ಪುತ್ತೂರು: ನ್ಯಾಯಾಧೀಶರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ; ವ್ಯಕ್ತಿಯ ಸ್ಥಿತಿ ಗಂಭೀರ
ಪುತ್ತೂರು: ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರ ಎದುರೇ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.
ಪುತ್ತೂರು ತಾಲೂಕಿನ ಕಾವು ಮಣಿಯಡ್ಕ ನಿವಾಸಿ ರವಿ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ರವಿ ಹಾಗೂ ಆತನ ಪತ್ನಿ ವಿದ್ಯಾಶ್ರೀ ನಡುವೆ ದಾಂಪತ್ಯ ಕಲಹ ಉಂಟಾಗಿದ್ದು, ಎರಡು ದಿನಗಳ ಹಿಂದೆ ವಿದ್ಯಾಶ್ರೀ ಅವರ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದ ಆರೋಪವೂ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಗಂಡ–ಹೆಂಡತಿ ಜಗಳ ಪೊಲೀಸ್ ಠಾಣೆ ಮಟ್ಟಿಗೆ ಹೋಗಿದ್ದು, ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇತ್ತು.
ಇದೇ ಕಾರಣದಿಂದ ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ನಡೆಯುತ್ತಿದ್ದು, ಇಂದು ಸಂಪ್ಯ ಠಾಣೆಗೆ ಹಾಜರಾಗುವಂತೆ ಪೊಲೀಸರಿಂದ ರವಿಗೆ ಸೂಚನೆ ನೀಡಲಾಗಿತ್ತು. ಈ ನಡುವೆ ರವಿ ನೇರವಾಗಿ ಪುತ್ತೂರು ನ್ಯಾಯಾಲಯದ ಆವರಣಕ್ಕೆ ಆಗಮಿಸಿ, ನ್ಯಾಯಾಧೀಶರ ಎದುರೇ ವಿಷ ಸೇವಿಸಿದ್ದಾನೆ.
ಘಟನೆಗೆ ಮೊದಲು ವ್ಯಕ್ತಿಯೋರ್ವ ವಿಷ ಸೇವನೆ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ನ್ಯಾಯಾಧೀಶರು ಅಲ್ಲಿನ ಸಿಬ್ಬಂದಿಗೆ ಮುಂಚಿತವಾಗಿಯೇ ತಿಳಿಸಿದ್ದಾರೆ ಎನ್ನಲಾಗಿದೆ. ವಿಷ ಸೇವಿಸಿದ ಬಳಿಕ ರವಿ ನ್ಯಾಯಾಲಯದ ಆವರಣದಲ್ಲೇ ವಾಂತಿ ಮಾಡಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ನ್ಯಾಯಾಲಯದ ಸಿಬ್ಬಂದಿ ಹಾಗೂ ಸಾರ್ವಜನಿಕರು ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.
ಗೇರು ತೋಟದಲ್ಲಿ ಸಿಂಪಡಿಸುವ ‘ಕರಾಟೆ’ ಎಂಬ ಕೀಟನಾಶಕವನ್ನು ರವಿ ಸೇವಿಸಿದ್ದಾನೆ ಎಂದು ತಿಳಿದುಬಂದಿದೆ. ವಿಷ ಸೇವನೆಯಿಂದ ಆತನ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಆತ್ಮಹತ್ಯೆ ಯತ್ನದ ಬಳಿಕ ದಂಪತಿ ನಡುವೆ ಸಮಾಧಾನ ಉಂಟಾಗಿದ್ದು, ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಗಂಡ–ಹೆಂಡತಿ ಒಂದೇ ಆಂಬ್ಯುಲೆನ್ಸ್‌ನಲ್ಲಿ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
