚಿತ್ರಣ ನೀಡಲು ಕೇಂದ್ರ ಸರಕಾರ ದಿಂದ ಅನುಮತಿ ಕೋರಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಕಾರ್ಯ ಪ್ರವೃತ್ತರಾಗಲು ಸೂಚನೆ ನೀಡಲಾಗಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.
ಸಿಆರ್ ಝೆಡ್ ನಿಯಮಾವಳಿ ಸರಳಗೊಳಿಸಲು ರಾಜ್ಯ ಸರಕಾರದಿಂದ ಈಗಾಗಲೇ ಕೇಂದ್ರ ಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಮ ಲಿಂಗ ರೆಡ್ಡಿ ತಿಳಿಸಿದ್ದಾರೆ.
ರಾಜ್ಯದ ಕರಾವಳಿಯಲ್ಲಿ ಪ್ರವಾಸೋದ್ಯಮ, ಮೀನುಗಾರಿಕೆ, ಕಾಂಡ್ಲಾ ಕಾಡುಗಳು, ಅಳಿವಿನಂಚಿನಲ್ಲಿರುವ ಜೀವ ವೈವಿಧ್ಯತೆಯ ಸಂರಕ್ಷಣೆಗೆ ,ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರದಂತೆ ಮಾಲಿನ್ಯ ತಡೆಗೆ ನಾಲ್ಕು ಇಲಾಖೆಗಳ ಮೂಲಕ ಕಾರ್ಯ ಯೋಜನೆಯೊಂದಿಗೆ ಒತ್ತು ನೀಡಲಾಗುವುದು ಎಂದು ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ. ಪಿಲಿಕುಳ ಮೃಗಾಲಯವನ್ನು ರಾಜ್ಯದ ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡುವ ಬಗ್ಗೆ ತೀರ್ಮಾ ನಿಸಲಾಗಿದೆ ಎಂದು ರಾಮಲಿಂಗ ರೆಡ್ಡಿ ಮಾಹಿತಿ ನೀಡಿದ್ದಾರೆ.
ಸುಳ್ಯದಲ್ಲಿ ಆನೆ ಕ್ಯಾಂಪ್ ಮಾಡುವ ಬಗ್ಗೆ ಸಮೀಕ್ಷೆ ನಡೆಸಲಾಗಿದೆ.ಬಳಿಕ ಬಂದ ವರದಿಯ ಪ್ರಕಾರ ಸದ್ರಿ ಸ್ಥಳ ಆನೆ ಕ್ಯಾಂಪ್ ನಡೆಸಲು ಸೂಕ್ತವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ,ಅರಣ್ಯ ಸಂರಕ್ಷಣಾ ಧಿಕಾರಿ ಕಮಲ ಕರಿಕಲನ್,ಉಪ ಅರಣ್ಯ ಸಂರಕ್ಷಣಾ ಧಿಕಾರಿ ರವಿಶಂಕರ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಡಾ.ವಿ. ಕರಿಕಲನ್,ಪಿಲಿಕುಳ ಅಭಯ ಪ್ರಾಧಿಕಾರದ ಆಯುಕ್ತ ಡಾ.ಅರುಣ್ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.
