ಉರ್ವ ಸ್ಟೋರ್ ಮಾರುಕಟ್ಟೆ ಅಭಿವೃದ್ಧಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಸ್ಥಳ ಪರಿಶೀಲನೆ
ಮಂಗಳೂರು: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಉರ್ವಸ್ಟೋರ್ ಮಾರುಕಟ್ಟೆಯ ನೂತನ ಅಭಿವೃದ್ಧಿ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ನೂತನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಅವರು ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನೂತನ ಮಾರುಕಟ್ಟೆ ಕಟ್ಟಡದ ವಿನ್ಯಾಸ, ಅಗತ್ಯ ಮೂಲಸೌಕರ್ಯ ಸೇರಿದಂತೆ ಯೋಜನೆಯ ವಿವಿಧ ಅಂಶಗಳನ್ನು ಪರಿಶೀಲಿಸಿದರು. ಯೋಜನೆಯನ್ನು ಪರಿಣಾಮಕಾರಿಯಾಗಿ ಹಾಗೂ ಶೀಘ್ರವಾಗಿ ಅನುಷ್ಠಾನಗೊಳಿಸುವ ಕುರಿತು ಮೂಡಾ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಇದೇ ವೇಳೆ ಸ್ಥಳೀಯ ಸಾರ್ವಜನಿಕರು ಸುಸಜ್ಜಿತ ಮಾರುಕಟ್ಟೆಯ ಅಗತ್ಯತೆಯನ್ನು ಅಧ್ಯಕ್ಷರ ಗಮನಕ್ಕೆ ತಂದರು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಯನ್ನು ಶೀಘ್ರವಾಗಿ ಕಾರ್ಯಗತಗೊಳಿಸುವಂತೆ ಮನವಿ ಮಾಡಿದರು.
