ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಂದ ಸುದ್ದಿ ಆಧಾರರಹಿತ: ಸರ್ಜನ್ ಡಾ. ಅಶೋಕ್ ಸ್ಪಷ್ಟನೆ
ಉಡುಪಿ: ಜಿಲ್ಲಾ ಆಸ್ಪತ್ರೆ ಉಡುಪಿ ರಕ್ತ ನಿಧಿ ಕೇಂದ್ರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ಆಧಾರರಹಿತವಾಗಿದ್ದು, ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಜು.7ರಂದು ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಿಂದ ಯಾವುದೇ ದಾಖಲಾತಿ ಅಥವಾ ರಶೀದಿ ಇಲ್ಲದೆ ರಕ್ತ ವಿತರಿಸಲಾಗುತ್ತಿದೆ ಹಾಗೂ ಒಂದೇ ಬಾರಿ 15 ಯೂನಿಟ್ ರಕ್ತವನ್ನು ಖಾಸಗಿ ಆಸ್ಪತ್ರೆಗೆ ನೀಡಲಾಗಿದೆ ಎಂಬ ಆರೋಪಗಳು ಪ್ರಸಾರವಾಗಿದ್ದವು. ಆದರೆ ಈ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಯಾವುದೇ ಆಧಾರವಿಲ್ಲ ಎಂದು ಜಿಲ್ಲಾ ಆಸ್ಪತ್ರೆ ತಿಳಿಸಿದೆ.
ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ರಕ್ತ ಹಾಗೂ ರಕ್ತ ಘಟಕಗಳ ವಿತರಣೆಯನ್ನು ಕರ್ನಾಟಕ ಸರ್ಕಾರದ ಜಾರಿಯಲ್ಲಿರುವ ಮಾರ್ಗಸೂಚಿಗಳು, Drugs and Cosmetics Act, 1940, ಸಂಬಂಧಿತ ನಿಯಮಗಳು ಹಾಗೂ ರಕ್ತ ನಿಧಿ ಕೇಂದ್ರದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (SOPs) ಅನ್ವಯ ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ ಎಂದು ಆಸ್ಪತ್ರೆ ಆಡಳಿತ ಸ್ಪಷ್ಟಪಡಿಸಿದೆ.
ಪ್ರತಿ ಯೂನಿಟ್ ರಕ್ತ ಅಥವಾ ರಕ್ತ ಘಟಕವನ್ನು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ನಿಗದಿತ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕವೇ ವಿತರಿಸಲಾಗುತ್ತದೆ. ದಾಖಲಾತಿಗಳಿಲ್ಲದೆ ಯಾವುದೇ ರಕ್ತ ಅಥವಾ ರಕ್ತ ಘಟಕವನ್ನು ವಿತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದೆ.
ಅದೇ ರೀತಿ, ಬ್ಲಡ್ ಸ್ಟೋರೇಜ್ ಯುನಿಟ್ ನಿರ್ವಹಿಸುತ್ತಿರುವ ಆದರ್ಶ ಆಸ್ಪತ್ರೆಗೂ ಸರ್ಕಾರದ ಮಾರ್ಗಸೂಚಿಗಳ ಪ್ರಕಾರವೇ ರಕ್ತವನ್ನು ವಿತರಿಸಲಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಆಸ್ಪತ್ರೆ ಆಡಳಿತ ಹೇಳಿದೆ.
ಸುಳ್ಳು ಮಾಹಿತಿ ಹರಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಧಾರರಹಿತ ಮಾಹಿತಿಯನ್ನು ನಂಬದೆ, ಜಿಲ್ಲಾ ಆಸ್ಪತ್ರೆಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸದಂತೆ ಮನವಿ ಮಾಡಿರುವ ಆಸ್ಪತ್ರೆ ಆಡಳಿತ, ನೈಜ ಮಾಹಿತಿಯನ್ನೇ ಪ್ರಕಟಿಸುವಂತೆ ಮಾಧ್ಯಮಗಳಿಗೂ ಅವರು ವಿನಂತಿಸಿದ್ದಾರೆ.
