ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದಲ್ಲಿ ಮೊದಲ ಬಾರಿಗೆ ರೋಬೋಟಿಕ್ ಸೆಂಟ್ರಲ್ ಪ್ಯಾಂಕ್ರಿಯಾಟೆಕ್ಟಮಿ ಶಸ್ತ್ರಚಿಕಿತ್ಸೆ ಯಶಸ್ವಿ
ಮಂಗಳೂರು: ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದಲ್ಲಿ ಮೊದಲ ಬಾರಿಗೆ ರೋಬೋಟಿಕ್ ಸೆಂಟ್ರಲ್ ಪ್ಯಾಂಕ್ರಿಯಾಟೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
22 ವರ್ಷದ ಯುವತಿಗೆ ಮೇದೋಜೀರಕ ಗ್ರಂಥಿಯ (ಪ್ಯಾಂಕ್ರಿಯಾಸ್) ಮಧ್ಯಭಾಗದಲ್ಲಿ ಗಡ್ಡೆ ಕಂಡುಬಂದಿತ್ತು. ಈ ಭಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದು ತುಂಬಾ ಕಷ್ಟಕರವಾಗಿದ್ದು, ವಿಶೇಷ ಪರಿಣತಿ ಅಗತ್ಯವಿರುತ್ತದೆ.
ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ವೈದ್ಯರಾದ ಡಾ.ರೋಹನ್ ಶೆಟ್ಟಿ ಮತ್ತು ಡಾ.ಅಶ್ವಿನ್ ಆಳ್ವ ಅವರು, ಅರಿವಳಿಕೆ ತಜ್ಞರಾದ ಡಾ. ಹರೀಶ್ ಕಾರಂತ ಅವರ ಸಹಕಾರದೊಂದಿಗೆ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನದ ಮೂಲಕ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದರು.
ಈ ಶಸ್ತ್ರಚಿಕಿತ್ಸೆಯ ವಿಶೇಷತೆಯೆಂದರೆ, ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಜೊತೆಗೆ ಮೇದೋಜೀರಕ ಗ್ರಂಥಿಯ ಬಹುಪಾಲು ಆರೋಗ್ಯಕರ ಭಾಗವನ್ನು ಉಳಿಸಿಕೊಳ್ಳಲಾಗಿದೆ. ಇದರಿಂದ ಭವಿಷ್ಯದಲ್ಲಿ ಮಧುಮೇಹ ಉಂಟಾಗುವ ಸಾಧ್ಯತೆ ಹಾಗೂ ಆಹಾರದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಯಾವುದೇ ತೊಂದರೆಗಳಿಲ್ಲದೆ ಶೀಘ್ರವಾಗಿ ಚೇತರಿಸಿಕೊಂಡಿದ್ದು, ಒಂದು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ಸಾಧನೆಯು ಎ.ಜೆ. ಆಸ್ಪತ್ರೆಯ ವೈದ್ಯಕೀಯ ತಂಡದ ಪರಿಣತಿ ಹಾಗೂ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳಿಗೆ ಮತ್ತೊಂದು ಹೆಮ್ಮೆಯ ಮೈಲಿಗಲ್ಲಾಗಿದೆ.
