ಬಂಟ್ವಾಳದಲ್ಲಿ ಗೂಡ್ಸ್ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 24 ಜಾನುವಾರುಗಳ ರಕ್ಷಣೆ
ಬಂಟ್ವಾಳ: ಗೂಡ್ಸ್ ಲಾರಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳೆ ಬಂಟ್ವಾಳ ನಗರ ಪೊಲೀಸರು ಲಾರಿಯನ್ನು ತಡೆದು, ಅದರಲ್ಲಿದ್ದ 24 ಜಾನುವಾರುಗಳನ್ನು ರಕ್ಷಿಸಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.
ಗೂಡ್ಸ್ ಲಾರಿಯಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ಪೊಲೀಸ್ ಸಿಬ್ಬಂದಿಯೊಂದಿಗೆ ಬಂಟ್ವಾಳದ ಬಾಳ್ತಿಲ ಪುರ್ಲಿಪ್ಪಾಡಿ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಮೇಲೆ KA-19-D-7120 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆದು ಪರಿಶೀಲಿಸಲಾಯಿತು.
ಈ ವೇಳೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಲಾರಿಯನ್ನು ಪರಿಶೀಲಿಸಿದಾಗ ಅದರೊಳಗೆ ಒಟ್ಟು 24 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿಹಾಕಿ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 134/2026ರಂತೆ ಪ್ರಕರಣ ದಾಖಲಾಗಿದ್ದು, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 4, 7, 12 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960ರ ಕಲಂ 11(1)(d) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
