ಶಿರೂರು ಪರ್ಯಾಯ ಮಹೋತ್ಸವ: ಭದ್ರತೆಗಾಗಿ 1500ಕ್ಕೂ ಅಧಿಕ ಪೊಲೀಸರ ನಿಯೋಜನೆ
ಉಡುಪಿ: ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಶಾಂತಿಯುತವಾಗಿ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತೆ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಭದ್ರತೆಗಾಗಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಒಟ್ಟು 1 ಎಸ್‌ಪಿ, 1 ಹೆಚ್ಚುವರಿ ಎಸ್‌ಪಿ, 8 ಡಿವೈಎಸ್‌ಪಿ, 21 ಪೊಲೀಸ್ ಇನ್ಸ್‌ಪೆಕ್ಟರ್‌ಗಳು, 61 ಪೊಲೀಸ್ ಉಪನಿರೀಕ್ಷಕರು, 110 ಸಹಾಯಕ ಉಪನಿರೀಕ್ಷಕರು, 812 ಪೊಲೀಸ್ ಸಿಬ್ಬಂದಿ ಹಾಗೂ 200 ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ 4 ಕೆಎಸ್‌ಆರ್‌ಪಿ, 14 ಡಿಎಆರ್ ಪಡೆಗಳು ಹಾಗೂ 5 ವಿಧ್ವಂಸಕ ಕೃತ್ಯ ಪತ್ತೆ ತಂಡಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಶ್ರೀ ಕೃಷ್ಣಮಠದ ಸುತ್ತಮುತ್ತ 70 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಮಠದ ವಠಾರದಲ್ಲಿ ಹೊರಠಾಣೆಗಳನ್ನೂ ತೆರೆಯಲಾಗಿದೆ. ಜೊತೆಗೆ ಒಂದು ಕ್ಯೂಆರ್‌ಟಿ ತಂಡ, 6 ಆಂಬ್ಯುಲೆನ್ಸ್, 6 ಅಗ್ನಿಶಾಮಕ ವಾಹನಗಳು, 5 ಅಗ್ನಿ ಬುಲೆಟ್‌ಗಳು, 24 ಪಬ್ಲಿಕ್ ಅಡ್ರೆಸ್ ಸಿಸ್ಟಂ, 6 ಪೊಲೀಸ್ ಸಹಾಯವಾಣಿ ಕೇಂದ್ರಗಳು, 12 ಬೈನಾಕುಲರ್‌ಗಳು, 3 ಡ್ರೋನ್ ಕ್ಯಾಮೆರಾ ಹಾಗೂ 300 ಬ್ಯಾರಿಕೇಡ್‌ಗಳನ್ನು ಬಳಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
