ಪ್ರವಾಸಿಗರ ದುರಂತ ಸಾವಿನಲ್ಲೂ ಚಿಲ್ಲರೆ ರಾಜಕಾರಣ ಮಾಡಲು ಹೊರಟ ಪ್ರಸಾದ್ ಕಾಂಚನ್ ಹೇಳಿಕೆ ಅವಿವೇಕದ ಪರಮಾವಧಿ : ದಿನೇಶ್ ಅಮೀನ್
ನಿನ್ನೆ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಡಿ ಬೆಂಗ್ರೆಯಲ್ಲಿ ಪ್ರವಾಸಿ ಬೋಟ್ ದುರಂತದಲ್ಲಿ ಮೂವರು ಪ್ರವಾಸಿಗರು ಸಾವಿಗೀಡಾದ ಬಗ್ಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಯಶ್ಪಾಲ್ ಸುವರ್ಣ ಹೇಳಿಕೆಯನ್ನು ಸಹಿಸದೇ ಹತಾಶ ಪ್ರಸಾದ್ ಕಾಂಚನ್ ಇಂದು ಶಾಸಕರ ವಿರುದ್ಧ ರಾಜಕೀಯ ಪ್ರೇರಿತ ಹೇಳಿಕೆ ನೀಡುವ ಮೂಲಕ ಸಾವಿಗೀಡಾದ ಪ್ರವಾಸಿಗರ ಸಾವಿನ ಪ್ರಕರಣವನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಸಿ ಅವಮಾನ ಮಾಡುವ ಮೂಲಕ ತಮ್ಮ ಅವಿವೇಕದ ಪರಮಾವಧಿಯನ್ನು ಮೆರೆದಿದ್ದಾರೆ ಎಂದು ಬಿಜೆಪಿ ಉಡುಪಿ ನಗರ ಅಧ್ಯಕ್ಷ ದಿನೇಶ್ ಅಮೀನ್ ಹೇಳಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಸಾದ್ ಕಾಂಚನ್ ರಿಗೆ ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅರಿವೇ ಇಲ್ಲದೆ ಇರುವುದು ವಿಪರ್ಯಾಸ. ಕೋಡಿ ಬೆಂಗ್ರೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಭಾಗ ಎಂಬ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲದ ಪ್ರಸಾದ್ ಕಾಂಚನ್ ಪ್ರಬುದ್ಧ ಮತದಾರರನ್ನು ಹೊಂದಿರುವ ಉಡುಪಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೇ ಉಡುಪಿ ಜನತೆಗೆ ಮಾಡಿದ ಅಪಮಾನವಾಗಿದೆ.
ಉಡುಪಿ ಶಾಸಕರು ಓರ್ವ ಜವಾಬ್ದಾರಿಯುತ ಶಾಸಕರಾಗಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆಯಾಗಿರುವ ಘಟನೆಯನ್ನು ಖಂಡಿಸಿ, ಅಮಾಯಕ ಪ್ರವಾಸಿಗರ ಸಾವಿಗೆ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಹೇಳಿಕೆ ನೀಡಿದಾಗ, ಪ್ರಸಾದ್ ಕಾಂಚನ್ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಮಾತನಾಡದೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ವಕ್ತಾರನಂತೆ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದರೆ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಹಾಗೂ ನಿರ್ಲಕ್ಷ್ಯ ಧೋರಣೆಗೆ ಪರೋಕ್ಷವಾಗಿ ಸಹಕಾರ ನೀಡುವಂತಿದೆ.
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ, ಪ್ರವಾಸಿಗರ ಸುರಕ್ಷತೆ ಬಗ್ಗೆ ಕಾಳಜಿಯೇ ಇಲ್ಲದ ಪ್ರಸಾದ್ ಕಾಂಚನ್ ಒಮ್ಮೆಲೇ ಜ್ಞಾನೋದಯವಾದಂತೆ ಅವಿವೇಕದ ಹೇಳಿಕೆ ನೀಡಿ ಪ್ರವಾಸಿಗರ ದುರಂತ ಸಾವಿನಲ್ಲೂ ಚಿಲ್ಲರೆ ರಾಜಕಾರಣ ಮಾಡಲು ಹೊರಟಿರುವುದು ವಿಷಾದನೀಯ.
ಮೂರು ಅಮೂಲ್ಯ ಜೀವಗಳನ್ನು ಈ ದುರಂತದಿಂದ ಕಳೆದುಕೊಂಡರೂ ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಕ್ರಮಕ್ಕೆ ಆಗ್ರಹ ಮಾಡದೇ, ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಮರೆಮಾಚಲು ಪ್ರಸಾದ್ ಕಾಂಚನ್ ಮುಂದಾಗಿರುವುದು ಅತ್ಯಂತ ಖಂಡನೀಯ.
ಪ್ರವಾಸೋದ್ಯಮ ಸಹಿತ ಎಲ್ಲಾ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಪ್ರವಾಸಿ ಬೋಟುಗಳ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಕಾರ್ಯಾಚರಿಸುವ ಬಗ್ಗೆ ಯಾವುದೇ ಕ್ರಮ ವಹಿಸದ ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸುವ ಬದಲು ಅದೇ ಅಧಿಕಾರಿಗಳ ಪರ ರಕ್ಷಣೆಗೆ ನಿಂತು ಹೇಳಿಕೆ ನೀಡಿರುವುದನ್ನು ಕಂಡರೆ ಪ್ರಸಾದ್ ಕಾಂಚನ್ ಕೂಡಾ ಈ ಭ್ರಷ್ಟಾಚಾರದಲ್ಲಿ ಅಧಿಕಾರಿಗಳೊಂದಿಗೆ ಶಾಮೀಲಾದಂತೆ ಕಾಣುತ್ತಿದೆ.
ಮುಂದಿನ ದಿನಗಳಲ್ಲಿಯಾದರೂ ಕಾಂಗ್ರೆಸ್ ಪಕ್ಷದ ನಾಯಕರು ಪ್ರಸಾದ್ ಕಾಂಚನ್ ರಿಗೆ ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಗ್ಗೆ ಸರಿಯಾದ ಮಾಹಿತಿ ನೀಡುವುದು ಉತ್ತಮ. ಪದೇ ಪದೇ ಇಂತಹ ಕ್ಷುಲ್ಲಕ, ಅಪ್ರಬುದ್ಧ, ಅಸಂಬದ್ಧ ಹೇಳಿಕೆಗಳು ಜಿಲ್ಲೆಯಲ್ಲಿ ಕೇವಲ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತಾಗುವುದು ನಿಶ್ಚಿತ ಎಂದು ದಿನೇಶ್ ಅಮೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
