ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲು ಪ್ರಜಾ ಸೇವೆ ಆಂದೋಲನ: ಯಶ್ಪಾಲ್ ಸುವರ್ಣ
ಉಡುಪಿ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಪರಿಹಾರ ನೀಡಲು ಪ್ರಜಾಸೇವೆ ಆಂದೋಲನವನ್ನು ಪ್ರಾರಂಭಿಸಲಾಗಿದೆ. ಪ್ರತೀ ಶನಿವಾರ ಹೋಬಳಿ ಮಟ್ಟದಲ್ಲಿ ಪ್ರಜಾ ಸೇವೆ ಸಭೆಗಳನ್ನು ನಡೆಸಿ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.
ಅವರು ತೆಂಕ ನಿಡಿಯೂರು ಗಣೇಶೋತ್ಸವ ಸಭಾಭವನದಲ್ಲಿ ನಡೆದ ಪ್ರಜಾಸೇವಾ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿದರು. ಜನರು ತಮ್ಮ ಸಮಸ್ಯೆಗಳ ಬಗ್ಗೆ ಅರ್ಜಿ ನೀಡಿದಲ್ಲಿ ಸ್ಥಳದಲ್ಲೇ ಅಧಿಕಾರಿಗಳ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಅರ್ಜಿ ನೀಡಿದ 21 ದಿನಗಳ ಒಳಗೆ ಸಮಸ್ಯೆಗೆ ಪರಿಹಾರ ನೀಡುವುದು ಕಡ್ಡಾಯವಾಗಿದ್ದು ಅಧಿಕಾರಿಗಳು ಜನಪರವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಸರಕಾರಿ ಕಚೇರಿಗಳಲ್ಲಿ 50% ರಷ್ಟು ಸಿಬ್ಬಂದಿಗಳ ಕೊರತೆ ಇದೆ. ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಸಿಬ್ಬಂದಿಗಳನ್ನು ಭರ್ತಿ ಮಾಡಲು ಮನವಿ ಮಾಡಲಾಗಿದೆ. ಇಲಾಖೆಯಲ್ಲಿ ಸಿಬ್ಬಂದಿಗಳಿದ್ದಾಗ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಿ ಜನರಿಗೆ ಸಹಾಯ ವಾಗುತ್ತದೆ ಎಂದರು.
ಉಡುಪಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ ಸರಕಾರಿ ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಬಂದು ಅವರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎನ್ನುವ ಕಾರಣಕ್ಕೆ ಪ್ರಜಾಸೇವೆ ಆಂದೋಲನ ವನ್ನು ಕೈಗೊಳ್ಳಲಾಗುತ್ತಿದೆ. ಇದು ಕಾಟಾಚಾರದ ಕಾರ್ಯಕ್ರಮವಾಗದೆ ಜನರಿಗೆ ತಮ್ಮ ಅಹವಾಲುಗಳಿಗೆ ಸ್ಪಂದನೆ ದೊರೆತು ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಜಯ, ತಹಶೀಲ್ದಾರ್ ಪಿ. ಗುರುರಾಜ್, ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಹೇಮಂತ್ ಕುಮಾರ್, ಮಲ್ಪೆ ಠಾಣೆ ಉಪ ನಿರೀಕ್ಷಕ ಅನಿಲ್, ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ಮೊದಲಾದವರು ಉಪಸ್ಥಿತರಿದ್ದರು.
