ಮಣಿಪಾಲದ ಶಾಲಾ ಬಸ್ ಅಪಘಾತ ಪ್ರಕರಣಕ್ಕೆ ಮಹತ್ವದ ತಿರುವು; ಸುಳ್ಳು ದೂರು ನೀಡಿದ್ದ ಬಸ್ ಕಂಡಕ್ಟರ್ ಬಂಧನ
ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲಾ ಬಸ್ ಅಪಘಾತ ಪ್ರಕರಣದ ತನಿಖೆಗೆ ಮಹತ್ವದ ತಿರುವು ಸಿಕ್ಕಿದ್ದು, ಬಸ್ ಚಾಲಕನೆಂದು ತನ್ನ ತಂದೆಯ ವಿರುದ್ಧ ದೂರು ದಾಖಲಿಸಿದ್ದ ಶಾಲಾ ಬಸ್ ಕಂಡಕ್ಟರ್ನೇ ಬಸ್ ಚಲಾಯಿಸಿ ಅಪಘಾತ ಎಸಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 25ರಂದು ಬೆಳಿಗ್ಗೆ 8:05ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 169(ಎ)ರ ಸಿಂಡಿಕೇಟ್ ಸರ್ಕಲ್ ಡೌನ್ ಸಮೀಪದ ಸೆಂಟ್ರಲ್ ಪಾರ್ಕ್ ಹೋಟೆಲ್ ಎದುರು, ಪೆರಂಪಳ್ಳಿಯ ಅಲ್ ಇಬಾದ್ ಇಂಡಿಯನ್ ಶಾಲೆಗೆ ಸೇರಿದ KA-19-AB-5977 ಸಂಖ್ಯೆಯ ಶಾಲಾ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಬಸ್ಸಿನಲ್ಲಿದ್ದ ಶಾಲಾ ಮಕ್ಕಳು ಗಾಯಗೊಂಡಿದ್ದರು.
ಈ ಸಂಬಂಧ ಶಾಲಾ ಬಸ್ ಕಂಡಕ್ಟರ್ ಮಹಮ್ಮದ್ ರಾಹಿಜ್ (20), ಕಟಪಾಡಿ ನಿವಾಸಿ, ತನ್ನ ತಂದೆ ರಿಜ್ವಾನ್ ಬಸ್ ಚಾಲನೆ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ದೂರು ನೀಡಿದ್ದರು. ಅದರಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 101/2026ರಡಿ ಬಿಎನ್ಎಸ್ ಕಲಂ 281 ಹಾಗೂ 125(ಎ) ಅನ್ವಯ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ಆದರೆ, ತನಿಖೆ ವೇಳೆ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದೂರುದಾರನಾದ ಮಹಮ್ಮದ್ ರಾಹಿಜ್ ಅವರೇ ಬಸ್ ಚಾಲನೆ ಮಾಡುತ್ತಿದ್ದು, ನಿಯಂತ್ರಣ ತಪ್ಪಿದ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದಿರುವುದು ದೃಢಪಟ್ಟಿದೆ.
ಇದರಿಂದ ಪ್ರಕರಣಕ್ಕೆ ಬಿಎನ್ಎಸ್ ಕಲಂ 110 ಹಾಗೂ 229 ಅನ್ನು ಕೂಡ ಸೇರಿಸಿ ತನಿಖೆ ಮುಂದುವರಿಸಲಾಯಿತು. ತನಿಖೆಯಲ್ಲಿ ಮಹಮ್ಮದ್ ರಾಹಿಜ್ ಅವರಿಗೆ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಇಲ್ಲದಿರುವುದು ಬೆಳಕಿಗೆ ಬಂದಿದೆ.
ಚಾಲನಾ ಪರವಾನಗಿ ಇಲ್ಲದ ವ್ಯಕ್ತಿಗೆ ಶಾಲಾ ಬಸ್ ಚಾಲನೆ ಮಾಡಲು ಅವಕಾಶ ನೀಡಿದರೆ ಮಕ್ಕಳ ಜೀವಕ್ಕೆ ಅಪಾಯವಾಗಬಹುದು ಎಂಬ ಅರಿವಿದ್ದರೂ ಸಹ ವಾಹನದ ಮಾಲೀಕರು ಆರೋಪಿಗೆ ಬಸ್ ಚಾಲನೆಗೆ ಅವಕಾಶ ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶಾಲಾ ವಾಹನದ ಮಾಲೀಕರು ಹಾಗೂ ಸುಳ್ಳು ದೂರು ನೀಡಿದ ಆರೋಪಿಯ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 3ರಂದು ಆರೋಪಿ ಮಹಮ್ಮದ್ ರಾಹಿಜ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
