Home Mangalorean News Kannada News ಪೋಪರ ನೈಟ್ ಹುಡ್ ಮತ್ತು ನೈಜಿಲ್‌ ಫೆರ್ನಾಂಡಿಸ್‌ ರ ಯಶೋಗಾಥೆ

ಪೋಪರ ನೈಟ್ ಹುಡ್ ಮತ್ತು ನೈಜಿಲ್‌ ಫೆರ್ನಾಂಡಿಸ್‌ ರ ಯಶೋಗಾಥೆ

Spread the love

ಪೋಪರ ನೈಟ್ ಹುಡ್ ಮತ್ತು ನೈಜಿಲ್‌ ಫೆರ್ನಾಂಡಿಸ್‌ ರ ಯಶೋಗಾಥೆ

ಪ್ರಾಚೀನ ಕರ್ನಾಟಕದಲ್ಲಿ ವಿಶೇಷವಾಗಿ ಹಂಪೆಯನ್ನು ರಾಜಧಾನಿ ಮಾಡಿಕೊಂಡಿದ್ದ ಕರ್ನಾಟಕ (ವಿಜಯನಗರ) ಸಾಮ್ರಾಜ್ಯದ ಅವಧಿಯಲ್ಲಿ, ರಾಜರ ರಕ್ಷಣೆಗಾಗಿ ಅಂಗರಕ್ಷಕರಿರುತ್ತಿದ್ದರು. ಅವರು ವಿಶ್ವಾಸಾರ್ಹ ಯೋಧರು, ಜೀವದ ಹಂಗು ತೊರೆದು ರಾಜನನ್ನು ಕಾಪಾಡುವವರು. ಅವರನ್ನು ʻಗರುಡರುʼ ಎಂದು ಕರೆಯುತ್ತಿದ್ದರು.

ನಾಡಿನ ಪುರಾಣಗಳ ಪ್ರಕಾರ, ಗರುಡ ಪಕ್ಷಿ, ಪಕ್ಷಿಗಳ ರಾಜ ಮತ್ತು ಅದು ವಿಷ್ಣುವಿನ ವಾಹನ. ರಾಜನಿಷ್ಠ ಗರುಡರು ಅರಿಕೇಸರಿಗಳು. ಅರಿ ಎಂದರೆ ಶತ್ರು ಮತ್ತು ಕೇಸರಿ ಎನ್ನುವುದು ತ್ಯಾಗ ಮತ್ತು ಶೌರ್ಯದ ಪ್ರತೀಕ. ಕೇಸರಿ ಪದಕ್ಕೆ ಗಂಡು ಸಿಂಹ ಎಂಬ ಅರ್ಥವೂ ಉಂಟು. ಈ ಅರಿಕೇಸರಿಗಳು ಶತ್ರುಗಳ ಎದೆ ನಡುಗಿಸುವಷ್ಟು ಪರಾಕ್ರಮಿಗಳು. ಆಶ್ವದಳ, ಗಜದಳ ಮತ್ತು ಪದಾತಿ ದಳದ ವೀರಾಧಿವೀರರು. ಅವರನ್ನು ಅರಮನೆಯ ಪಹರೆಯವರನ್ನಾಗಿಯೂ ಬಳಸಲಾಗುತ್ತಿತ್ತು.

ಬ್ರಿಟಿಷರು ಬರುವ ಮೊದಲು,ಸಿಂಧು ನದಿಯಾಚೆಗಿನ ಭೂಮಿ ಹಿಂದೂಸ್ತಾನದಲ್ಲಿ ಮುಸ್ಲೀಂ ಅರಸೊತ್ತಿಗೆಗಳು ಸುಮಾರು ೫೦೦ ರಿಂದ ೮೦೦ ವರ್ಷಗಳ ಕಾಲ ಆಡಳಿತ ನಡೆಸಿದ್ದವು. ಔರಂಗಜೇಬನ ಕಾಲದಲ್ಲಿ, ಸುಮಾರು ಎಂಬತ್ತರಷ್ಟು ಹಿಂದೂಸ್ತಾನದ ಪ್ರದೇಶ ಮೋಗಲರ ಆಳ್ವಿಕೆಗೆ ಒಳಪಟ್ಟಿತ್ತು. ಆ ಸಮಯದಲ್ಲಿ ಸಲ್ತಾನರಿಗೆ ಸೇವೆ ಸಲ್ಲಿಸುತ್ತಿದ್ದ ರಜಪೂತ ಅರಸರಿಗೆ ಮತ್ತು ಇತರ ಧೀಮಂತರಿಗೆ ʻಮಿರ್ಜಾ ರಾಜಾʼ (ಸಿರಿವಂತನ ಮಗ/ ರಾಜಕುಮಾರ), ʻಸವಾಯಿʼ ಮೊದಲಾದ ಪದವಿಗಳನ್ನು ಕೊಡಲಾಗುತ್ತಿತ್ತು. ʻಸವಾಯಿʼ ಹಿಂದಿ ಪದದ ಅರ್ಥ ಸಂಖ್ಯಾ ಮಾನದ ಒಂದು ಮತ್ತು ಕಾಲು. ಈ ಪದದ ಒಳಾರ್ಥ ಸಾಮಾನ್ಯಕ್ಕಿಂತ ಹೆಚ್ಚಿನ, ನಿಷ್ಣಾತ, ಶ್ರೇಷ್ಠ ಮತ್ತು ಸಮರ್ಥ.

ಅದರಂತೆಯೇ,ಮಧ್ಯಯುಗದ ಊಳಿಗಮಾನ್ಯ ಪದ್ಧತಿ ಜಾರಿಯಲ್ಲಿದ್ದಾಗ, ಯುರೋಪಿನಲ್ಲಿ ಪ್ರಮುಖ ಅಶ್ವಾರೋಹಿ, ಕುದುರೆ ಸವಾರ ಸೈನಿಕನನ್ನು (ಶೆವಲಿಯರ್) ನೈಟ್‌ ಎಂದು ಕರೆದು ಗೌರವಿಸಲಾಗುತ್ತಿತ್ತು. ವಿರೋಧಿಗಳನ್ನು ಸೋಲಿಸಿದಾಗ ಅರಸರು ತಮ್ಮ ಸೇನಾಧಿಕಾರಿಗಳಿಗೆ ನೈಟ್‌ ಪದವಿಯನ್ನು ಘೋಷಿಸುತ್ತಿದ್ದರು. ಧರ್ಮಯುದ್ಧಗಳಲ್ಲಿ (ಕ್ರುಸೇಡ್ಸ್) ಗೆದ್ದು ಬಂದಾಗ, ಸೇನಾ ನಾಯಕರಿಗೆ ಕ್ರೈಸ್ತ ಧರ್ಮಸಭೆಯು ನೈಟ್‌ ಬಿರುದು ನೀಡಿ ಗೌರವಿಸುತ್ತಿತ್ತು. ಅವರು ಕುದುರೆ ಸವಾರಿಯ ವೀರಯೋಧರಾಗಿರುತ್ತಿದ್ದರು. ಈ ಪರಿಯ ನಡವಳಿಕೆಗೆ ಕನ್ನಡದ ಸಮಾನ ಪದ ಗಂಡುಗಲಿ ಅಥವಾ ಸರದಾರ ಎನ್ನುವ ಪದ ಸರಿ ಹೋಗುತ್ತದೆ. ಮುಂದೆ ಆಯಾ ದೇಶದ ಸರ್ಕಾರಕ್ಕೆ, ಅರಸನಿಗೆ ನಿಷ್ಠರಾದ ಸೇನಾಧಿಕಾರಿಗಳಿಗೆ, ಮಾಂಡಲೀಕರಿಗೆ ನೈಟ್‌ ಪದವಿ (ನೈಟ್‌ ಹುಡ್‌) ಯನ್ನು ನೀಡುವ ಪದ್ಧತಿಯೂ ಇತ್ತು.

ಗೌರವಾನ್ವಿತ ವ್ಯಕ್ತಿಯಾದ ಶೆವಲಿಯರ್‌

ಕಾಲಾಂತರದಲ್ಲಿ ಸೈನಿಕರಲ್ಲದೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ನಾಗರಿಕರಿಗೆ ನೈಟ್‌ ಹುಡ್‌ ಪದವಿ- ಸರದಾರ ಪದವಿ ನೀಡುವ ಸಂಪ್ರದಾಯ ಜಾರಿಗೆ ಬಂದಿದೆ. ಈಗ ಈ ಆಧುನಿಕ ಕಾಲದಲ್ಲಿ ಈ ಅಶ್ವಾರೋಹಿ ಸೈನಿಕ (ಶೆವಲಿಯರ್)‌ ಪದಕ್ಕೆ ಗೌರವಾನ್ವಿತ (ಜೆಂಟಲ್‌ಮ್ಯಾನ್‌) ವ್ಯಕ್ತಿ ಎಂಬ ಅರ್ಥ ಪ್ರಾಪ್ತವಾಗಿದೆ.

ಭಾರತದಲ್ಲಿ ಬ್ರಿಟಿಷರ ಕಂಪೆನಿ ಸರ್ಕಾರ ಇದ್ದ ಕಾಲದಲ್ಲಿ, ಸರ್ಕಾರಕ್ಕೆ ನಿಷ್ಠರಾದವರಿಗೆ ಅತ್ಯುನ್ನತ ಪದವಿ ʻಸರ್‌ʼ ಎಂಬ ಪದವಿಯನ್ನು ನೀಡಲಾಗುತ್ತಿತ್ತು. ಅದೇ ಬಗೆಯಲ್ಲಿ ಸರ್ಕಾರಕ್ಕೆ ನಿಷ್ಠರಾದ ಪ್ರಮುಖ ಹಿಂದೂ ಸಮುದಾಯದ ಶ್ರೀಮಂತರು, ಆಡಳಿತಗಾರರು, ಸಮಾಜಸೇವಕರು ಮತ್ತು ದಾನಿ ನಾಗರಿಕರಿಗೆ ರಾಯ್‌ (ರಾವ್) ಬಹಾದ್ದೂರ (ಧೀರ ರಾಜಕುಮಾರ) ಪದವಿಯನ್ನು ನೀಡುತ್ತಿದ್ದರು. ಅದೆ ಬಗೆಯಲ್ಲಿ ಮುಸ್ಲಿಮರಿಗೆ ಮತ್ತು ಶಿಖ್‌ ಸಮುದಾಯದವರಿಗೆ ಕ್ರಮವಾಗಿ ಖಾನ ಬಹಾದ್ದೂರ ಮತ್ತು ಸರ್ದಾರ್‌ ಬಹಾದ್ದೂರ ಪದವಿಗಳನ್ನು ನೀಡುವ ಪರಿಪಾಠವನ್ನು ಇಟ್ಡುಕೊಂಡಿದ್ದರು. ರಾಯ್‌ ಸಾಹೇಬ್‌ ಎಂಬ ಪದಕದ ಬಿರುದಿಗಿಂತ ಇದು ಮಿಗಿಲಾದದ್ದು. ಸಂಬಂಧದ ಆಯಾ ಬಿರುದಿನ ಬಿಲ್ಲೆಯಲ್ಲಿ ಬ್ರಿಟಿಷ್ ಅರಸೊತ್ತಿಗೆಯ ಕಿರೀಟ ಮತ್ತು ಆಯಾ ಗೌರವ ಪದವಿಯ ಹೆಸರಿರುತ್ತಿತ್ತು.

ಬ್ರಿಟಿಷರಿಗೆ ನಿಷ್ಠರಾಗಿದ್ದ ಹಿಂದುಸ್ತಾನದಲ್ಲಿ ಸ್ವಂತ ಅರಸೊತ್ತಿಗೆ ಹೊಂದಿದ ಅರಸರಿಗೆ, ಸುಲ್ತಾನರಿಗೆ ೧೮೬೧ ರಿಂದ ವಿಕ್ಟೋರಿಯಾ ರಾಣಿಯು, ʻಆರ್ಡರ್‌ ಆಫ್‌ ಸ್ಟಾರ್‌ ಆಫ್‌ ಇಂಡಿಯಾʼ ನೈಟ್‌ ಹುಡ್‌ (ಸರದಾರ) ಪದವಿಗಳನ್ನು ನೀಡುವ ಪರಿಪಾಠ ಆರಂಭಿಸಿದ್ದಳು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತ ಖಂಡದ ಮೇಲೆ ಬ್ರಿಟಿಷ್‌ ಅರಸೊತ್ತಿಗೆಯು ಅಧಿಕಾರ ಚಲಾಯಿಸತೊಡಗಿತ್ತು.

ಪೋಪರ ಸಾಂಪ್ರದಾಯಿಕ ನೈಟ್‌ ಹುಡ್‌ ಪದವಿಗಳು

ಸ್ವತಂತ್ರ ದೇಶದ ಸ್ಥಾನಮಾನ ಹೊಂದಿರುವ, ಇಟಲಿ ದೇಶದಲ್ಲಿರುವ ರೋಮ್ ಪಟ್ಟಣದ ವ್ಯಾಟಿಕನ್ನಿನಲ್ಲಿರುವ ವಿಶ್ವವ್ಯಾಪಿ ಕಥೋಲಿಕ ಕ್ರೈಸ್ತ ಪಂಗಡದ ಪರಮೋಚ್ಚ ಗುರು ವಿಶ್ವಗುರು ಪೋಪರು- ಪಾಪುಸ್ವಾಮಿಗಳು, ಇದೆ ಬಗೆಯಲ್ಲಿ ಪದವಿಗಳನ್ನು ಪ್ರಸಾದಿಸುವ ಪರಿಪಾಠವನ್ನು ಶತಮಾನಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅವನ್ನು ಪೇಪಲ್‌ ನೈಟ್‌ ಹುಡ್‌ (ಪೋಪರ ಸರದಾರ) ಪದವಿಗಳು ಎಂದು ಗುರುತಿಸಲಾಗುತ್ತದೆ.

ವಿಶ್ವಗುರು ಪೋಪರು, ಕಥೋಲಿಕ ಕ್ರೈಸ್ತ ಪಂಥದ ನಂಬಿಕೆಗೆ ತೋರಿದ ನಿಷ್ಠೆ ಮತ್ತು ಸಮಾಜಕ್ಕೆ ಅಪ್ರತಿಮ ಸೇವೆಗೈದ ವ್ಯಕ್ತಿಗಳಿಗೆ ಕೊಡಮಾಡುವ ಸಾಂಪ್ರದಾಯಿಕ ನೈಟ್‌ ಹುಡ್‌ ಪದವಿಗಳಲ್ಲಿ ಆದ್ಯತೆಗೆ ಅನುಗುಣವಾಗಿರುವ ಐದು ಗೌರವ ಪದವಿಗಳು ಪ್ರಮುಖವಾದವು.

ಮೊದಲ ಪದವಿ ʻಸುಪ್ರೀಂ ಆರ್ಡರ್‌ ಆಫ್‌ ಕ್ರೈಸ್ಟ್‌ʼ ಪದವಿ, ಇದು ದೇಶವಿದೇಶದ ಮುಖ್ಯಸ್ಥರಿಗೆ ಪೋಪರು ಕೊಡಮಾಡುವ ಅತ್ಯುನ್ನತ ಮತ್ತು ಅಪರೂಪದ ಪದವಿಯಾಗಿದೆ.

ಎರಡನೇ ಪದವಿಯ ಹೆಸರು ʻಆರ್ಡರ್‌ ಆಫ್‌ ದಿ ಗೋಲ್ಡನ್‌ ಸ್ಪರ್‌ʼ. ಇದು ಅತ್ಯಂತ ಹಳೆಯ ಸೇನಾ ಸಂಬಂಧಿ ಮತ್ತು ಅಪರೂಪದ ಪ್ರಶಸ್ತಿಯಾಗಿದ್ದು, ಸೇನೆಯಲ್ಲಿ ಅಪ್ರತಿಮ ಎದೆಗಾರಿಕೆ ಮೆರೆದ ನಾಯಕರಿಗೆ ನೀಡಲಾಗುತ್ತದೆ.

ಮೂರನೇ ಪದವಿ- ಕಳೆದ ೧೮೪೭ರಿಂದ ಕೊಡಮಾಡುತ್ತಿರುವ ʻಆರ್ಡ್‌ರ್‌ ಆಫ್‌ ಪಾಯಸ್‌ ಎಲೆವಂಥ್ʼ ಪದವಿ, ಈ ಅತುನ್ನತ ಶ್ರೇಣಿಯ ಪದವಿಯನ್ನು ವಿದೇಶಿ ಗಣ್ಯರಿಗೆ, ಉನ್ನತ ರಾಯಭಾರಿಗಳಿಗೆ ಕೊಡಮಾಡಲಾಗುತ್ತದೆ.

ನಾಲ್ಕನೇ ಪದವಿ -ಕಳೆದ ೧೮೩೧ರಿಂದ ನೈಟ್‌ ಆಫ್‌ ʻಆರ್ಡ್‌ರ ಆಫ್‌ ಸೆಂಟ್‌ ಗ್ರೆಗೋರಿ ದಿ ಗ್ರೇಟ್‌ʼ ಎಂಬ ಪದವಿಯನ್ನು ನೀಡಲಾಗುತ್ತಿದೆ. ಜನಸಾಮಾನ್ಯರಾಗಿದ್ದು ಕಥೋಲಿಕ ಧರ್ಮಸಭೆಗೆ ವಿಶೇಷ ಸೇವೆ ಸಲ್ಲಿಸಿದವರಿಗೆ ಈ ಪದವಿ ಸಲ್ಲುತ್ತದೆ.‌

‌ ಐದನೇ ಪದವಿ ʻಆರ್ಡರ್ ಆಫ್‌ ಸೆಂಟ್‌ ಸಿಲ್ವೆಸ್ಟರ್ʼ. ಇದು ಕಲೆ, ವಿಜ್ಞಾನ ಅಥವಾ ಕಥೋಲಿಕ ಧರ್ಮಸಭೆಯ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡವರಿಗೆ ನೀಡಲಾಗುವ ಪ್ರಶಸ್ತಿ.

ಈ ಶ್ರೇಣಿಯ ಪಟ್ಟಿ, ಅದಲುಬದಲು ಆಗಬಹುದಾಗಿದೆ. ಇವಲ್ಲದೇ ಪೋಪರು ಕೊಡಮಾಡುವ ʻಆರ್ಡರ್‌ ಆಫ್‌ ದ ಹೋಲಿ ಸೆಪೂಲ್ಕರ್‌ʼ, ʻಸುಪ್ರೀಂ ಆರ್ಡರ್‌ ಆಫ್‌ ಕ್ರೈಸ್ಟ್ʼ ಇನ್ನೂ ಮೊದಲಾದ ಪದವಿಗಳೂ ಇವೆ.

ಬಿಷಪ್ಪರ ಸಮಾವೇಶದಲ್ಲಿ ʻಸಿಲ್ವೆಸ್ಟರ್‌ ಪದವಿʼ ಪ್ರದಾನ

ಹಿಂದಿನ ವಿಶ್ವಗುರು ಪೋಪ ಪೋಪ್‌ ಪ್ರಾನ್ಸಿಸ್‌ ಅವರು, ಬೆಂಗಳೂರಿನ ಪ್ರಧಾನ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿರುವ ಏಷಿಯನ್‌ ಟ್ರೇಡಿಂಗ್‌ ಕಾರ್ಪೋರೇಷನ್‌ ಪಬ್ಲಿಷರ್ಸ್ ಮತ್ತು ಅರ್ಕಲೈಟ್‌ ಗ್ಲೋಬಲ್‌ ಪ್ರೈವೇಟ್‌ ಲಿಮಿಟೆಡ್‌ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೈಜಿಲ್‌ ಫೆರ್ನಾಂಡಿಸ್‌ ಅವರಿಗೆ ʻಆರ್ಡರ್ ಅಫ್‌ ಸೆಂಟ್‌ ಸಿಲ್ವೆಸ್ಟರ್ʼ ಪ್ರಶಸ್ತಿಯನ್ನು ಪ್ರಸಾದಿಸಿದ್ದಾರೆ.

ಕಳೆದ ಫೆಬ್ರವರಿ ತಿಂಗಳಿನ ೩ನೇ ತಾರೀಖಿನಂದು ಬೆಂಗಳೂರಿನಲ್ಲಿ ಜರುಗಿದ ೩೭ನೇ ಭಾರತದ ಲ್ಯಾಟಿನ್ ಕಥೋಲಿಕ್ ಮೇತ್ರಾಣಿ(ಬಿಷಪ್‌)ಗಳ ಅತ್ಯುನ್ನತ ಸಮಾವೇಶದಲ್ಲಿ (ಸಿಸಿಬಿಐ – ಕಾನ್ಪರನ್ಸ್‌ ಆಫ್‌ ಕಥೋಲಿಕ್‌ ಬಿಷಪ್ಸ್‌ ಆಫ್‌ ಇಂಡಿಯಾ), ಅಂದಿನ ಸಿಸಿಬಿಐನ ಅಧ್ಯಕ್ಷ ಕಾರ್ಡಿನಲ್ ಫಿಲಿಪ್‌ ನೇರಿ ಫೆರಾವೊ ಉಪಸ್ಥಿತಿಯಲ್ಲಿ, ಕಾರ್ಡಿನಲ್‌ ಗಳ, ಬಿಷಪ್‌ ರುಗಳ ಹಾಜರಾತಿಯಲ್ಲಿ, ಪೋಪರ ನಿವಾಸ ವ್ಯಾಟಿಕನ್‌ ಸಿಟಿಯ ಭಾರತ ಮತ್ತು ನೇಪಾಳದ ರಾಜತಾಂತ್ರಿಕ ಪ್ರತಿನಿಧಿಯಾಗಿರುವ ಆರ್ಚ್ ಬಿಷಪ್‌ ಲಿಯೋಪೋಲ್ಲೊ ಜಿರೆಲ್ಲಿ ಅವರು, ಪೋಪ ಫ್ರಾನ್ಸಿಸ್‌ ಅವರು ಕೊಡಮಾಡಿದ ʻಆರ್ಡರ್ ಅಫ್‌ ಸೆಂಟ್‌ ಸಿಲ್ವೆಸ್ಟರ್ʼ ಪ್ರಶಸ್ತಿ ಪತ್ರವನ್ನು, ಏಷಿಯನ್‌ ಟ್ರೇಡಿಂಗ್‌ ಕಾರ್ಪೋರೇಷನ್‌ ಪಬ್ಲಿಷರ್ಸ್ ಮತ್ತು ಅರ್ಕಲೈಟ್‌ ಗ್ಲೋಬಲ್‌ ಪ್ರೈವೇಟ್‌ ಲಿಮಿಟೆಡ್‌ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೈಜಿಲ್‌ ಫೆರ್ನಾಂಡಿಸ್‌ ಅವರಿಗೆ ಪ್ರದಾನ ಮಾಡಿದ್ದಾರೆ. ಸಮಾರಂಭದಲ್ಲಿ ನೈಜಿಲ್‌ ಅವರಿಗೆ ಸಿಲ್ವೆಸ್ಟರ್ ಪದಕದ ಬಿಲ್ಲೆಯನ್ನು ಅಧಿಕೃತವಾಗಿ ದಯಪಾಲಿಸಿದರು.

ಪ್ರಸ್ತುತ ನೈಜಿಲ್‌ ಫೆರ್ನಾಂಡಿಸ್‌ ಅವರು, ಸದ್ಯ ಏಷಿಯನ್ ಟ್ರೇಡಿಂಗ್ ಕಾರ್ಪೋರೇಷನ್ನಿನ ಪಾಲುದಾರ, ಎ.ಟಿ.ಸಿ ಪಬ್ಲಿಷರ್ಸ್‌ ಎಲ್‌ ಎಲ್‌ ಪಿ (ಭಾರತದ ನೊಂದಾಯಿತ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಗುರುತಿನ ಚೀಟಿಹೊಂದಿದ ಸಂಸ್ಥೆ)ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಆಡಳಿತ ಪಾಲುದಾರ ಹಾಗೂ ಅರ್ಕಲೈಟ್‌ ಗ್ಲೋಬಲ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಕಥೋಲಿಕ್‌ ಕನೆಕ್ಟ್‌ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದಾರೆ.

ಏನಿದು ʻಆರ್ಡರ್ ಅಫ್‌ ಸೆಂಟ್‌ ಸಿಲ್ವೆಸ್ಟರ್ʼ ಪದವಿ?

ನಾಲ್ಕನೇ ಶತಮಾನದಲ್ಲಿದ್ದ ರೋಮನ್‌ ಚಕ್ರವರ್ತಿ ಕಾನ್ಸಂಟ್ಟೈನ್ ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡು ಆಡಳಿತ ನಡೆಸಿದ್ದುದನ್ನು ದೈವಿಕ ದೈವಾನುಗ್ರಹದ ನೆರವೇರಿಕೆ ಎಂದು ಹೇಳಲಾಗುತ್ತದೆ. ಅದೇ ಶತಮಾನದ ಸಂತ ಸಿಲ್ವೆಸ್ಟರ್ ಅವರು, ಕ್ರೈಸ್ತರ ಮೇಲಿನ ರೋಮನ್‌ ಸಾಮ್ರಾಜ್ಯದ ಚಕ್ರವರ್ತಿಗಳ ದಬ್ಬಾಳಿಕೆ ದೌರ್ಜನ್ಯದ ಆಟಾಟೋಪಗಳ ಹಿಡಿತದಿಂದ ಬಿಡಿಸಿಕೊಂಡು ಸ್ವತಂತ್ರವಾಗಿ ಕಥೊಲಿಕ ಧರ್ಮಸಭೆಯ ಆಡಳಿತವನ್ನು ನಡೆಸಿಕೊಂಡುಬಂದ ಮೊದಲ ಪೋಪರು ಎಂಬ ಹೆಗ್ಗಳಿಕೆ ಹೊಂದಿರುವರು.

ಅವರ ಅಧಿಕಾರದ ಅವಧಿಯಲ್ಲಿ ರೋಮಿನ ವ್ಯಾಟಿಕನ್‌ ಪಟ್ಟಣದಲ್ಲಿ ಕ್ರೈಸ್ತ ಯುಗ ಆರಂಭವಾಯಿತು ಎಂದು ಇತಿಹಾಸಕಾರರು ದಾಖಲಿಸಿದ್ದಾರೆ. ವ್ಯಾಟಿಕನ್‌ ಬೆಟ್ಟದಲ್ಲಿ ಸಂತ ಪೇತ್ರರ ಮಹಾದೇವಾಲಯ (ಸೆಂಟ್‌ ಪೀಟರ್ಸ್‌ ಬೆಸಿಲಿಕಾ), ಜೆರುಸಲೇಮಿನಿಂದ ತಂದ ಮಣ್ಣನ್ನು ಹರಡಿ ಕಟ್ಟಿದ ಪವಿತ್ರ ಶಿಲುಬೆ ಮಹಾದೇವಾದಲಯ /ಪುಣ್ಯಕ್ಷೇತ್ರ, (ಬೆಸಿಲಿಕಾ ಆಫ್‌ ಹೋಲಿಕ್ರಾಸ್‌ ಇನ್‌ ಜೆರುಸಲೇಮ್‌) ಸೇರಿದಂತೆ ಹಲವಾರು ಮಹಾದೇವಾಲಯ ಹಾಗೂ ಪುಣ್ಯಕ್ಷೇತ್ರಗಳನ್ನು ನಿರ್ಮಿಸಲಾಯಿತು.

ಅದೇ ಅವಧಿಯಲ್ಲಿ ರಾಜಾಶ್ರಯ ಪಡೆದಿದ್ದ ಕ್ರೈಸ್ತ ಧಾರ್ಮಿಕ ಪಂಥದಲ್ಲಿ ಬಿರುಕುಂಟಾಯಿತು. ಕಾನ್ಸಟಾಂಟಿನೋಪಲ್‌ ಪಟ್ಟಣವನ್ನು ಕೇಂದ್ರವಾಗಿಟ್ಡುಕೊಂಡ ಪೂರ್ವದ ಆರ್ಥಡಾಕ್ಸ್‌ ಕಥೋಲಿಕ ಚರ್ಚು (ಪೂರ್ವದ ಸಾಂಪ್ರದಾಯಿಕ ಕಥೋಲಿಕ ಧರ್ಮಸಭೆ) ಗ್ರೀಕ್‌ ಸಂಪ್ರದಾಯದ ತಾತ್ವಿಕ ವ್ಯತ್ಯಾಸಗಳ ಹಿನ್ನೆಲೆಯಲ್ಲಿ ರೋಮಿನಲ್ಲಿನ ಪೋಪರ ಅಧಿಕಾರವನ್ನು ತಿರಸ್ಕರಿಸಿ ಪ್ರತೇಕ ಅಸ್ತಿತ್ವವನ್ನು ಹೊಂದಿರುತ್ತದೆ. ರೋಮಿನಲ್ಲಿರುವ ಪೋಪರ ಅಧಿಕಾರವನ್ನು ಹೊಂದಿದ ಸಂಪ್ರದಾಯಿಕ ಲ್ಯಾಟಿನ ಸಂಪ್ರದಾಯದ ಕಥೋಲಿಕ ಚರ್ಚು (ರೋಮನ ಕಥೋಲಿಕ ಧರ್ಮಸಭೆಯು) ಪಾಶ್ಚಿಮಾತ್ಯ ಚರ್ಚು ಎಂಬ ಹೆಸರು ಪಡೆಯುತ್ತದೆ.

ಚಕ್ರವರ್ತಿ ಕಾನ್ಸಂಟ್‌ಟೈನ್ ಅವರು ಅಂದಿನ ಪೋಪರಾದ ಮೊದಲ ಸಿಲ್ವೆಸ್ಟರ್ ಅವರ ಅನುಮೋದನೆಯಿಂದ ಆರಂಭಿಸಲಾಗಿದ್ದ ಪ್ರಸಿದ್ಧ ʻಆರ್ಡರ್‌ ಆಫ್‌ ದಿ ಕಾನ್ಸಟಂಟೈನ್‌ ದಿ ಗ್ರೇಟ್‌ʼ ಪದವಿ ಪ್ರದಾನದಲ್ಲಿ, ಮಧ್ಯಯುಗದಿಂದ ಹದಿನೇಳನೇ ಶತಮಾನದವರೆಗೆ ರೋಮಿನ ಅರಸರು ಕೈಯಾಡಿಸುತ್ತಿದ್ದುದನ್ನು ತಪ್ಪಿಸಲು, ಪೋಪರಾದ ಹದಿನಾರನೇ ಗ್ರೆಗೋರಿ ಅವರು ೧೮೪೧ರಲ್ಲಿ, ಆ ಪದ್ಧತಿಗೆ ಇತಿಶ್ರೀ ಹಾಡಿ, ಅದರ ಬದಲು ಸ್ವತಂತ್ರ ನಿರ್ಣಯದಲ್ಲಿ ಅಧಿಕೃತವಾಗಿ ʻನೈಟ್ಸ್‌ ಆಫ್‌ ಸೆಂಟ್‌ ಸಿಲ್ವೆಸ್ಟರ್‌ʼ ಪದವಿ ನೀಡುವುದನ್ನು ಜಾರಿಗೆ ತಂದರು. ಈ ಪದವಿ ಇರುವುದು ಗುರುಮಠದವರಿಗೆ ಅಥವಾ ಸೇನಾನಿಗಳಿಗಲ್ಲ. ಅದು ಕೇವಲ ವಿಶೇಷ ಸೇವೆಯ ನಾಗರಿಕರಿಗೆ ನೀಡುವ ಗೌರವದ, ಪ್ರತಿಷ್ಠಿತ ಪದವಿ.

ಆರ್ಡರ್ ಅಫ್‌ ಸೆಂಟ್‌ ಸಿಲ್ವೆಸ್ಟರ್‌ ನೈಟ್‌ ಹುಡ್‌ ಪದಕ

ʻಆರ್ಡರ್ ಅಫ್‌ ಸೆಂಟ್‌ ಸಿಲ್ವೆಸ್ಟರ್ ನೈಟ್‌ ಹುಡ್‌ʼ ಪದಕದ ಬಿಲ್ಲೆಯು ಮಾಲ್ತೀಸ್‌ ಶಿಲುಬೆಯ ಆಕಾರದಲ್ಲಿದೆ. ಈ ಶಿಲುಬೆಯ ಕೂಡು ತೋಳುಗಳ ಮಧ್ಯದ ವೃತ್ತಾಕಾರದ ಮೆಡಲ್‌ ನಲ್ಲಿ ಪ್ರಥಮ ಪೋಪ್‌ ಸಿಲ್ವೆಸ್ಟರ ಅವರ ಚಿತ್ರವನ್ನು ಕೂರಿಸಲಾಗಿದೆ. ಆ ವೃತ್ತದ ಸುತ್ತಲಿನ ಪಟ್ಟಿಯಲ್ಲಿ ʻಸ್ಯಾಂಕ್ಟಸ್‌ ಸಿಲ್ವೆಸ್ಟರ್ ಫಾಂಟಿಫಿಕ್ಸ್‌ ಮ್ಯಾಕ್ಸಿಮಸ್‌ʼನ ಹೃಸ್ವ ರೂಪ ʻಎಸ್‌ ಸಿಲ್ವೆಸ್ಟರ್‌ ಪಿ.ಎಂʼ ಎಂಬ ಬರಹವಿದೆ.

ʻಸ್ಯಾಂಕ್ಟಸ್‌ ಸಿಲ್ವೆಸ್ಟರ್ ಫಾಂಟಿಫಿಕ್ಸ್‌ ಮ್ಯಾಕ್ಸಿಮಸ್‌ʼ ಪದಪುಂಜದ ಅರ್ಥ ʻಪವಿತ್ರ್‌ ಸಂತ ಸಿಲ್ವೆಸ್ಟರ್ ಮಹಾನ್‌ ಸಂಪರ್ಕ ಸಾಧಕ, ಅತ್ಯುನ್ನತ ಧರ್ಮಗುರುʼ. ಶಿಲುಬೆಯ ತೋಳುಗಳಲ್ಲಿ ಮಧ್ಯದ ವೃತ್ತದಿಂದ ಹೊಮ್ಮುವ ಕಿರಣಗಳನ್ನು ಬಂಗಾರದಲ್ಲಿದ್ದು, ದೈವೀ ಕಿರಣಗಳ ಬೆಳಕನ್ನು ಸಾಂಕೇತಿಸುತ್ತದೆ. ಬಂಗಾರದ ಗೆರೆ ಶಿಲುಬೆಯ ಸುತ್ತ ಅಂಚಿನಲ್ಲಿ ಬಂಗಾರದ ಗೆರೆ ಇದೆ.

ಈ ಪದಕವನ್ನು ಹೊತ್ತ ಅಲಂಕಾರದ ಪುಟಾಣಿ ಬಟ್ಟೆಯು ಕಪ್ಪು ಮತ್ತು ಕೆಂಪು ಬಣ್ಣಗಳ ಪಟ್ಟಿಗಳನ್ನು ಹೊಂದಿದ್ದು ಸೊಗಸಾಗಿ ಕಾಣುತ್ತದೆ̤. ಪದಕದ ಪುಟಾಣಿ ಬಟ್ಟೆಯ ಪಟ್ಟಿಯನ್ನು ಕೋಟು ಅಥವಾ ಜಾಕೆಟ್ಟಿಗೆ ಸಿಗಿಸಲು ಅನುಕೂಲಕರವಾದ ನಿಷ್ಠೆ ಮತ್ತು ಭಾತೃತ್ವದ ಸಂಕೇತವಾಗಿ ಸಣ್ಣ ಪಿನ್ನು ಇದರೊಂದಿಗಿದೆ.

ಏಷಿಯನ್‌ ಟ್ರೇಡಿಂಗ್‌ ಕಾರ್ಪೋರೇಷನ್‌ ನಡೆದು ಬಂದ ದಾರಿ

ಕಳೆದ ಶತಮಾನದ ಉತ್ತರಾರ್ಧದ ಆದಿ ಭಾಗದಲ್ಲಿ, ಬ್ರಿಟಿಷ್‌ ವಸಾಹತುಶಾಯಿ ಆಡಳಿತದಿಂದ ಮುಕ್ತಿ ಪಡದ ಹಿಂದುಸ್ತಾನ- ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಒಂದು ವರ್ಷದ ಮೊದಲು ೧೯೪೬ರಲ್ಲಿ, ನೈಜಿಲ್‌ ಅವರ (ಭಾವ) ಸೋದರಿಯ ಗಂಡನ ತಂದೆ ಫ್ರೆಡ್ರಿಕ್‌ ಪಾಯ್ಸ್‌ ಅವರು ಕಥೋಲಿಕ ಕ್ರೈಸ್ತ ಧಾರ್ಮಿಕ ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟ ಹಾಗೂ ಕ್ರೈಸ್ತ ಪೂಜಾವಿಧಿಗಳಿಗೆ ಅಗತ್ಯವಾದ ವಸ್ತುಗಳನ್ನು ಒದಗಿಸುವ ಉದ್ದೇಶದಿಂದ ಮುಂಬೈಯಲ್ಲಿ ʻಏಷಿಯನ್‌ ಟ್ರೇಡಿಂಗ್‌ ಕಾರ್ಪೋರೇಷನ್‌ʼ ಹೆಸರಿನಲ್ಲಿ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದರು.

ಪೋರ್ಚುಗೀಜರ ದಬ್ಬಾಳಿಕೆಯಲ್ಲಿ ತಮ್ಮ ಪೂರ್ವಾಶ್ರಮದ ಆಚರಣೆಗಳನ್ನು ಕದ್ದುಮುಚ್ಚಿ ಮಾಡುತ್ತಿದ್ದ ಗೋವೆಯಲ್ಲಿನ ನವಕ್ರೈಸ್ತರು ಹದಿನೈದನೇ ಶತಮಾನದಲ್ಲಿ ಕನ್ನಡ ಸೀಮೆಯ ಕರಾವಳಿಗೆ ಬಂದು ನೆಲೆಸುತ್ತಾರೆ. ಪೋರ್ಚುಗೀಜರು ಬರುವ ಮೊದಲೇ ದಕ್ಷಿಣ ಬಾರತದ ಒಳನಾಡಿನಲ್ಲಿ ಸಂಚರಿಸಿದ ಡೊಮಿನಿಕನ್‌ ಪಾದ್ರಿಗಳು ಕ್ರೈಸ್ತ ಜನರ ಉಪಸ್ಥಿತಿಗೆ ನಾಂದಿ ಹಾಡಿರುತ್ತಾರೆ. ಪೋರ್ಚುಗೀಜರ ಆಡಳಿತದಲ್ಲಿ ಯೇಸುಸಭೆಯ (ಜೆಸುಯಿಟ್‌) ಪಾದ್ರಿಗಳ ದೆಸೆಯಿಂದ ಶುಭಸಂದೇಶದ ಸಾರುವಿಕೆಯ ತೀವ್ರತೆಯನ್ನು ಪಡೆದಿರುತ್ತದೆ.

ದಕ್ಷಿಣ ಭಾರತದ ವಿವಿಧೆಡೆ ಸುವಾರ್ತಾ ಪ್ರಚಾರ ಕೈಗೊಂಡ ಯೇಸುಸಭೆಯ ಮಿಷನರಿಗಳಿಂದ ದಕ್ಷಿಣ ಭಾರತದ ಕರಾವಳಿ ಮತ್ತು ಒಳನಾಡಿನಲ್ಲಿ ಅಲ್ಲಲ್ಲಿ ಕ್ರೈಸ್ತ ನೆಲೆಗಳು ಅಸ್ತಿತ್ವದಲ್ಲಿ ಬಂದಿರುತ್ತವೆ.ನಂತರದಲ್ಲಿ ಬರುವ ಫ್ರೆಂಚ್‌ ಪಾದ್ರಿಗಳ (ಎಂ.ಇ.ಪಿ) ಚಟುವಟಿಕೆಗಳು ತಮಿಳುನಾಡು ತೀರ ಮತ್ತು ಒಳನಾಡಿನ ಕರ್ನಾಟಕ, ಆಂಧ್ರದ ಸೀಮೆಗಳಲ್ಲಿ ಅದಕ್ಕೆ ಪುಟ ನೀಡುತ್ತವೆ. ಮುಂದೆ ೧೮೫೦ರಲ್ಲಿ ಫ್ರೆಂಚ್‌ ಪಾದ್ರಿ ಶರ್ಬಾನೋ ಅವರು ಪಾಂಡಿಚೇರಿಯ ಮೇತ್ರಾಣಿಗಳಾಗಿ ಬಂದು, ದಕ್ಷಿಣ ಬಾರತದಲ್ಲಿನ ಕಥೋಲಿಕ ಕ್ರೈಸ್ತರ ಅಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುತ್ತಿದ್ದರು. ಮುಂದೆ ೧೮೮೬ರಲ್ಲಿ ಮೈಸೂರು ಧರ್ಮಪ್ರಾಂತ್ಯ (ಡಯಾಸಿಸ್)‌ ಅಸ್ತಿತ್ವಕ್ಕೆ ಬಂದಿರುತ್ತದೆ.

ಬೆಂಗಳೂರಿಗೆ ಬಂದ ಏಷಿಯನ್‌ ಟ್ರೇಡಿಂಗ ಕಾರ್ಪೋರೇಷನ್‌

ಸ್ವಾತಂತ್ರ್ಯದ ಪೂರ್ವದಲ್ಲಿ ೧೯೪೦ರಲ್ಲಿ ಬೆಂಗಳೂರು ಧರ್ಮಕ್ಷೇತ್ರವು ಅಸ್ತಿತ್ವಕ್ಕೆ ಬರುತ್ತದೆ. ೧೯೪೨ರಲ್ಲಿ ಆಂಧ್ರದ ಸೀಮೆಯ ಗುಂಟೂರಿನ ಮೂಲದ ಅತಿ ವಂದನೀಯ ಡಾ. ಥಾಮಸ್‌ ಪೋತಕಮುರಿ ಅವರು ಗುಂಟೂರಿನಿಂದ ಬೆಂಗಳೂರಿಗೆ ಬಿಷಪ್‌ ರಾಗಿ (ಮೇತ್ರಾಣಿಗಳಾಗಿ) ನೇಮಕವಾಗುತ್ತಾರೆ. ಅವರು ಭಾರತೀಯ ಮೂಲದ ಮೊದಲ ಬಿಷಪ್‌ ರು. ಅವರ ಅವಧಿಯಲ್ಲಿ ಹಲವಾರು ಚರ್ಚುಗಳ ಕಟ್ಟೋಣ ಆರಂಭವಾಗುತ್ತದೆ.

ಅವರು, ಹತ್ತು ಹಲವು ಧಾರ್ಮಿಕ ಸಹೋದರ ಸಂಸ್ಥೆಗಳನ್ನು, ಕನ್ಯಾಸ್ತ್ರೀ ಮಠಗಳನ್ನು ಬೆಂಗಳೂರಿಗೆ ಕರೆತರುತ್ತಾರೆ. ಕ್ರಮೇಣವಾಗಿ ದಕ್ಷಿಣ ಭಾರತದಲ್ಲಿ ಕಾರ್ಯಾಚರಣೆ ನಡೆಸುವ ಹಲವಾರು ಕಥೋಲಿಕ ಕ್ರೈಸ್ತಸಭೆಗಳ ಮತ್ತು ಕನ್ಯಾಸ್ತ್ರೀ ಮಠಗಳ ಕೇಂದ್ರ ಕಚೇರಿ(ಪ್ರೊವಿನ್ಷಲೇಟ್) ಗಳು‌ ಬೆಂಗಳೂರಿನಲ್ಲಿ ತಳವೂರುತ್ತವೆ. ಈ ಹಿನ್ನೆಲೆಯಲ್ಲಿ ೧೯೬೭ರಿಂದ ೧೯೭೧ರವರೆಗೆ ಬಿಷಪ್ ರಾಗಿದ್ದ ಅತಿ ವಂದನೀಯ ಲೂರ್ದಸ್ವಾಮಿ ಅವರು, ಧಕ್ಷಿಣ ಭಾರತದ ಕಥೋಲಿಕ ಕ್ರೈಸ್ತರ, ಕ್ರೈಸ್ತ ಗುರುಗಳ ಮತ್ತು ಕನ್ಯಾಸ್ತ್ರೀಯರ ಅನುಕೂಲಕ್ಕಾಗಿ, ಮುಂಬೈನಲ್ಲಿದ್ದ ಏಷಿಯನ್‌ ಟ್ರೇಡಿಂಗ ಕಾರ್ಪೋರೇಷನ್‌ ಸಂಸ್ಥೆಯವರಲ್ಲಿ ಬೆಂಗಳೂರಿನಲ್ಲೊಂದು ಶಾಖೆ ತೆರೆಯುವಂತೆ ಕೇಳಿಕೊಳ್ಳುತ್ತಾರೆ.

ಅವರ ಕೋರಿಕೆಯಂತೆ ೧೯೬೮ರಲ್ಲಿ ಆ ಸಂಸ್ಥೆಯು ಬೆಂಗಳೂರಿನ ಬ್ರಿಗೇಡ್‌ ರೋಡಿನಲ್ಲಿ ತನ್ನ ಶಾಖೆಯನ್ನು ತೆರೆಯುತ್ತದೆ. ಮುಂದೆ ೧೯೯೪ರಲ್ಲಿ ಅದು ಸೇವಾನಗರದ ಮಛಲಿ ಬೆಟ್ಟದ ಕುಡಿಯುವ ನೀರಿನ ಸಂಗ್ರಹಾಲಯದ ಬಳಿಯ ಡ ಕಾಸ್ಟಾ ಲೇ ಔಟ್‌ನ, ಕುಕ್ ಟೌನ್‌ ನಲ್ಲಿನ ಮರಿಯನಿಕೇತನದ ಕಟ್ಟಡದಿಂದ ಕಾರ್ಯನಿರ್ವಹಿಸುತ್ತಿದೆ. ಇಂದು ಅದು ಮಾರಾಟ ಮಳಿಗೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇಂದು ನಂದಿದುರ್ಗ ರಸ್ತೆಯ ಪಾಲನಾ ಭವನದ ಬಳಿ ಮಹಾಧರ್ಮಾಧ್ಯಕ್ಷರ ನಿಲಯದ ಪಕ್ಕದ ಕಟ್ಟಡದಲ್ಲಿ ಎ.ಟಿ.ಸಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ.

ಧಾರ್ಮಿಕ ಪುಸ್ತಕಗಳೊಂದಿಗೆ ಪೂಜೆಗೆ ಬೇಕಾದ ವಸ್ತುಗಳು, ಉಡುಗೊರೆ ಸಾಮಾನುಗಳು, ಹಾಡಿನ ಸಿ.ಡಿಗಳು ಬೆಂಗಳೂರಿನ ಇತರ ಮಾರಾಟ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿವೆ. ಮಡಿವಾಳದ ಸೆಂಟ್‌ ಆಂಟನಿ ಫ್ರೈಯರಿಯಲ್ಲಿ ಮಾರಾಟ ಮಳಿಗೆಯೊಂದು ಇದೆ. ಕಾಲದ ಅಗತ್ಯಕ್ಕೆ ತಕ್ಕಂತೆ ಬದಲಾದ ಎ.ಟಿ.ಸಿ ಸಂಸ್ಥೆಗೆ, ಈಗ ೮೦ ವರ್ಷದ ಹರೆಯ. ಸುಮಾರು ೩೦ಕ್ಕೂ ಅಧಿಕ ನೌಕರರು ಅದರಲ್ಲಿ ಈಗ ಕೆಲಸ ಮಾಡುತ್ತಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಮುದ್ರಿಸಿ, ಪ್ರಕಟಿಸಿರುವ ಈ ಸಂಸ್ಥೆಯು, ದೇಶದಾದ್ಯಂತವಲ್ಲದೇ ದಕ್ಷಿಣ ಏಷ್ಯದ ದೇಶಗಳಲ್ಲಿ ತನ್ನ ಮಾರಾಟ ಜಾಲವನ್ನು ವಿಸ್ತರಿಸಿಕೊಂಡಿದೆ. ಇದೆಲ್ಲಾ ಸಾಧ್ಯವಾದದ್ದು ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಯತ ನೈಜಿಲ್‌ ಫೆರ್ನಾಂಡಿಸ್‌ ಅವರ ಪರಿಶ್ರಮದಿಂದ.

ನೈಜಿಲ್‌ ಫೆರ್ನಾಂಡಿಸ್‌ ಎಂಬ ಕಥೋಲಿಕ ಪ್ರಕಾಶನ ಮಾಂತ್ರಿಕ

ನೈಜಿಲ್‌ ಫೆರ್ನಾಂಡಿಸ್‌ ಅವರು, ಕನ್ನಡ ನಾಡು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಮಂಗಳೂರು ಪಟ್ಟಣದ ಮೂಲದವರು. ತಂದೆಯ ಹೆಸರು ದಿವಂಗತ ಜೋಸೆಫ್‌ ಫೆರ್ನಾಂಡಿಸ್.‌ ತಾಯಿಯ ಹೆಸರು ಐಡಾ ಫೆರ್ನಾಂಡಿಸ್.‌ ಈ ದಂಪತಿಗಳ ನಾಲ್ಕು ಮಕ್ಕಳಲ್ಲಿ ನೈಜಿಲ್ ಅವರು ಮೂರನೆಯವರು. ನೈಜಿಲ್ ಅವರ ಪತ್ನಿಯ ಹೆಸರು ಬೃಂಡಾ. ಪುಸ್ತಕ ಮಳಿಗೆಗಳ ಆಗುಹೋಗುಗಳನ್ನು ನೋಡಿಕೊಳ್ಳುತ್ತಾ ಗಂಡನಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಈ ದಂಪತಿಗೆ ಬ್ರಯಾನ್‌ ಜಾನ್ ಮತ್ತು ಕೇವಿನ್‌ ಜೋಶುವಾ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ.

ಮಂಗಳೂರಿನಲ್ಲಿ ೧೯೬೭ರ ಸಾಲಿನ ಏಪ್ರಿಲ್‌ ೧೧ರಂದು ಜನಸಿದ ನೈಜಿಲ್‌ ಅವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿ ಅಲ್ಲಿನ ಅಲೋಷಿಯಸ್‌ ಕಾಲೇಜು ಸೇರಿ ೧೯೮೭ರಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಕೌಶಲ್ಯಗಳ ಬ್ಯಾಚಲರ್‌ ಆಫ್‌ ಕಾಮರ್ಸ್‌ ಪದವಿಯನ್ನು ಪಡೆದಿದ್ದಾರೆ. ನಂತರ ಮಣಿಪಾಲಿನ ಟಿ ಎ ಪೈ ಇನ್ಸಿಟಿಟ್ಯುಟ್‌ ಆಫ್‌ ಮ್ಯಾನೇಜ್ ಮೆಂಟ್ ಸೇರಿ ಸ್ನಾತಕ ಪದವಿ -ಮಾಸ್ಟರ್‌ ಆಫ್‌ ಬಿಜಿನೆಸ್‌ ಮ್ಯಾನೇಜ್‌ ಮೆಂಟ್‌ (ಎಂ.ಬಿ.ಎ) ಓದಿ, ಹೆಚ್ಚಿನ ಕೌಶಲ್ಯಕ್ಕಾಗಿ ಹೈದರಾಬಾದಿನಲ್ಲಿ ಮ್ಯಾನೇಜಮೆಂಟ್‌ ಕೋರ್ಸ ಮಾಡಿದ್ದಾರೆ. ನಂತರ ಬೆಂಗಳೂರಿನ ಇಂಡಿಯನ್‌ ಟೊಬ್ಯಾಕೊ ಕಂಪೆನಿ (ಐಟಿಸಿ)ಯ ಐ.ಟಿ.ಸಿ ಕ್ಲಾಸಿಕ್‌ ಫೈನಾನ್ಸ್ ಲಿಮಿಟೆಡ್‌ ಕಂಪೆನಿಯಲ್ಲಿ ಸೇರಿ ಬೆಂಗಳೂರಿನಲ್ಲಿ ೧೯೯೧ರಿಂದ ಮೂರು ವರ್ಷಗಳ ಕಾಲ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದಾರೆ.

ನಂತರ ಮುಂಬೈಯಲ್ಲಿದ್ದ ತನ್ನ ಸೋಹೋದರಿಯ ಗಂಡನ ತಂದೆಯು ಆರಂಭಿಸಿದ್ದ ಪುಸ್ತಕ ಪ್ರಕಟಣಾ ಮತ್ತು ಮಾರಾಟ ಸಂಸ್ಥೆ ಇಂಡಿಯನ್‌ ಟ್ರೇಡಿಂಗ್‌ ಕಾರ್ಪೋರೇಷನ್‌ (ಎಟಿಸಿ) ಸಂಸ್ಥೆಯನ್ನು ೧೯೯೪ರಲ್ಲಿ ಸೇರಿ ಆ ಪುಸ್ತಕ ಪ್ರಕಟಣಾ ಕುಟುಂಬದ ಸಕ್ರೀಯ ಸದಸ್ಯರಾಗುತ್ತಾರೆ. ಅವರು ಎ.ಟಿ.ಸಿ ಸೇರಿದ್ದು ಏಪ್ರಿಲ್‌ ೧ ರಂದು. ಆ ದಿನವು ಅವರ ಬದುಕಿನ ದಿಕ್ಕನೇ ಬದಲಿಸುವ ನಿರ್ಧಾರವಾಗಿರುತ್ತದೆ. ಅಂದು ಅವರು ತಮ್ಮದೇ ಬಗೆಯಲ್ಲಿ ಕಥೋಲಿಕ ಧರ್ಮ ಸಭೆಗೆ ಅತ್ಯಮೋಘ ಸೇವೆ ಸಲ್ಲಿಸುವ ಅವಕಾಶದ ಬಾಗಿಲನ್ನು ತೆರೆದು ಮೊದಲ ಮೆಟ್ಟಿಲನ್ನು ಮೆಟ್ಟಿ ನಿಂತಿರುತ್ತಾರೆ.

ಎ.ಟಿ.ಸಿಯ ಸ್ಥಾಪಕ ಫ್ರೆಡ್ರಿಕ್‌ ಪಾಯ್ಸ್ ಅವರು ೧೯೮೭ರಲ್ಲಿ ತೀರಿಕೊಂಡ ನಂತರ, ಅದಕ್ಕೆ ಪರ್ಯಾಯವಾಗಿ ಬೆಂಗಳೂರಿನ ಎ.ಟಿ.ಸಿ ಯು ಪ್ರತ್ಯೇಕವಾಗಿ ಕಾರ್ಯನಿರ್ವಹಿಸತೊಡಗಿತು. ಈ ಶತಮಾನದ ಮೊದಲ ದಶಕದಲ್ಲಿ ೨೦೦೮ರಲ್ಲಿ ಎಟಿಸಿ ಕಂಪೆನಿಯನ್ನು ನೈಜಿಲ್ ಫರ್ನಾಂಡಿಸ್‌ ಅವರು ಸ್ವತಂತ್ರವಾಗಿ ನಿರ್ವಹಿಸತೊಡಗಿದರು. ವಹಿವಾಟು ಹೆಚ್ಚಿಸುವ ಉದ್ದೇಶದಿಂದ ೨೦೨೨ರಲ್ಲಿ ನೈಜಿಲ್‌ ಫೆರ್ನಾಂಡಿಸ್‌ ಅವರು, ೨೦೧೬ರಿಂದ ಎ.ಟಿ.ಸಿ ಜೊತೆಗಿರುವ ಉದ್ಯಮಿ ಬ್ರಿಲಿಯಂಟ್‌ ಪ್ರಿಂಟರ್ಸ ಪ್ರೈವೇಟ್‌ ಲಿಮಿಟೆಡ್‌ ನ ಪೀಟರ್‌ ಅನಿಲ್‌ ರೇಗೊ ಅವರ ಜೊತೆಗೂಡಿ, ವಿದ್ಯಾರ್ಥಿಗಳಿಗೆ ಸರ್ವಾಂಗೀಣ ನೈತಿಕ ಶಿಕ್ಷಣ ಒದಗಿಸುವ ಪುಸ್ತಕಗಳ ಹೊಣೆ ಹೊತ್ತ ಅರ್ಕಲೈಟ್‌ ಗ್ಲೋಬಲ್‌ ಪ್ರೈವೇಟ್‌ ಲಿಮಿಟೆಡ್ ಕಂಪೆನಿಯನ್ನು ಆರಂಭಿಸಿದಾಗ ಕಥೋಲಿಕ ಕ್ರೈಸ್ತ ಪ್ರಕಟಣಾ ಕ್ಷೇತ್ರದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿತು.

ನೈಜಿಲ್‌ ಅವರ ಶ್ರಮದ ಹೆಜ್ಜೆ ಗುರುತುಗಳು

ಕಳೆದ ಶತಮಾನದ ೧೯೯೪ರಿಂದಲೇ, ಎ.ಟಿ.ಸಿ ಯಲ್ಲಿ ಕಥೋಲಿಕ ಕ್ರೈಸ್ತ ಪಂಥದ ಆಧ್ಯಾತ್ಮಿಕ, ಧಾರ್ಮಿಕ, ಪೂಜಾಗ್ರಂಥಗಳ, ಪ್ರಾರ್ಥನಾ ಪುಸ್ತಕಗಳ ಮುದ್ರಣ, ಮಾರಾಟ ಚಟುವಟಿಕೆಗಳು ಚುರುಕುಗೊಂಡಿದ್ದವು. ಭಾರತದಾದ್ಯಂತ ಬೇಡಿಕೆ ಸಲ್ಲಿಸಿದವರಿಗೆ ಬೈಬಲ್‌ ಜೊತೆಗೆ ಧಾರ್ಮಿಕ ಗ್ರಂಥಗಳನ್ನು ಪೂರೈಸಲಾಗುತ್ತಿತ್ತು.

ಪುಸ್ತಕಗಳ ಆಮದು ಮತ್ತು ರಫ್ತು ಚಟುವಟಿಕೆಗಳು ಆರಂಭವಾದಾಗ, ಸಿಂಗಾಪುರ, ಮಲೇಶಿಯಾ, ಶ್ರೀಲಂಕಾ ಹಾಗೂ ದುಬೈಗಳಲ್ಲೂ ಎ.ಟಿ.ಸಿಯ ವ್ಯಾಪಾರದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು.

ಈ ಶತಮಾನದ ಮೊದಲ ದಶಕದಲ್ಲಿ ೨೦೦೮ರ ಹೊತ್ತಿಗೆ ನೈಜಿಲ್‌ ಅವರ ಕೊರಳಿಗೆ ಸ್ವತಂತ್ರ ನಿರ್ವಹಣೆಯ ಭಾರ ಬಿದ್ದಾಗ ಸಂಸ್ಥೆಯ ಬೆಳವಣಿಗೆಗೆ ಪುಟ ಸಿಕ್ಕಿತು. ಬೈಬಲ್ಲಿನ ಹಿಬ್ರೂ, ಲ್ಯಾಟಿನ್ ಮೂಲದ ಪಠ್ಯಗಳಿಗೆ ನಿಷ್ಠವಾಗಿ ಕಥೋಲಿಕ ಕ್ರೈಸ್ತ ಪಂಥದ ತತ್ವಗಳಿಗನುಸಾರವಾಗಿ ಇಂಗ್ಲಿಷ್‌ ಭಾಷೆಯ ಬೈಬಲ್‌ ಪಠ್ಯವನ್ನು ಸಹಜ, ಸರಳ ಹಾಗೂ ಸುಂದರವಾಗಿ ರೂಪಿಸಿ, ಮುದ್ರಿಸಿ ಪ್ರಕಟಿಸುವ ಕಾರ್ಯ ಸವಾಲಿನದಾಗಿತ್ತು.

ಬೈಬಲ್‌ ಎಂಬ ದಿವ್ಯ ಧಾರ್ಮಿಕ ಗ್ರಂಥ

ʻದೇವರು ಮಾತಾಡಿದ, ದೇವರು ಮಾತನಾಡುತ್ತಾನೆ, ಅವು ದೇವರ ವಾಕ್ಯಗಳುʼ ಎಂಬ ಭಾವದ ಹಿನ್ನೆಲೆಯಲ್ಲಿ ಮನುಷ್ಯ ಮತ್ತು ದೇವರ ನಡುವಿನ ಒಡಂಬಡಿಕೆಗಳ, ಕಥನಗಳ ಯೆಹೂದಿಗಳ ಚರಿತ್ರೆಯ ಮೂಲಕ ಮೂಡಿಬಂದ ಐತಿಹಾಸಿಕ ವೃತ್ತಾಂತಗಳಿರುವ, ಜೀವನ ಚರಿತ್ರೆಗಳಿರುವ, ಉಪದೇಶಗಳಿರುವ, ದೇವ ನಿಯಮಗಳಿರುವ, ಹಾಡುಗಳಿರುವ, ಪ್ರವಾದನೆಗಳಿರುವ ಹಲವಾರು ಪುಸ್ತಕಗಳ ಕಟ್ಟು ಪವಿತ್ರ ಗ್ರಂಥ ಬೈಬಲ್. ಗ್ರೀಕ್‌ ಭಾಷೆಯಲ್ಲಿ ಬಿಬ್ಲಿಯಾ ಎಂದರೆ ಪುಸ್ತಕಗಳು ಎಂಬ ಅರ್ಥ ಬರುತ್ತದೆ.

ಬೈಬಲ್‌ ಎಂಬ ಶ್ರೀಗ್ರಂಥವು ಯಹೂದಿಗಳ ಮತ್ತು ಕ್ರೈಸ್ತರ ಧಾರ್ಮಿಕ ಹೊತ್ತಿಗೆಗಳ ಕಟ್ಟು. ವಿಶ್ವವ್ಯಾಪಿ ಕಥೋಲಿಕ ಪಂಥದಿಂದ ಸಿಡಿದು ಹೊರಬಂದ ಪ್ರೊಟೆಸ್ಟಂಟ್ ರ ಬೃಹತ್‌ ಬೈಬಲ್‌ ಗ್ರಂಥದಲ್ಲಿ ಹಳೆಯ ಒಡಂಬಡಿಕೆಯ ೩೯ ಹೊತ್ತಿಗೆಗಳು ಹೊಸ ಒಡಂಬಡಿಕೆಯ ೨೭ ಹೊತ್ತಿಗೆಗಳಿವೆ. ಕಥೋಲಿಕ್ ಕ್ಯಾನನ್ ಕಾನೂನು ಎನ್ನುವುದು ಕಥೋಲಿಕ ಧರ್ಮಸಭೆಯ ಕಾನೂನು ಸಂಹಿತೆ, ಈ ಸಂಹಿತೆಯ ಪ್ರಕಾರ ಕಥೊಲಿಕರ ಬೈಬಲ್‌ ನಲ್ಲಿ ಹಳೆಯ ಒಡಂಬಡಿಕೆಯ ೪೬ ಮತ್ತು ಹೊಸ ಒಡಂಬಡಿಕೆಯ ೨೭ ಹೀಗೆ ಒಟ್ಟು ೭೩ ಹೊತ್ತಿಗೆಗಳಿವೆ.

ಅಂತೆಯೇ ಬೈಬಲ್‌ ಬರಹದ ಮೂಲ ಭಾಷೆಗಳಲ್ಲಿ, ಯೆಹೂದಿಗಳು ಆಡುತ್ತಿದ್ದ ಹಿಬ್ರೂ ಜೊತೆಗೆ ಅರಾಮಿಕ ಹಾಗೂ ಅಂದಿನ ಗಣ್ಯರ ಭಾಷೆ ಗ್ರೀಕ್‌ ಭಾಷೆಗಳು ಸೇರುತ್ತವೆ. ಅಲೆಕ್ಸಾಂಡರ್‌ ಮಹಾಶಯನ ದಂಡಯಾತ್ರೆಯ ಪರಿಣಾಮ ಅವನು ಗೆಲುವು ಸಾಧಿಸಿದ ಅಂದಿನ ಪರಿಚಿತ ಜಗತ್ತಿನಲ್ಲಿ ಗ್ರೀಕ್‌ ಸಂಪರ್ಕ ಭಾಷೆಯಾಗಿತ್ತು. ಪ್ರಭು ಯೇಸುಸ್ವಾಮಿಯ ಕಾಲದಲ್ಲಿ ಅವರಿದ್ದ ಪ್ರದೇಶದಲ್ಲಿ ಈ ಮೂರು ಭಾಷೆಗಳ ಜೊತೆ̧̧̧ಗೆ, ರೋಮನ್ನರ ಆಡಳಿತ ಭಾಷೆಯಾಗಿ ಲ್ಯಾಟಿನ್‌ ಭಾಷೆಯೂ ಬಳಕೆಯಲ್ಲಿತ್ತು. ಹಳೆಯ ಒಡಂಬಡಿಕೆಯ ಅನೇಕ ಪಠ್ಯಗಳು ಮೌಖಿಕ ಪರಂಪರೆಯ ನಂತರ ಲಿಪಿ ಸಂಸ್ಕೃತಿಗೆ ರೂಪಾಂತರಗೊಂಡಿವೆ.

ಎರಡನೇ ಶತಮಾನದಲ್ಲಿ ಅರಾಮಿಕ್‌ ಭಾಷೆಗೆ ಹತ್ತಿರದ ಭಾಷೆಯಲ್ಲಿ ಜನರ ಆಸಕ್ತಿಯ ದೆಸೆಯಿಂದ ಹಿಂದೆ ಮಧ್ಯಪ್ರಾಚ್ಯದಲ್ಲೆಲ್ಲಾ ವ್ಯಾಪಕವಾವಗಿ ಬಳಕೆಯಲ್ಲಿದ್ದ ಸಿರಿಯಾಕ್‌ ಬಾಷೆಯಲ್ಲೂ ಬೈಬಲ್‌ ಬಳೆಕೆಯಲ್ಲಿರುತ್ತದೆ. ಅದನ್ನು ಹಳೆಯ ಸಿರಿಯಾಕ್‌ ಭಾಷಾಂತರ ಎಂದು ವಿದ್ವಾಂಸರು ಗುರುತಿಸುತ್ತಾರೆ.ಎರಡು ಮತ್ತು ಮೂರನೇ ಶತಮಾನದಲ್ಲಿ ಹಿಬ್ರೂ ಭಾಷೆಯಲ್ಲಿದ್ದ ಬೈಬಲ್‌ ಗ್ರೀಕ್‌ ಭಾಷೆಗೆ ತರ್ಜುಮೆಗೊಳ್ಳುತ್ತದೆ. ಈ ಬೈಬಲ್‌ ಅನ್ನು ೭೦ ಜನ ಉದ್ದಾಮ ಪಂಡಿತರು ಈ ಅನುವಾದವನ್ನು ಮಾಡಿದರೆಂಬ ಹಿನ್ನೆಲೆಯಲ್ಲಿ ಅದನ್ನು ʻಎಪ್ಪತ್ತು ಪಂಡಿತರ ಬೈಬಲ್‌ʼ (ಸೆಪ್ಟೂವಜಿಂಟ್) ಎಂದು ಕರೆಯಲಾಗುತ್ತದೆ.

ಸಂಪರ್ಕ ಭಾಷೆಯಾಗಿದ್ದ ಲ್ಯಾಟಿನ್‌ ಭಾಷೆ

ನಾಲ್ಕನೇ ಶತಮಾನದಲ್ಲಿ ರೋಮನ್ ಸಾಮ್ರಾಜ್ಯದಲ್ಲಿ ಆಡಳಿತ ಲ್ಯಾಟಿನ್‌ ಪ್ರಭಾವ ಬೀರಿ ಸಂಪರ್ಕ ಭಾಷೆಯಾಗಿದ್ದ ಸಮಯದಲ್ಲಿ, ಕ್ರೈಸ್ತ ವಿದ್ವಾಂಸ ಸಂತ ಜರೋಮ್‌ ಅವರು, ಹಿಬ್ರೂ ಭಾಷೆಯ ಮೂಲ ಪ್ರತಿಯನ್ನು ಆಧರಿಸಿ ಅಂದಿನ ರಾಜಾಶ್ರಯದ ಲ್ಯಾಟಿನ್‌ ಭಾಷೆಗೆ ಅನುವಾದ ಮಾಡುತ್ತಾರೆ. ಅದು ಜನಪ್ರಿಯತೆ ಪಡೆದುಕೊಳ್ಳುತ್ತದೆ. ಅದು, ಶಾಸ್ತ್ರೀಯ ಲ್ಯಾಟಿನ್‌ ಭಾಷೆಗಿಂತ ಭೀನ್ನವಾಗಿ ಸೈನಿಕರು ಜನಸಾಮಾನ್ಯರು ಆಡುತ್ತಿದ್ದ ಲ್ಯಾಟಿನ್‌ ಭಾಷೆಯಲ್ಲಿದ್ದ ಕಾರಣ ಅದನ್ನು ಆಡುಭಾಷೆಯ (ವಲ್ಗೇಟ್‌) ಅನುವಾದ ಎಂದು ಗುರುತಿಸಲಾಗುತ್ತದೆ.

ನಾಲ್ಕನೇ ಶತಮಾನದ ಉತ್ತರಾರ್ಧದಲ್ಲಿ ಈಥಿಯೋಪಿಕ್‌, ಈಜಿಪ್ಟಿಯನ್‌, ಗಾಥಿಕ್‌ ಮತ್ತು ಅಸ್ಸೀರಿಯನ್ ಭಾಷೆಗಳ ಬೈಬಲ್‌ ಆಯಾ ಪ್ರದೇಶದ ಕ್ರೈಸ್ತರ ಬಳಕೆಗೆ ಸಿದ್ಧವಾಗಿರುತ್ತವೆ. ಮುಂದೆ ಸೆಲ್ವಾನಿಕ್‌ ಪಾಠಾಂತರಗಳು ಮೂಡಿಬಂದಿವೆ.

ರೋಮನ್ನರ ಪ್ರಭಾವಳಿಯಲ್ಲಿದ್ದ ಅಂದಿನ ಅನೇಕ ದೇಶಗಳಲ್ಲಿ, ಲ್ಯಾಟಿನ್‌ ಭಾಷೆ ಪ್ರಭುತ್ವವನ್ನು ಸಾಧಿಸಿಕೊಂಡು ಕ್ರೈಸ್ತರ ಆರಾಧನಾ ಮಂದಿರ(ಚರ್ಚು)ಗಳಲ್ಲಿ ದೇವ ಭಾಷೆ- ಧಾರ್ಮಿಕ ಭಾಷೆಯಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಇಪ್ಪತ್ತನೇ ಶತಮಾನದವರೆಗೂ ರೋಮನ್‌ ಕಥೋಲಿಕ್‌ ಧರ್ಮಸಭೆಯ ದೈವಾರಾಧನೆಯಲ್ಲಿ ಮೇಲುಗೈ ಸಾಧಿಸಿದ ಲ್ಯಾಟಿನ್‌ ಭಾಷೆ ಧಾರ್ಮಿಕ ಭಾಷೆಯಾಗಿಯೇ ಉಳಿದುಕೊಂಡಿತ್ತು.

ಈ ನಡುವೆ, ಯುರೋಪಿನಲ್ಲಿ ಸಾಂಸ್ಕೃತಿಕ, ಧಾರ್ಮಿಕ, ವೈಚಾರಿಕ ಪಲ್ಲಟಗಳಿಗೆ ಕಾರಣವಾದ ೧೪ನೇ ಶತಮಾನದಿಂದ ಆರಂಭವಾಗಿ ೧೬ನೇ ಶತಮಾನದವರೆಗಿನ ಸಂಕ್ರಮಣ ಕಾಲವು, ಭಾಷೆ, ಸಾಹಿತ್ಯ,ಕಲೆ, ಸಂಸ್ಕೃತಿಗಳ ಮೇಲೆ ಅಪಾರ ಪ್ರಭಾವ ಬೀರಿತು. ಅದಕ್ಕೆ ಆ ಕಾಲವನ್ನು ಜ್ಞಾನದ ಪುನರ್‌ ಜೀವನದ (ರಿನೇಸಾನ್ಸ್) ಕಾಲ ಎಂದು ಗುರುತಿಸಲಾಗುತ್ತದೆ. ಧಾರ್ಮಿಕ ಕ್ಷೇತ್ರದಲ್ಲಿ ಹೊಸ ನೀರು ಹರಿದಾಗ ರೋಮನ್ ಕಥೋಲಿಕ ಕ್ರೈಸ್ತ ಪಂಥಕ್ಕೆ ಸೆಡ್ಡುಹೊಡೆದ ಪ್ರೊಟೆಸ್ಟಂಟ್‌ ಕ್ರೈಸ್ತ ಪಂಥ ಹುಟ್ಡಿಕೊಂಡಿತು. ಈ ಬಂಡಾಯದ ಚುಕ್ಕಾಣಿ ಹಿಡಿದವರು ಮಾರ್ಟಿನ್‌ ಲೂಥರ್ ಎಂಬ ಮೇಧಾವಿ ಪಾದ್ರಿ. ವಿದ್ವಾಂಸರ ಲ್ಯಾಟಿನ್‌ ಭಾಷೆಗೆ ಪ್ರತಿಯಾಗಿ, ಜನರಲ್ಲಿ ತಾವಾಡುವ ಭಾಷೆಗಳಲ್ಲಿಯೇ ಬೈಬಲ್‌ ಓದಬೇಕೆಂಬ ಇಚ್ಛಾ ಶಕ್ತಿ ಪ್ರಬಲವಾದಾಗ, ಲ್ಯಾಟಿನ್‌ ಭಾಷೆ ಬಿಟ್ಟು ಮೂಲ ಪಠ್ಯಗಳ ಆಧಾರದ ಬೈಬಲ್‌ ಭಾಷಾಂತರಗಳ ಸುಗ್ಗಿ ಆರಂಭವಾಯಿತು. ಅದುವರೆಗೂ ಕೇವಲ ಕ್ರೈಸ್ತ ಯಾಜಕರ ವಶದಲ್ಲಿದ್ದ ʻಸಂತ ಜೆರೋಮರ ವಲ್ಗೇಟ್‌ ಬೈಬಲ್‌ʼ, ಜನಸಾಮಾನ್ಯರ ಮಡಿಲು ಸೇರುವ ಸಮಯ ಒದಗಿಬಂದಿತು. ಪಾದ್ರಿ ಮಾರ್ಟಿನ್‌ ಲೂಥರ್‌ ʻಬೈಬಲ್‌ʼ ಅನ್ನು ಜರ್ಮನ್‌ ಭಾಷೆಗೆ ಬಾಷಾಂತರಿಸಿದರು.

ಬೈಬಲ್‌ ನ ಇಂಗ್ಲಿಷ್ ಭಾಷಾಂತರ ನಡೆದು ಬಂದ ಹಾದಿ

ಕಳೆದ ಆರನೇ ಶತಮಾನದಲ್ಲಿಯೇ ಇಂಗ್ಲಂಡಿನಲ್ಲಿ ಆಂಗ್ಲೊ ಸ್ಯಾಕ್ಸನ್‌ ಹೆಸರಿಸುವ ಇಂಗ್ಲಿಷ್ ಭಾಷೆಗೆ ಬೈಬಲ್ಲಿನ ಕೆಲವು ಪುಸ್ತಕಗಳನ್ನು ಭಾಷಾಂತರಿಸಲಾಗಿತ್ತು. ನಂತರ ಒಂಬತ್ತನೇ ಶತಮಾನದಲ್ಲಿ ಮತ್ತೊಂದಿಷ್ಟು ಬೈಬಲ್‌ ಭಾಗಗಳು ಅಂದಿನ ಇಂಗ್ಲಿಷ್‌ ಭಾಷೆಗೆ ತರ್ಜುಮೆಗೊಂಡಿದ್ದವು. ಹದಿನಾಲ್ಕನೇ ಶತಮಾನದಲ್ಲಿ, ರೋಮನ್‌ ಧಾರ್ಮಿಕ ಶಕ್ತಿಯನ್ನು ಉಡುಗಿಸುವ ಪ್ರಯತ್ನದಲ್ಲಿ, ʻಪ್ರತಿಯೊಬ್ಬರ ಕೈಯಲ್ಲಿ ಬೈಬಲ್‌ ಇರಬೇಕುʼ ಎಂಬ ಉದ್ದೇಶದಿಂದ ವಿದ್ವಾಂಸ ಜಾನ್‌ ವೈಕ್ಲಿಫ್‌ ಮತ್ತು ಸಂಗಡಿಗರು ೧೮೩೦ರಲ್ಲಿ ಹಳೆಯ ಒಡಂಬಡಿಕೆಯನ್ನು ಮತ್ತು ೧೮೩೨ರಲ್ಲಿ ಹೊಸ ಒಡಂಬಡಿಕೆಯನ್ನು ಭಾಷಾಂತರಿಸಿದರು. ಅವನ್ನು ಜಾನ್‌ ಫರ್ವೆ ಎಂಬಾತ ಪರಿಷ್ಕರಣೆ ಮಾಡಿದ. ಅವು ಜನಾದರಣೆ ಪಡೆದಿದ್ದರೂ ಪ್ರಭುತ್ವ ಮತ್ತು ಧಾರ್ಮಿಕ ಮುಖಂಡರು ಅವಕ್ಕೆ ಮನ್ನಣೆ ನೀಡಿರಲಿಲ್ಲ. ಮಹಾಧರ್ಮ ಸಭೆಯ ಅನುಮತಿಯಿಲ್ಲದೆ ಬೈಬಲ್ ಭಾಷಾಂತರ ಮಾಡಕೂಡದೆಂದು ಸಾರಿ, ಅದನ್ನು ಮೀರಿ ನಡೆದರೆ ಅಂಥವರಿಗೆ ಭಹಿಷ್ಕಾರದಂಥ ಕಠಿಣ ಶಿಕ್ಷೆ ವಿಧಿಸಲಾಗುವುದೆಂಬ ಎಚ್ಚರಿಕೆ ನೀಡಲಾಗಿತ್ತು.

ಹಳೆಯ ಒಡಂಬಡಿಕೆಯ ಹಿಬ್ರೂ ಪಠ್ಯ ಮತ್ತು ಗ್ರೀಕ್‌ ನ ಹೊಸ ಒಡಂಬಡಿಕೆಯ ಸಂದೇಹ, ದ್ವಂದ್ವಗಳಿಗೆ ಎಡೆಕೊಡದ, ಪ್ರಭುತ್ವದಿಂದ ಮನ್ನಣೆ ಪಡೆದ ಹದಿನೇಳನ ಶತಮಾನದ ಆದಿಯಲ್ಲಿ ಬೆಳಕು ಕಂಡ ʼಕಿಂಗ್‌ ಜೇಮ್ಸ್‌ ಬೈಬಲ್‌ʼ ಭಾಷಾಂತರವು ಜನಪ್ರಿಯವಾಗಿದೆ. ಹಲವಾರು ಪರಿಷ್ಕರಣೆಗಳನ್ನು ಪಡೆದಿರುವ ಈ ಪಠ್ಯವು ೧೮೮೧-೮೬ ರಲ್ಲಿ ವಿದ್ವಾಂಸರಿಂದ ಮತ್ತೆ ಅದು ಪರಿಷ್ಕರಣೆಗೊಂಡಿದೆ. ಕಳೆದ ೨೦೧೧ರಲ್ಲಿ ವಿಶ್ವದಾದ್ಯಂತ ಕಿಂಗ್‌ ಜೇಮ್ಸ್‌ ಆವೃತ್ತಿಯಾದ ಕೆಜೆವಿ ಬೈಬಲ್ ಆವೃತ್ತಿಯ ನಾಲ್ಕನೇ ಶತಮಾನವನ್ನು ಆಚರಿಸಲಾಗಿದೆ.

ಇದಲ್ಲದೇ ʻದಿ ಗ್ರೇಟ್‌ ಬೈಬಲ್‌ʼ ,ʻಜಿನಿವಾ ಬೈಬಲ್ʼ ಬಿಷಪ್‌ ಬೈಬಲ್‌ ಮೊದಲಾದ ಬಾ಼ಷಾಂತರಗಳೂ ಬಳಕೆಯಲ್ಲಿದ್ದವು. ಅಮೆರಿಕದಲ್ಲಿ ೧೯೦೧ ರಲ್ಲಿ ʻಅಮೆರಿಕನ್‌ ಸ್ಟಾಂಡರ್ಡ್‌ ವರ್ಷನ್‌ʼ ಬೈಬಲ್‌ʼ ಪ್ರಕಟಗೊಂಡಿತ್ತು.

ಬೈಬಲ್‌ ತರ್ಜುಮೆಗೆ ಮುಂದಾದ ಟಿಂಡೇಲ್ ಮಹಾಶಯ

ಅಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರೀಕ್‌ ಮತ್ತು ಹೀಬ್ರೂ ಭಾಷೆಗಳ ಮೂಲದ ಬೈಬಲ್‌ ಪಠ್ಯಗಳನ್ನು ಮೊದಲಬಾರಿ ಇಂಗ್ಲಿಷ್‌ ಭಾಷೆಗೆ ಭಾಷಾಂತರಿಸಲು ವಿದ್ವಾಂಸ ವಿಲಿಯಂ ಟೆಂಡೇಲ್‌ (೧೪೯೪-೧೫೩೬) ಮುಂದಾಗುತ್ತಾರೆ. ಪ್ರಮುಖ ಪ್ರೊಟೆಸ್ಟಂಟ್‌ ಸುಧಾರಕನಾದ ವಿದ್ವಾಂಸ ವಿಲಿಯಂ ಟೆಂಡೇಲ್ ಬೈಬಲ್‌ ಭಾಷಾಂತರವು, ಕಾಲಾಂತರದಲ್ಲಿ ʻಕಿಂಗ್‌ ಜೇಮ್ಸ್‌ ಬೈಬಲ್ʼ ಗ್ರಂಥಕ್ಕೆ ದಾರಿ ಮಾಡಿಕೊಟ್ಟಿತು. ʻಜನ ಸಾಮಾನ್ಯರಿಗೆ ಅಂದರೆ ರೈತಾಪಿ ಜನರಿಗೆ, ನೇಗಿಲು ಹಿಡಿಯುವ ಹುಡುಗರಿಗೆ ಬೈಬಲ್‌ ಅನ್ನ ತಲುಪಿಸುವ ಉದ್ದೇಶ ಹೊಂದಿದ್ದʼ ಅವರ ಆಶಯವನ್ನು ಹತ್ತಿಕ್ಕಿ ಅಂದಿನ ಕಥೋಲಿಕ ಧರ್ಮಸಭೆಯು ಅವರಿಗೆ ʻಧರ್ಮದ್ರೋಹಿʼ ಎಂಬ ಹಣೆಪಟ್ಟಿ ಕಟ್ಟಿತು. ಮುಂದೆ ಅವರನ್ನು ಗಲ್ಲಿಗೇರಿಸಿ, ಬೆಂಕಿಗೆ ಆಹುತಿಮಾಡಲಾಯಿತು.

ಶತಮಾನಗಳು ಉರುಳಿವೆ. ಇಂದು ಟೆಂಡೇಲ್‌ ಅವರನ್ನು ʻಇಂಗ್ಲಿಷ್‌ ಭಾಷೆಯಲ್ಲಿರುವ ಬೈಬಲ್‌ ಗ್ರಂಥಗಳ ಪಿತಾಮಹಾʼ ಎಂದು ಗೌರವಿಸಲಾಗುತ್ತದೆ. ಜೊತೆಗೆ ಅವರಿಗೆ ʻಆದುನಿಕ ಕಾಲದ ಇಂಗ್ಲಿಷ್‌ ಭಾಷೆಯ ಹರಿಕಾರʼ ಎಂದು ಬಣ್ಣಿಸಲಾಗುತ್ತಿದೆ. ಅವರಿಂದಲೇ ಮಧ್ಯ ಕಾಲದಲ್ಲಿ, ಆಧುನಿಕ ಇಂಗ್ಲಿಷ್‌ ನ ಆರಂಭದ ಕಾಲದಲ್ಲಿ, ಇಂಗ್ಲಿಷ್‌ ಭಾಷೆಗೆ ಶಬ್ದಸಂಪತ್ತು, ವ್ಯಾಕರಣ ಸಾಧ್ಯವಾಯಿತು ಎಂದು ಹೇಳಲಾಗುತ್ತದೆ. ಮುಂದೆ ಇಂಗ್ಲಿಷ್‌ ಭಾಷೆಯು ಇಂದಿನ ಜಗತ್ತಿನಲ್ಲಿ ಸಂಪರ್ಕ ಭಾಷೆಯ ಸ್ಥಾನಮಾನ ಪಡೆಯಲು ಸಾಧ್ಯವಾಯಿತು ಎಂದೂ ಹೇಳುತ್ತಾರೆ.

ಪ್ರೊಟೆಸ್ಟಂಟರು ಇಂಗ್ಲಿಷ್‌ ಭಾಷೆಯೂ ಸೇರಿದಂತೆ ವಿಶ್ವದ ವಿವಿಧ ಭಾಷೆಗಳಲ್ಲಿ ಬೈಬಲ್‌ ಅನುವಾದಿಸಿ ಪ್ರಕಟಣೆಗೆ ಮುಂದಾದರು. ಅದರ ಫಲವಾಗಿ, ಇಂದು ಜಗತ್ತಿನ ೭೭೬ಕ್ಕೂ ಅಧಿಕ ಭಾಷೆಗಳಲ್ಲಿ ಬೈಬಲ್‌ ಅನುವಾದಗೊಂಡಿದೆ. ೧೭೯೮ ಭಾಷೆಗಳಲ್ಲಿ ಹೊಸ ಒಡಂಬಡಿಕೆಯ ಪಠ್ಯಗಳು ಅನುವಾದಗೊಂಡಿವೆ.

ಭಾರತದ ಭಾಷೆಗಳಲ್ಲಿ‌ ಪ್ರೊಟೆಸ್ಟಂಟ್‌ ರ ಬೈಬಲ್

ಅರಬರ ಮಧ್ಯಸ್ಥಿಕೆ ಇಲ್ಲದೇ ನೇರವಾಗಿ ಭಾರತದಿಂದ ಮಸಾಲೆ ಪದಾರ್ಥಗಳನ್ನು ಪಡೆಯುವ ಉದ್ದೇಶದಿಂದ ಹದಿನೈದನೇ ಶತಮಾನದಲ್ಲಿ ಭಾರತಕ್ಕೆ ಜಲಮಾರ್ಗ ಹುಡುಕಿ ಭಾರತದ ಕಡಲ ತೀರವನ್ನು ತಲುಪಿದ ಯುರೋಪಿನ ವಿವಿಧ ದೇಶಗಳ ಪೈಕಿ ಬ್ರಿಟಿಷ್‌ ವ್ಯಾಪಾರಿ ಕಂಪೆನಿಯು ಮೇಲುಗೈ ಸಾಧಿಸಿದಾಗ ಪ್ರಾಟೆಸ್ಟಂಟ್‌ ಮಿಷನರಿಗಳು ಭಾರತವನ್ನು ಪ್ರವೇಶಿಸಿದರು. ‌

ಅದಕ್ಕೂ ಮೊದಲೇ, ಒಂದನೇಯ ಶತಮಾನದಲ್ಲಿಯೇ ಯೇಸುಸ್ವಾಮಿಯ ಶಿಷ್ಯ ಸಂತ ಥಾಮಸ್‌ ಅವರು ಭಾರತದ ಮಲಬಾರ ತೀರವನ್ನು ತಲುಪಿ ಮಿಷನರಿ ಕೆಲಸದಲ್ಲಿ ಯಶಸ್ಸು ಕಂಡಿದ್ದರು. ಬ್ರಿಟೀಷರು ಭಾರತದ ಖಂಡದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಸಂದರ್ಭದಲ್ಲಿ ಫ್ರೆಂಚರು, ಡಚ್ಚರು ಮತ್ತು ಪೋರ್ಚುಗೀಜರು ಅಲ್ಲಲ್ಲಿ ತಮ್ಮ ತಮ್ಮ ವಸಾಹತುಗಳನ್ನು ಸ್ಥಾಪಿಸಿದ್ದರು. ಅವರೊಂದಿಗೆ ಬಂದಿದ್ದ ಮಿಷನರಿಗಳು ಭಾರತದ ತೀರಗಳಲ್ಲಿ ಮತ್ತು ಒಳನಾಡಿಗಳಲ್ಲಿ ಸಂಚರಿಸಿ, ಶುಭಸಂದೇಶವನ್ನು ಸಾರುವುದಕ್ಕೆ ಮುಂದಾಗಿದ್ದರು.

ಇಂಗ್ಲಿಷ್‌ ಮಾತೃಭಾಷೆಯ ಬ್ರಿಟೀಷರು ಭಾರತದಲ್ಲಿ ಭದ್ರವಾಗಿ ನೆಲೆಯೂರುತ್ತಿದ್ದಂತೆಯೇ ಅಧಿಕಸಂಖೈಯಲ್ಲಿ ಭಾರತಕ್ಕೆ ಬಂದಿಳಿದ ಪ್ರೊಟೆಸ್ಟಂಟ್‌ ಕ್ರೈಸ್ತ ಮಿಷನರಿಗಳು, ಅಂದಿನ ಹಿಂದಾಸ್ತಾನದ ತುಂಬ ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದರು. ಈ ಮಿಷನರಿಗಳು, ಪ್ರಭುತ್ವ ನಡೆಸುವ ಬ್ರಿಟೀಷ್‌ ಅಧಕಾರಿಗಳಿಗೆ ಮತ್ತು ತಮ್ಮ ಕಾಯಕಕ್ಕೆ ಅನುಕೂಲವಾಗಲೆಂದು ಸ್ಥಳೀಯರ ಭಾಷೆಗಳನ್ನು ಕಲಿತು, ಆಯಾ ಭಾಷೆಗಳಲ್ಲಿಯೇ ಬೈಬಲ್‌ ಅನುವಾದಕ್ಕೆ ಕೈಹಾಕಿದರು.

ಇಂದಿನ ಪಶ್ಚಿಮ ಬಂಗಾಳದ ಹೂಗ್ಲಿ ನದಿ ತೀರದ ಹೂಗ್ಲಿ ಜಿಲ್ಲೆಯ ಸೆರಾಂಪುರದಲ್ಲಿ ನೆಲೆಸಿದ್ದ, ಬ್ರಿಟೀಷ್‌ ಮಿಷನರಿ ರೆವರೆಂಡ್‌ ವಿಲಿಯಂ ಕೇರಿ(೧೭೬೧-೧೮೩೪) ಅವರು ಭಾರತದ ವಿವಿಧ ಭಾಷೆಗಳಲ್ಲಿ ಬೈಬಲ್‌ ಬಾಷಾಂತರ ಕೈಗೊಂಡಿದ್ದರು. ಬೆಂಗಾಲಿ, ಸಂಸ್ಕೃತ, ಓರಿಯಾ, ಮರಾಠಿ, ಹಿಂದಿ ಮುಂತಾದ ಭಾಷೆಗಳಲ್ಲಿ ಬೈಬಲ್‌ ಅನ್ನು ಅನುವಾದಿಸಿದ್ದರು.

ಕಾಲಕ್ರಮೇಣ ಬ್ರಿಟೀಷ್‌ ಪ್ರಭುತ್ವದ ಬಾಷೆ ʻಇಂಗ್ಲಿಷ್‌ ಆಡಳಿತ ಬಾಷೆʼಯಾಗಿ ಜಾರಿಗೆ ಬಂದಿತ್ತು, ಬಹುಭಾಷಿಕರ ಭಾರತದಲ್ಲಿ ಬ್ರಿಟೀಷರು ಆರಂಭಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತವರ ದೆಸೆಯಿಂದ, ಇಂಗ್ಲಿಷ್‌ ಭಾಷೆ ದೇಶದಲ್ಲಿ ಸಮರ್ಥವಾದ ಸಂಪರ್ಕ ಭಾಷೆಯಾಗುವಲ್ಲಿ ದಾಪುಗಾಲು ಇಡಲು ಆರಂಭಿಸಿತ್ತು ಇಪ್ಪತ್ತೊಂದನೇ ಶತಮಾನದಲ್ಲಿ, ʻಅನ್ನದ ಭಾಷೆಯ ಮಟ್ಟಕ್ಕೆ ಏರಿದ ಇಂಗ್ಲಿಷ್‌ ಭಾಷೆಯ ಕಾರಣʼ ಇಂದು ಎಲ್ಲೆಡೆ ಇಂಗ್ಲಿಷ್‌ ಮಾಧ್ಯಮಕ್ಕೆ ಮಣೆ ಹಾಕಲಾಗುತ್ತಿದೆ.

‌ ಕರ್ನಾಟಕದಲ್ಲಿ ಕನ್ನಡದ ʻಪವಿತ್ರ ಬೈಬಲ್ʼ

ಹದಿನಾರನೇ ಶತಮಾನಕ್ಕೂ ಮುಂಚೆಯೇ ಕನ್ನಡ ನಾಡಿನಲ್ಲಿ ಕ್ರೈಸ್ತ ಧರ್ಮ ಅಂಬೆಗಾಲಿಡಲು ಆರಂಭಿಸಿತ್ತು. ಬ್ರಿಟೀಷರೊಂದಿಗೆ ಕನ್ನಡದ ನೆಲಕ್ಕೆ ಬಂದ ಪ್ರೊಟೆಸ್ಟಂಟ್‌ ಕ್ರೈಸ್ತ ಮಿಷನರಿಗಳು ಹತ್ತೊಂಬತ್ತನೇ ಶತಮಾನದಲ್ಲಿಯೇ ಹಿಬ್ರೂ, ಗ್ರೀಕ್‌ ಪಠ್ಯಗಳನ್ನು ಆಧರಿಸಿ ಅಂದಿನ ಕನ್ನಡ ಭಾಷೆಯಲ್ಲಿ ʻಸತ್ಯವೇದʼ (೧೮೬೦) ಮತ್ತು ʻದೇವರ ವಾಕ್ಯವುʼ ಹೆಸರಿನಲ್ಲಿ (೧೮೬೫) ಬೈಬಲ್‌ ಪಠ್ಯವನ್ನು ಪ್ರಕಟಿಸಿದ್ದರು. ಮುಂದೆ ೧೯೩೪ರಲ್ಲಿ ʻಸತ್ಯವೇದವುʼ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಪ್ರೊಟೆಸ್ಟಂಟ್‌ರ ಮಟ್ಟಿಗೆ ಸಮಗ್ರ ಬೈಬಲ್‌ ಪ್ರಕಟಗೊಂಡಿತ್ತು. ಅದು ಪ್ರೊಟೆಸ್ಟಂಟ್‌ ರಲ್ಲಿ ಈಗಲೂ ಬಳಕೆಯಲ್ಲಿದೆ. ಆ ಬೈಬಲ್‌ ಸಿದ್ಧತೆಯಲ್ಲಿ ವಿಲಿಯಂ ರೀವ್‌, ಜಿ. ವೈಗಲ್‌, ಎಫ್‌. ಕಿಟ್ಟಲ್‌, ಬೆಂಜಾಮಿನ್‌ ರೈಸ್‌, ಇ.ಪಿ. ರೈಸ್‌ ಮುಂತಾದ ಮಿಷನರಿಗಳ ಜೊತೆಗೆ ಸ್ಥಳೀಯ ವಿದ್ವಾಂಸರಾದ ನೀಲಕಂಠ ಶಾಸ್ತ್ರಿ, ಪಿ ಕರಿಬಸಪ್ಪ ಶಾಸ್ತ್ರಿ ಮೊದಲಾದವರು ಶ್ರಮಿಸಿದ್ದರು.

ಕರ್ನಾಟಕ ರಾಜ್ಯದ – ಕನ್ನಡ ನಾಡಿನ ಭಾಷೆ ಕನ್ನಡವನ್ನು ತಾಯಿ ಭಾಷೆಯಾಗಿ ಹೊಂದಿದ್ದ ಕನ್ನಡ ಭಾಷಿಕ ಕಥೋಲಿಕರಿಗೆ ತಮ್ಮದೇ ಆದ ಬೈಬಲ್ ಇರಲಿಲ್ಲ. ಈ ಶೂನ್ಯವನ್ನು ನಿವಾರಿಸಲು ಕಳೆದ ಶತಮಾನದ ಉತ್ತರಾರರ್ಧದಲ್ಲಿ ಕನ್ನಡದ ಸಾಹಿತಿಗಳ ಮತ್ತು ವಿಷಯ ಪಂಡಿತರ ತಂಡವು, ಆಧುನಿಕ ಇಂಗ್ಲಿಷ್‌ ಅನುವಾದ (ಜಿ.ಎನ್.ಬಿ), ಜೆರುಸಲೇಮ್‌ ಬೈಬಲ್‌ (ಜೆ.ಬಿ), ಅಂತರ್ರಾಷ್ಟ್ರೀಯ ಹೊಸ ಅನುವಾದ (ಎನ್.ಐ.ವಿ), ನೂತನ ಇಂಗ್ಲಿಷ್‌ ಅನುವಾದ̈ (ಎನ್‌. ಇ. ಬಿ), ಪರಿಷ್ಕೃತ ಪ್ರಮಾಣಿಕ ಅನುವಾದ (ಆರ್. ಎಸ್.‌ ವಿ) ಮತ್ತು ಅದರದೇ ವಿನೂತನ ಅನುವಾದಗಳನ್ನು ಆದರಿಸಿ ʻಪವಿತ್ರ ಬೈಬಲ್‌ʼ ಹೆಸರಿನಲ್ಲಿ ಕನ್ನಡ ಕಥೋಲಿಕ ಬೈಬಲ್‌ ಅವತರಣಿಕೆಯನ್ನು ೧೯೯೩ರಲ್ಲಿ ಪ್ರಕಟಿಸಿತ್ತು. ಆ ʻಪವಿತ್ರ ಬೈಬಲ್‌ʼ ಪ್ರಕಟಣೆಗೆ ಮೈಸೂರು ಧರ್ಮಕ್ಷೇತ್ರದ ಅಂದಿನ ಬಿಷಪ್‌ ರಾದ ಅತಿ ವಂದನೀಯ ಎಫ್‌ ಮಿಖೇಲಪ್ಪ ಅವರು ಅಧಿಕೃತ ಅನುಮತಿ ಇಂಪ್ರಿಮಾತುರ್ ನೀಡಿದ್ದರು. ಈ ಕನ್ನಡ ಬೈಬಲ್‌ ಆವೃತ್ತಿ ಹಲವು ಬಾರಿ ಮರುಮುದ್ರಣ ಹಾಗೂ ಪರಿಷ್ಕರಣೆಗೊಳ್ಳುತ್ತಾ ಸಾಗಿದೆ.

ಕಾಲಕ್ಕೆ ತಕ್ಕ ಪರಿಷ್ಕರಣೆ ಅನಿವಾರ್ಯ

ಆಗಾಗ ʻಪವಿತ್ರ ಬೈಬಲ್‌ʼ ಪರಿಷ್ಕರಣೆ ಅನಿವಾರ್ಯ ಏಕೆಂದರೆ, ಭಾಷೆ ನಿಂತ ನೀರಲ್ಲ. ಕನ್ನಡ ಭಾಷೆಯು ಹಳೆಗನ್ನಡ, ನಡುಗನ್ನಡ ಕಾಲಗಳನ್ನು ದಾಟಿ ಈಗ ಆಧನಿಕ ಕನ್ನಡ ಭಾಷೆಯಾಗಿ ಬಳಕೆಯಲ್ಲಿದೆ.

ಕಳೆದ ಒಂಬತ್ತನೇ ಶತಮಾನದಲ್ಲಿ ಹಳೆಗನ್ನಡದ ತಂದೆ(ಅಪ್ಪ)ಯಾಗಿದ್ದ ʻಅಮ್ಮʼ ಪದಕ್ಕೆ, ನಂತರದ ಆಧುನಿಕ ಕಾಲದಲ್ಲಿ ʻಅಮ್ಮʼ ಪದಕ್ಕೆ ತಾಯಿ ಎಂಬ ಹೆಸರು ಪ್ರಾಪ್ತವಾಗಿದೆ. ಕಾಲಾಂತರದಲ್ಲಿ ಪದಗಳ ಅರ್ಥಗಳಲ್ಲಿ ಪಲ್ಲಟಗಳಾಗುವುದು ಸಾಮಾನ್ಯ. ಇದು ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂಗ್ಲಿಷ್‌ ಭಾಷೆಯೂ ಸೇರಿದಂತೆ ಎಲ್ಲಾ ಭಾಷೆಗಳ ಪದಗಳಲ್ಲಿ ಅರ್ಥ ವ್ಯತ್ಯಾಸಗಳು ನಡೆಯುತ್ತಲೆ ಇರುತ್ತದೆ.

ಜೊತೆಗೆ ಸಂಶೋಧನೆಗಳ ಫಲವಾಗಿ ಹಿಂದಿನ ಬೈಬಲ್‌ನ ಪುರಾತನ ಪಠ್ಯಗಳು ಪತ್ತೆಯಾದಾಗ, ಅವು ಬೈಬಲ್ಲಿನ ಪರಿಷ್ಕರಣೆಗೆ ಇಂಬು ಕೊಡುತ್ತವೆ. ಇದಲ್ಲದೇ, ಮೊದಲ ʻಕಿಂಗ್‌ ಜೇಮ್ಸ್‌ ವರ್ಷನ್‌ʼನ ಇಂಗ್ಲಿಷ ಭಾಷೆ, ಆಧುನಿಕ ಇಂಗ್ಲಿಷ್‌ ಕಲಿತ ಇಂದಿನವರಿಗೆ ʻಕಬ್ಬಿಣದ ಕಡೆಲೆʼಯಂತೆ ಕಾಣುವುದರಲ್ಲಿ ಅಚ್ಚರಿ ಏನಿಲ್ಲ. ಹೀಗಾಗಿ ಬೈಬಲ್‌ ಪರಿಷ್ಕರಣೆ ಅನಿವಾರ್ಯ.

ಕೊಂಕಣಿ ಮತ್ತು ತುಳು ಭಾಷೆಗಳಲ್ಲಿ ಬೈಬಲ್

ಲಿಪಿ ಇಲ್ಲದ ಕೊಂಕಣದ ಕೊಂಕಣಿ ಭಾಷೆಯು ಗೋವೆಯ ಭಾಷೆ. ಅಲ್ಲಿನ ಜನ ದಕ್ಷಿಣಕ್ಕೆ ವಲಸೆ ಬಂದಾಗ, ಅದು ಕನ್ನಡ ನಾಡಿನ ಉತ್ತರ ಮತ್ತು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಸರಿಸಿತ್ತು. ಕೊಂಕಣಿ ಭಾಷೆಯಲ್ಲಿ ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್‌ ಹೊರತರುವ ಕಾರ್ಯಕ್ಕೆ ಹದಿನಾರನೇ ಶತಮಾನದಲ್ಲಿಯೇ ಶ್ರೀಕಾರ ಹಾಕಲಾಗಿದೆ. ಕೊಂಕಣಿ ವ್ಯಾಕರಣವನ್ನು ೧೫೭೯ರಲ್ಲಿ ಹೊರತಂದ ಗೋವೆಯಲ್ಲಿದ್ದ ಸ್ವಾಮಿ ಥಾಮಸ್ ಸ್ಟೀಫನ್ನರು ʻಕ್ರಿಸ್ತ ಪುರಾಣʼದ ಹೆಸರಿನಲ್ಲಿ ಹೊಸ ಒಡಂಬಡಿಕೆಯನ್ನು ರೋಮನ್‌ ಲಿಪಿಯ ಕೊಂಕಣಿಯ ಗದ್ಯ ರೂಪದಲ್ಲಿ ರಚಿಸಿದ್ದರು.

ಗೋವೆಯ ಸೆಲ್ಸೆಟ್‌ ನಲ್ಲಿ ನೆಲೆಸಿದ್ದ ಯೇಸುಸಭೆಯ (ಜೆಸೂಯಿಟ್‌) ಪಾದ್ರಿ ವಂದನೀಯ ಇಗ್ನೆಷಿಯೊ ಅರ್ಕಮೊನಿ (೧೬೧೫-೧೬೮೩) ( Ignazio Arcamone) ಬೈಬಲ್ಲಿನ ಕೆಲವು ಭಾಗಗಳನ್ನು ಕೊಂಕಣಿ ಬಾಷೆಗೆ ಭಾ಼ಷಾಂತರಿಸಿದ್ದರು. ಅದು, ‌ʻಸೊಗಳ್ಯಾ ವೊರ್ಸಾಚೆ ವಾಂಜೆಲ್ʼ (


Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
Inline Feedbacks
View all comments
wpDiscuz
0
0
Would love your thoughts, please comment.x
()
x
Exit mobile version