ಪರಿಸರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮದ ಪಾತ್ರ ಮುಖ್ಯ: ಡಿಎಫ್ಓ ಸಿವರಾಮ್ ಬಾಬು
ಉಡುಪಿ ಜಿಲ್ಲಾ ಪತ್ರಕರ್ತರ ಸಂಘದಿಂದ ಪರಿಸರ ದಿನಾಚರಣೆ
ಉಡುಪಿ: ಪರಿಸರ ದಿನಾಚರಣೆ ಎಂಬುದು ಕೇವಲ ಒಂದೇ ದಿನದಲ್ಲಿ ಮಾಡುವ ಆಚರಣೆಯಲ್ಲ. ಪ್ರತಿದಿನ ಮಾಡಬೇಕಾದ ಕಾರ್ಯ. ಒಂದು ದಿನ ಗಿಡ ನೆಟ್ಟರೆ ಸಾಲದು, ಅದನ್ನು ಪ್ರತಿದಿನ ಪೋಷಿಸಬೇಕು. ಅದೇ ರೀತಿ ಪರಿಸರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೂಡ ಮಾಡಬೇಕು. ಇದರಲ್ಲಿ ಮಾಧ್ಯಮದವರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ್ ಬಾಬು ಎಂ. ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಶುಕ್ರವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಪತ್ರಿಕಾ ಭವನದ ಆವರಣದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಡೀ ಪರಿಸರ ವ್ಯವಸ್ಥೆಯ ಪ್ರತಿಯೊಂದು ಕೂಡ ಬಹಳ ಮುಖ್ಯವಾಗಿ ರುತ್ತದೆ. ಒಂದು ಅಳಿದು ಹೋದರೂ ಅದರ ಪ್ರಾಮುಖ್ಯತೆ ನಮಗೆ ಅರ್ಥ ಆಗುತ್ತದೆ. ಹಾಗಾಗಿ ನಾವು ಇಡೀ ಪರಿಸರ ವ್ಯವಸ್ಥೆಯನ್ನು ಕಾಪಾಡ ಬೇಕಾಗುತ್ತದೆ. ಇಂದು ಮುಂಗಾರು ತುಂಬಾ ಕ್ಷಿಣಿಸಿ ಶೇ.೬೦ರಷ್ಟು ಮಳೆ ಕಡಿಮೆ ಆಗಿದೆ. ಇದಕ್ಕೆ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯೇ ಕಾರಣವಾಗಿದೆ. ಆದುದರಿಂದ ಪರಿಸರವನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು.
ಸಂಘದ ರಾಜ್ಯ ಸಮಿತಿ ಸದಸ್ಯ ಅಸ್ಟ್ರೋ ಮೋಹನ್, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ಪತ್ರಿಕಾ ಭವನ ಸಮಿತಿಯ ಸಹಸಂಚಾಲಕ ಗಣೇಶ್ ಕಲ್ಯಾಣ ಪುರ, ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂಘದ ಸದಸ್ಯ ಅಜಿತ್ ಆರಾಡಿ ವಂದಿಸಿದರು. ಯಶೋಧಾ ಕೇಶವ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕಾ ಭವನದ ಸುತ್ತಮುತ್ತ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಸಿಗಳ ಪ್ರಾಯೋಜಕತ್ವವನ್ನು ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ವಹಿಸಿದ್ದರು.
