ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ – ಆರೋಪಿ ಶಿವಪ್ರಸಾದ್ ಬಂಧನ, 11 ಜಾನುವಾರು ಸಹಿತ ಪಿಕಪ್ ವಶ
ಪುತ್ತೂರು: ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಕೇರಳಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ದಾಳಿ ನಡೆಸಿ ವಶಕ್ಕೆ ಪಡೆದಿರುವ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು, ಈ ಅಕ್ರಮ ಸಾಗಾಟಕ್ಕೆ ಜಾನುವಾರುಗಳನ್ನು ಮಾರಾಟ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಆರ್ಯಾಪು ನಿವಾಸಿ ಶಿವಪ್ರಸಾದ್ (52) ಬಂಧಿತ ಆರೋಪಿ.
ದಿನಾಂಕ 05.10.2026 ರಂದು ಬೆಳಗಿನ ಜಾವ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಕೇರಳದ ಕಡೆಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಸುಷ್ಮಾ ಜಿ. ಭಂಡಾರಿ ಅವರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅವರು ಸಿಬ್ಬಂದಿಯೊಂದಿಗೆ ಪುತ್ತೂರು ಬಲ್ನಾಡು ಗ್ರಾಮದ ಬಿಳಿಯೂರುಕಟ್ಟೆ ಎಂಬಲ್ಲಿ ನಾಕಾಬಂಧಿ ನಡೆಸಿ, ಪಿಕಪ್ ವಾಹನವನ್ನು ತಡೆದಿದ್ದಾರೆ.
ಈ ವೇಳೆ ಪೊಲೀಸರನ್ನು ಕಂಡು ವಾಹನದ ಚಾಲಕ ಹಾಗೂ ಅದರಲ್ಲಿದ್ದ ಮತ್ತೋರ್ವ ವ್ಯಕ್ತಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ವಾಹನ ಪರಿಶೀಲಿಸಿದಾಗ, ಯಾವುದೇ ಪರವಾನಿಗೆಯಿಲ್ಲದೆ ಮಾಂಸಕ್ಕಾಗಿ ಕೇರಳಕ್ಕೆ ಸಾಗಿಸುವ ಉದ್ದೇಶದಿಂದ 11 ಜಾನುವಾರುಗಳನ್ನು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ತುಂಬಿರುವುದು ಕಂಡುಬಂದಿದೆ.
ಪೊಲೀಸರು ಜಾನುವಾರುಗಳು ಹಾಗೂ ಪಿಕಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು, ಸೂಕ್ತ ದಾಖಲೆಗಳಿಲ್ಲದೆ ಜಾನುವಾರುಗಳನ್ನು ಮಾರಾಟ ಮಾಡಿದ್ದ ಆರೋಪಿ ಶಿವಪ್ರಸಾದ್ನನ್ನು ಬಂಧನ ಮಾಡಿದ್ದಾರೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಹಾಗೂ ಪ್ರಾಣಿ ದಯಾ ಸಂಘಟನೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
