Home Mangalorean News Kannada News ಭಾಷಾಭಿಮಾನ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಬೇಕು: ಯು.ಟಿ. ಖಾದರ್

ಭಾಷಾಭಿಮಾನ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಬೇಕು: ಯು.ಟಿ. ಖಾದರ್

Spread the love

ಭಾಷಾಭಿಮಾನ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಬೇಕು: ಯು.ಟಿ. ಖಾದರ್

ಮಂಗಳೂರು : ಕನ್ನಡಾಭಿಮಾನವು ಇತರ ಭಾಷಿಗರನ್ನು ದೂರವಿಡುವ ಶಕ್ತಿಯಾಗದೆ, ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ನಗರದ ನೆಹರು ಮೈದಾನದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡವೆಂದರೆ ಕೇವಲ ಒಂದು ಭಾಷೆಯ ಹೆಸರಲ್ಲ, ಅದೊಂದು ಮಂತ್ರ, ಮಹಾಶಕ್ತಿ. ಕನ್ನಡವೆಂದರೆ ನಮ್ಮ ಅಸ್ಮಿತೆ, ಈ ಮಣ್ಣಿನ ಕಂಪು ಮಾತ್ರವಲ್ಲ, ಬದುಕಿನ ಪ್ರತಿ ಹೆಜ್ಜೆಯಲ್ಲೂ ಬೆಸೆದುಕೊಂಡಿರುವ ಆತ್ಮೀಯತೆಯ ನಂಟು. ಕಾವೇರಿಯ ನಿರಂತರ ಹರಿವು, ಸಹ್ಯಾದ್ರಿಯ ಎತ್ತರದ ಗರಿಮೆ, ಕರಾವಳಿಯ ಕಡಲಿನ ಅಲೆಗಳ ಸಂವಾದವಾಗಿದೆ. ಕನ್ನಡ ಕೇವಲ ಗತಕಾಲದ ಇತಿಹಾಸದ ವೈಭವವಲ್ಲ; ವರ್ತಮಾನದ ಆತ್ಮವಿಶ್ವಾಸವೂ ಹೌದು, ನಮ್ಮೆಲ್ಲರ ಭವಿಷ್ಯದ ಹೊಣೆಗಾರಿಕೆಯೂ ಹೌದು ಎಂದರು.

ಪಂಪನ ಕಾವ್ಯದ ವೈಭವ, ಬಸವಣ್ಣನ ವಚನದ ಸಮಾನತೆಯ ಕ್ರಾಂತಿ, ಅಕ್ಕಮಹಾದೇವಿಯ ಆತ್ಮಜ್ಞಾನದ ಅರಿವು, ಕನಕದಾಸರ ಭಕ್ತಿಯ ಮಾಧುರ್ಯ, ಕುವೆಂಪು ಅವರ ವಿಶ್ವಮಾನವತೆಯ ಮಹಾಸಂದೇಶಗಳು ಮನುಷ್ಯನನ್ನು ಜಾತಿ, ಮತ, ವರ್ಗ, ಲಿಂಗ ಸೇರಿದಂತೆ ಎಲ್ಲ ಸಂಕುಚಿತ ಗಡಿಗಳನ್ನು ಮೀರಿ ವಿಶಾಲ ಮಾನವೀಯತೆಯ ನೆಲೆಗೆ ಕರೆದೊಯ್ಯುತ್ತವೆ. ಕನ್ನಡದ ಮಹಾನ್ ಪರಂಪರೆ ಭಾಷೆಯನ್ನು ಕೇವಲ ಅಭಿವ್ಯಕ್ತಿಯ ಸಾಧನವಾಗಿ ಉಳಿಸದೆ, ಅನ್ಯಾಯವನ್ನು ಪ್ರಶ್ನಿಸುವ, ಸಾಮಾಜಿಕ ಪರಿವರ್ತನೆಗೆ ಪ್ರೇರಣೆ ನೀಡುವ ಮತ್ತು ಮಾನವ ಪ್ರಜ್ಞೆಯನ್ನು ವಿಸ್ತರಿಸುವ ಶಕ್ತಿಯನ್ನಾಗಿ ರೂಪಿಸಿದೆ ಎಂದು ಹೇಳಿದರು.

ಪ್ರಪಂಚದ ಸಾವಿರಾರು ಭಾಷೆಗಳ ನಡುವೆ ಎರಡು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸ ಮತ್ತು ಶ್ರೀಮಂತ ಸಾಹಿತ್ಯಿಕ ಪರಂಪರೆಯನ್ನು ಹೊಂದಿ, ಭಾರತ ಸರ್ಕಾರದ ಶಾಸ್ತ್ರೀಯ ಭಾಷೆಯ ಗೌರವಕ್ಕೆ ಪಾತ್ರವಾಗಿರುವ ಕೆಲವೇ ಕೆಲವು ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಕನ್ನಡಿಗರು ಪ್ರಪಂಚದ ಯಾವುದೇ ದೇಶದಲ್ಲಿ ನೆಲೆಸಿದ್ದರೂ ತಮ್ಮ ಪ್ರತಿಭೆ, ಪರಿಶ್ರಮ, ಸಾಧನೆ ಮತ್ತು ಸೃಜನಶೀಲತೆಯ ಮೂಲಕ ಕನ್ನಡ ನಾಡಿನ ಕೀರ್ತಿಯನ್ನು ಜಾಗತಿಕ ವೇದಿಕೆಯಲ್ಲಿ ಎತ್ತಿಹಿಡಿಯುತ್ತಿದ್ದಾರೆ. ಭಾಷೆಯ ಸೊಗಡು, ಮಣ್ಣಿನ ಕಂಪು, ಸಂಸ್ಕೃತಿ ಮತ್ತು ಪರಂಪರೆಯ ಹಿರಿಮೆಯನ್ನು ವಿಶ್ವದ ಮೂಲೆಮೂಲೆಗೂ ಪರಿಚಯಿಸುತ್ತಿದ್ದಾರೆ ಎಂದರು.

ಕುವೆಂಪು ಅವರು, ‘ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡಿಗನಾಗಿರು’ ಎಂದು ಹೇಳಿದ್ದಾರೆ. ಕರ್ನಾಟಕದಿಂದ ದೂರ ಹೋದರೂ ಕನ್ನಡದಿಂದ ದೂರ ಹೋಗಬಾರದು ಎಂಬುದೇ ಈ ಸಾಲುಗಳ ಆಂತರ್ಯವಾಗಿದೆ ಎಂದು ಅವರು ಹೇಳಿದರು.

1956ರ ನವೆಂಬರ್ 1ರಂದು ವಿವಿಧ ಆಡಳಿತಾತ್ಮಕ ಪ್ರದೇಶಗಳಲ್ಲಿ ಹರಡಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನು ರಚಿಸಲಾಯಿತು. ಮುಂದೆ 1973ರ ನವೆಂಬರ್ 1ರಂದು ರಾಜ್ಯಕ್ಕೆ ಕರ್ನಾಟಕ ಎಂಬ ನಾಮಧೇಯ ಲಭಿಸಿತು. ಆಲೂರು ವೆಂಕಟರಾಯರಿಂದ ಹಿಡಿದು ಕನ್ನಡ ಏಕೀಕರಣದ ಹೋರಾಟಗಾರರವರೆಗೆ, ಬಸವಣ್ಣನಿಂದ ಕನಕದಾಸರವರೆಗೆ, ಪಂಪನಿಂದ ಕುವೆಂಪುವರೆಗೆ ಪ್ರತಿಯೊಂದು ತಲೆಮಾರೂ ಕನ್ನಡದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದೆ. ಕನ್ನಡಕ್ಕೆ ದೊರೆತಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳು ನಮ್ಮ ಸಾಹಿತ್ಯಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ ಎಂದರು.

ಕನ್ನಡಕ್ಕೆ ಕೊಡುಗೆ ನೀಡಿದವರು ಕೇವಲ ಕವಿಗಳು, ಸಾಹಿತಿಗಳು ಮತ್ತು ಹೋರಾಟಗಾರರು ಮಾತ್ರವಲ್ಲ. ಕನ್ನಡದಲ್ಲಿ ಮೊದಲ ಅಕ್ಷರ ಬರೆದ ಮಗು, ತನ್ನ ಮಗುವಿಗೆ ಕನ್ನಡ ಕಲಿಸುವ ತಾಯಿ, ಕನ್ನಡದಲ್ಲಿ ಪಾಠ ಮಾಡುವ ಶಿಕ್ಷಕ, ಸಂಶೋಧನೆ ನಡೆಸುವ ವಿಜ್ಞಾನಿ, ಕನ್ನಡದಲ್ಲಿ ಆಡಳಿತ ನಡೆಸುವ ಅಧಿಕಾರಿ ಹಾಗೂ ಕನ್ನಡದ ನೆಲ-ನುಡಿಯನ್ನು ಉಳಿಸಲು ಶ್ರಮಿಸುವ ಪ್ರತಿಯೊಬ್ಬ ನಾಗರಿಕನೂ ಕನ್ನಡದ ಬೆಳವಣಿಗೆಯ ಪಾಲುದಾರನಾಗಿದ್ದಾನೆ ಎಂದು ಹೇಳಿದರು.

ಇಂದು ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಮತ್ತು ಡಿಜಿಟಲ್ ಶಿಕ್ಷಣದ ಜಗತ್ತಿನಲ್ಲಿ ನಾವಿದ್ದೇವೆ. ಈ ಹೊಸ ಜಗತ್ತಿನಲ್ಲಿ ಕನ್ನಡವೂ ಸಕ್ರಿಯವಾಗಿ ಭಾಗವಹಿಸಬೇಕು. ಕನ್ನಡದ ಪದಸಂಪತ್ತು, ಉಪಭಾಷೆಗಳು, ಜನಪದ ಜ್ಞಾನ ಮತ್ತು ಸಾಹಿತ್ಯವನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಬೇಕು. ಕನ್ನಡದಲ್ಲಿ ಗುಣಮಟ್ಟದ ವಿಜ್ಞಾನ ಸಾಹಿತ್ಯ, ತಾಂತ್ರಿಕ ಸಂಪನ್ಮೂಲಗಳು ಮತ್ತು ಶೈಕ್ಷಣಿಕ ವಿಷಯಗಳನ್ನು ರೂಪಿಸಬೇಕು. ಕನ್ನಡವು ಕೇವಲ ತಂತ್ರಜ್ಞಾನವನ್ನು ಬಳಸುವ ಭಾಷೆಯಾಗದೆ, ತಂತ್ರಜ್ಞಾನದ ಬೆಳವಣಿಗೆಗೆ ಕೊಡುಗೆ ನೀಡುವ ಭಾಷೆಯಾಗಬೇಕು ಎಂದರು.

ಭಾಷೆಯ ಭವಿಷ್ಯವನ್ನು ತಂತ್ರಜ್ಞಾನವೊಂದೇ ನಿರ್ಧರಿಸುವುದಿಲ್ಲ. ಅದನ್ನು ಬಳಸುವ ಜನರ ಜೀವನಶೈಲಿಯೂ ನಿರ್ಧರಿಸುತ್ತದೆ. ಕನ್ನಡದಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಳ್ಳುವ ರೈತನಿಗೆ ಸರ್ಕಾರಿ ಸೇವೆ ಸುಲಭವಾಗಿ ದೊರೆಯುತ್ತದೆಯೇ, ಕನ್ನಡದಲ್ಲಿ ಕಲಿಯುವ ವಿದ್ಯಾರ್ಥಿಗೆ ಗುಣಮಟ್ಟದ ಶಿಕ್ಷಣ ಮತ್ತು ಮುಂದಿನ ಹಂತದ ಅವಕಾಶಗಳು ದೊರೆಯುತ್ತವೆಯೇ, ಸಾಮಾನ್ಯ ನಾಗರಿಕನಿಗೆ ತನ್ನ ಭಾಷೆಯಲ್ಲಿ ಆಡಳಿತದೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತದೆಯೇ ಹಾಗೂ ಕನ್ನಡದಲ್ಲಿ ಪ್ರತಿಭೆ ಹೊಂದಿರುವ ಯುವಕನಿಗೆ ಉದ್ಯೋಗ ಮತ್ತು ಉದ್ಯಮದಲ್ಲಿ ತನ್ನ ಸಾಮರ್ಥ್ಯ ತೋರಿಸಲು ವೇದಿಕೆ ಸಿಗುತ್ತದೆಯೇ ಎಂಬುದನ್ನು ಅವಲೋಕಿಸಬೇಕಾಗಿದೆ ಎಂದರು.

ಕನ್ನಡ ನಾಡು-ನುಡಿ, ನಾಡಧ್ವಜ ಮತ್ತು ಕನ್ನಡಿಗರ ಹಕ್ಕುಗಳ ರಕ್ಷಣೆಗೆ ನಮ್ಮ ಕಾಂಗ್ರೆಸ್ ಸರ್ಕಾರ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ದೂರದೃಷ್ಟಿಯ ಮಹತ್ವದ ಕಾರ್ಯಯೋಜನೆಯೊಂದಿಗೆ ಮುನ್ನಡೆಯುತ್ತಿದೆ. ಕರ್ನಾಟಕದ ನಾಡಧ್ವಜಕ್ಕೆ ಅಧಿಕೃತ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಸಚಿವ ಸಂಪುಟದ ನಿರ್ಣಯ, ಸರ್ವಪಕ್ಷಗಳ ಒಮ್ಮತ, ಕೇಂದ್ರ ಸರ್ಕಾರದೊಂದಿಗೆ ಸಂವಾದ ಹಾಗೂ ರಾಜ್ಯವ್ಯಾಪಿ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡುವ ಸಂಕಲ್ಪವನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ನವೆಂಬರ್ 1ರಂದು ಐತಿಹಾಸಿಕ ತಾಣಗಳಲ್ಲಿ ನಾಡಧ್ವಜಾರೋಹಣ, ಒಂದು ಲಕ್ಷ ನಾಡಧ್ವಜಗಳ ಸಿದ್ಧತೆ, ಏಕೀಕರಣ ಮತ್ತು ಗೋಕಾಕ್ ಚಳವಳಿಯ ಹೋರಾಟಗಾರರಿಗೆ ಗೌರವ ಸಮರ್ಪಣೆ ಹಾಗೂ ‘ನಮ್ಮ ಧ್ವಜ, ನಮ್ಮ ಹೆಮ್ಮೆ’ ಅಭಿಯಾನದ ಮೂಲಕ ನಾಡಿನಾದ್ಯಂತ ಕನ್ನಡಾಭಿಮಾನವನ್ನು ಬಲಪಡಿಸುವ ಕಾರ್ಯಯೋಜನೆ ರೂಪಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ 31 ಜಿಲ್ಲೆಗಳನ್ನು ಒಳಗೊಂಡ ನಾಡಧ್ವಜ ಸಂಕಲ್ಪ ಯಾತ್ರೆ, ವಿಶ್ವ ಕನ್ನಡಿಗರ ಸಹಭಾಗಿತ್ವ, ಕೇಂದ್ರ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ಕಲ್ಪಿಸುವ ಪ್ರಯತ್ನ, ಕನ್ನಡಿಗರ ಉದ್ಯೋಗಾವಕಾಶಗಳಿಗೆ ಆದ್ಯತೆ, ಐತಿಹಾಸಿಕ ಕನ್ನಡ ತಾಣಗಳ ಪುನರುಜ್ಜೀವನ ಹಾಗೂ ಕನ್ನಡದ ಡಿಜಿಟಲ್ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಸರ್ಕಾರ ಒತ್ತು ನೀಡುತ್ತಿದೆ ಎಂದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವಿಶೇಷವಾಗಿ ಅಭಿನಂದಿಸಿದ ಖಾದರ್, ಸುದೀರ್ಘ ಸಾರ್ವಜನಿಕ ಜೀವನ, ತಳಮಟ್ಟದ ರಾಜಕೀಯ ಅನುಭವ ಮತ್ತು ಪಕ್ಷ ಸಂಘಟನೆಯ ಹೊಣೆಗಾರಿಕೆಗಳ ಮೂಲಕ ತಮ್ಮದೇ ಆದ ನಾಯಕತ್ವದ ಛಾಪು ಮೂಡಿಸಿರುವ ಅವರು, ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದ ಅಭಿವೃದ್ಧಿಯ ಜೊತೆಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕನ್ನಡಿಗರ ಆಶಯಗಳಿಗೂ ಆದ್ಯತೆ ನೀಡುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.

ನಾಡಧ್ವಜದ ಗೌರವವನ್ನು ಕೇವಲ ಒಂದು ದಿನದ ಆಚರಣೆಯಾಗಿ ನೋಡದೆ, ರಾಜ್ಯದ ಜನರ ಭಾವನೆ, ಇತಿಹಾಸ ಮತ್ತು ಅಸ್ಮಿತೆಯೊಂದಿಗೆ ಬೆಸೆಯುವ ಸಂಕಲ್ಪವನ್ನು ಮುಂದಿಡುತ್ತಿರುವುದು ಗಮನಾರ್ಹವಾಗಿದೆ. ನಾಡಧ್ವಜಕ್ಕೆ ಅಧಿಕೃತ ಮಾನ್ಯತೆ ದೊರಕಿಸುವ ಪ್ರಯತ್ನವನ್ನು ಸರ್ವಪಕ್ಷಗಳ ಸಹಕಾರದೊಂದಿಗೆ ಸಂವಿಧಾನಬದ್ಧ ಮತ್ತು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಮುನ್ನಡೆಸುವ ಆಶಯವು ರಾಜ್ಯದ ಒಗ್ಗಟ್ಟಿಗೆ ಮಹತ್ವ ನೀಡುತ್ತದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈ ಸಂಕಲ್ಪ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದು, ಕನ್ನಡಿಗರ ಬಹುಕಾಲದ ಆಶಯಗಳಿಗೆ ಗೌರವಯುತ ಮನ್ನಣೆ ದೊರೆಯಲಿ ಎಂದು ಹಾರೈಸಿದರು.

ಇದು ಕೇವಲ ರಾಜ್ಯೋತ್ಸವದ ಆಚರಣೆಯಲ್ಲ. ನಾಡಧ್ವಜದ ಗೌರವವನ್ನು ಜನಸಂಕಲ್ಪವನ್ನಾಗಿಸಿ, ಕನ್ನಡದ ಅಸ್ಮಿತೆಯನ್ನು ಅಭಿವೃದ್ಧಿಯ ಶಕ್ತಿಯನ್ನಾಗಿಸಿ, ಮುಂದಿನ ಪೀಳಿಗೆಗೆ ಹೆಮ್ಮೆಯ ಕರ್ನಾಟಕವನ್ನು ಕಟ್ಟಿಕೊಡುವುದು ನಮ್ಮ ಕಾಂಗ್ರೆಸ್ ಸರ್ಕಾರದ ಮಹಾಸಂಕಲ್ಪವಾಗಿದೆ ಎಂದರು.

ನಮಗೆ ನಮ್ಮ ಭಾಷೆಯ ಬಗ್ಗೆ ಅಪಾರ ಅಭಿಮಾನ ಇರಬೇಕು. ಆದರೆ ಭಾಷಾಭಿಮಾನವೆಂಬುದು ಸಂಕುಚಿತ ಮನೋಭಾವನೆಯ ಗೋಡೆಯಾಗಬಾರದು, ಅದು ಜ್ಞಾನ ವೈಶಾಲ್ಯತೆಯ ಕಿಟಕಿಯಾಗಿ ತೆರೆದುಕೊಳ್ಳಬೇಕು. ಕನ್ನಡವನ್ನು ಪ್ರೀತಿಸುವುದಕ್ಕಾಗಿ ಇತರ ಭಾಷೆಗಳನ್ನು ದ್ವೇಷಿಸಬೇಕಿಲ್ಲ, ತಿರಸ್ಕರಿಸಬೇಕಿಲ್ಲ. ನಿಜವಾದ ಭಾಷಾಪ್ರೇಮವು ದ್ವೇಷದ ಮೇಲೆ ಅಲ್ಲ, ನಮ್ಮ ಭಾಷೆಯನ್ನು ಪ್ರೀತಿಸಿ, ಇತರ ಭಾಷೆಗಳನ್ನು ಗೌರವಿಸಿ, ಅವುಗಳಲ್ಲಿರುವ ಉತ್ತಮ ಅಂಶಗಳನ್ನು ನಮ್ಮ ಭಾಷೆಯೊಂದಿಗೆ ವಿಲೀನಗೊಳಿಸಿ ಭಾಷೆಯನ್ನು ಇನ್ನಷ್ಟು ಬೆಳೆಸುವುದರಲ್ಲಿ ಅಡಗಿದೆ. ರಾಜ್ಯೋತ್ಸವವನ್ನು ಕೇವಲ ಸರ್ಕಾರಿ ಕಾರ್ಯಕ್ರಮವಾಗಿರಿಸದೆ, ಪ್ರತಿಯೊಬ್ಬರ ಮನೆಯ ಹಬ್ಬವನ್ನಾಗಿ ಆಚರಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 120 ವ್ಯಕ್ತಿಗಳು ಹಾಗೂ 53 ಸಂಘ ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನು ವಿತರಿಸಲಾಯಿತು. ಪೊಲೀಸ್, ಎನ್‌ಸಿಸಿ ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಕಾರ್ಯಕ್ರಮ ನಡೆಯಿತು.

ಸಮಾರಂಭದಲ್ಲಿ ಸಂಸದ ಕ್ಯಾ. ಬೃಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.


Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version