ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿಯಾದ ಆರೋಪಿಗಳನ್ನು ಕೆಲವೇ ಘಂಟೆಗಳಲ್ಲಿ ಬಂಧಿಸಿದ ಪೊಲೀಸರು
ಶಿರ್ವ: ಮನೆ ಹಿಂಭಾಗದಲ್ಲಿ ಮಲ್ಲಿಗೆ ಕಟ್ಟುತ್ತಿದ್ದ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿಯಾದ ಮೂವರು ಆರೋಪಿಗಳನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ಫೆಬ್ರವರಿ 21ರಂದು ಬೆಳಿಗ್ಗೆ ಸುಮಾರು 9.30ರ ವೇಳೆಗೆ ಶಂಕರಪುರ ಕುರ್ಕಾಲು ಗ್ರಾಮ, ಕಾಪು ನಿವಾಸಿ ಹೆಲೆನ್ ಡಿಸೋಜಾ (69) ಅವರು ತಮ್ಮ ಮನೆಯ ಹಿಂಭಾಗದಲ್ಲಿ ಗೀತಾ ಅವರೊಂದಿಗೆ ಮಲ್ಲಿಗೆ ಕಟ್ಟುತ್ತಿದ್ದ ವೇಳೆ, ಈ ಹಿಂದೆ ಬಾಡಿಗೆಗೆ ಇದ್ದ ಆನಂದ ಹಾಗೂ ಇನ್ನಿಬ್ಬರು ವ್ಯಕ್ತಿಗಳು ಬಾಡಿಗೆ ರೂಮ್ ವಿಚಾರಿಸಲು ಬಂದಿದ್ದರು.
ಮಾತನಾಡುತ್ತಾ ಚಹಾ ಕುಡಿದ ನಂತರ, ರೂಮ್ ಖಾಲಿ ಇಲ್ಲವೆಂದು ತಿಳಿಸಿದ ಹಿನ್ನೆಲೆಯಲ್ಲಿ ಆರೋಪಿಗಳು ಪಕ್ಕದ ಮನೆಯಲ್ಲಿರುವ ಅವರ ಅಕ್ಕ ತೆರಜಾ ಅವರ ಮನೆ ಕಡೆಗೆ ತೆರಳಿದ್ದರು. ಬಳಿಕ ಸುಮಾರು 9.45ರ ಸುಮಾರಿಗೆ ಅವರ ಪೈಕಿ ಒಬ್ಬರು ಮರಳಿ ಬಂದು ಮೊಬೈಲ್ ನಂಬರ್ ಕೇಳಿದ ವೇಳೆ, ಪಿರ್ಯಾದಿದಾರರು ನಂಬರ್ ಹೇಳುತ್ತಿದ್ದಾಗ ಕುತ್ತಿಗೆಯಲ್ಲಿದ್ದ ಸುಮಾರು 28 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಹೋಗಿದ್ದಾರೆ.
ತಡೆಯಲು ಮುಂದಾದ ಅವರ ಅಕ್ಕ ತೆರಜಾ ಅವರನ್ನು ದೂಡಿ ಹಾಕಿ, ಮೂವರು ಆರೋಪಿಗಳು ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಕಳವಾಗಿರುವ ಚಿನ್ನದ ಸರದ ಅಂದಾಜು ಮೌಲ್ಯ ರೂ.3,50,000 ಆಗಿದೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.
ಘಟನೆ ತಿಳಿದ ತಕ್ಷಣ ಶಿರ್ವ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಎಲ್ಲಾ ಆಯಾಮಗಳಲ್ಲಿ ಪರಿಶೀಲನೆ ನಡೆಸಿದರು. ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಪಲ್ಸರ್ ಬೈಕ್ನಲ್ಲಿ ಮೂವರು ಆರೋಪಿಗಳು ಬಂದು ಕೃತ್ಯ ಎಸಗಿರುವುದು ದೃಢಪಟ್ಟಿತು.
ತಕ್ಷಣ ಜಿಲ್ಲಾ ನಿಯಂತ್ರಣ ಕೊಠಡಿ ಮೂಲಕ ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್ಗಳಿಗೆ ಮಾಹಿತಿ ರವಾನಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಕಳುಹಿಸಲಾಯಿತು. ಅದರಂತೆ ನಾಕಾಬಂದಿ ನಡೆಸಿದ ವೇಳೆ, ಕೃತ್ಯ ನಡೆದ ಮೂರರಿಂದ ನಾಲ್ಕು ಗಂಟೆಯೊಳಗೆ ಬೈಂದೂರು ಪೊಲೀಸರು ಶಿರೂರು ಚೆಕ್ಪೋಸ್ಟ್ನಲ್ಲಿ ಆರೋಪಿಗಳನ್ನು ತಡೆದು ನಿಲ್ಲಿಸಿ ಶಿರ್ವ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಶಿರ್ವ ಪೊಲೀಸರು ಆರೋಪಿಗಳಿಂದ ಒಂದು ಬಂಗಾರದ ಚೈನ್ ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಈ ಪತ್ತೆ ಕಾರ್ಯಾಚರಣೆಯಲ್ಲಿ ಕಾಪು ವೃತ್ತದ ಸಿಪಿಐ ಅಜ್ಮತ್ ಅಲಿ ಅವರ ನೇತೃತ್ವದಲ್ಲಿ, ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ, ಬೈಂದೂರು ಪಿಎಸ್ಐ ಸುನಿಲ್ ಕುಮಾರ್, ಶಿರ್ವ ಠಾಣೆಯ ದಯಾನಂದ ಪ್ರಭು, ಅನ್ವರ್ ಅಲಿ, ಹರೀಶ, ಯಲ್ಲಾಲಿಂಗ ಸುರೇಶ್ ಹಾಗೂ ಬೈಂದೂರು ಠಾಣೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
