Home Mangalorean News Kannada News ಮಂಗಳೂರಿನಲ್ಲಿ ವಿಶೇಷ ಸಂಪುಟ ಸಭೆ: ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ...

ಮಂಗಳೂರಿನಲ್ಲಿ ವಿಶೇಷ ಸಂಪುಟ ಸಭೆ: ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಜೆಪಿ ಹೆಗ್ಡೆ ಮನವಿ

Spread the love

ಮಂಗಳೂರಿನಲ್ಲಿ ವಿಶೇಷ ಸಂಪುಟ ಸಭೆ: ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಜೆಪಿ ಹೆಗ್ಡೆ ಮನವಿ

ಉಡುಪಿ: ಮಂಗಳೂರಿನಲ್ಲಿ ವಿಶೇಷ ಸಂಪುಟ ಸಭೆ ಆಯೋಜಿಸಿರುವ ಹಿನ್ನಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಭಾಷೆ, ಕಲೆ, ಶಿಕ್ಷಣ, ಉದ್ಯೋಗ, ಮೀನುಗಾರಿಕೆ, ಐತಿಹಾಸಿಕ ಮತ್ತು ಧಾರ್ಮಿಕ ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಕರ್ಯಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮಾಜಿ ಸಂಸದರಾದ ಕೆ ಜಯಪ್ರಕಾಶ್ ಹೆಗ್ಡೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕರಾವಳಿ ಭಾಗದಲ್ಲಿ ಹಲವಾರು ದ್ವೀಪಗಳು, ಕಡಲತೀರಗಳು, ಸುಂದರ ಪ್ರಕೃತಿ ತಾಣಗಳು ಹಾಗೂ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳಿದ್ದರೂ, ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ. ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಪಡಿಸುವುದರಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರೊಂದಿಗೆ ಆರ್ಥಿಕ ಸಬಲೀಕರಣಕ್ಕೂ ನೆರವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಧಾರ್ಮಿಕ ಪ್ರವಾಸೋದ್ಯಮಕ್ಕೆ ಒತ್ತು: ಕರಾವಳಿಯ ಪ್ರಮುಖ ದೇವಾಲಯಗಳು ಮತ್ತು ಧಾರ್ಮಿಕ ತಾಣಗಳನ್ನು ಸಂಪರ್ಕಿಸುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಿ, ಕಡಿಮೆ ವೆಚ್ಚ ಹಾಗೂ ಕಡಿಮೆ ಸಮಯದಲ್ಲಿ ಪ್ರವಾಸಿಗರು ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುವ ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ವೈಲ್ಡ್ಲೈಫ್ ಸಫಾರಿ ಆರಂಭಿಸಲು ಅನುಮತಿ ನೀಡುವುದರ ಜೊತೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆಯೂ ಕೋರಲಾಗಿದೆ.

ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಹಲವು ಬೇಡಿಕೆ: ತಲಪಾಡಿಯಿಂದ ಉಡುಪಿ ಜಿಲ್ಲೆಯ ಬೈಂದೂರಿನವರೆಗೆ ಸಮುದ್ರ ತೀರಕ್ಕೆ ಸಮೀಪವಿರುವ ರಸ್ತೆಯನ್ನು ಅಭಿವೃದ್ಧಿಪಡಿಸಿ, ಮಾರ್ಗಮಧ್ಯೆ ಬರುವ ನದಿಗಳಿಗೆ ಸೇತುವೆ ನಿರ್ಮಿಸುವ ಮೂಲಕ ನೇರ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಇದರಿಂದ ಮೀನುಗಾರಿಕಾ ಬಂದರುಗಳ ಸಂಪರ್ಕ, ಮೀನು ಮಾರುಕಟ್ಟೆ ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.

ಕೃಷಿ ಮತ್ತು ಮೀನುಗಾರಿಕಾ ಉತ್ಪನ್ನಗಳಿಗಾಗಿ ಶೀತಲ ಸರಪಳಿ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆ ಮತ್ತು ಶೀತಲೀಕರಣ ಘಟಕಗಳನ್ನು ಸ್ಥಾಪಿಸಲು ಸರ್ಕಾರಿ ಹಾಗೂ ಖಾಸಗಿ ವಲಯಕ್ಕೆ ಅವಕಾಶ ಕಲ್ಪಿಸುವಂತೆ ಕೋರಲಾಗಿದೆ. ಸಮುದ್ರಕ್ಕೆ ತೆರಳಿ ಮೃತಪಟ್ಟ ಮೀನುಗಾರರ ಕುಟುಂಬಗಳಿಗೆ ನೀಡುವ ಪರಿಹಾರ ಮೊತ್ತ ಹೆಚ್ಚಿಸುವುದು ಹಾಗೂ ಮೀನುಗಾರರ ಕಲ್ಯಾಣ ನಿಧಿ ಸ್ಥಾಪಿಸುವಂತೆಯೂ ಮನವಿ ಮಾಡಲಾಗಿದೆ.

ಬ್ರಹ್ಮಾವರದಲ್ಲಿ ಸೀಫುಡ್ ಪಾರ್ಕ್ ನಿರ್ಮಿಸುವುದು, ಮಂಗಳೂರಿನ ಮೀನುಗಾರಿಕಾ ಕಾಲೇಜನ್ನು ಪ್ರತ್ಯೇಕ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಿ ಸಂಶೋಧನೆ ಹಾಗೂ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಡಲಾಗಿದೆ.

ಮೀನುಗಾರರಿಗೆ ನೀಡಲಾಗುವ ಡೀಸೆಲ್ ಮೇಲಿನ ತೆರಿಗೆ ಸೌಲಭ್ಯದ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಹಿಂದಿನ ವ್ಯವಸ್ಥೆಯನ್ನು ಮರುಜಾರಿಗೊಳಿಸುವಂತೆಯೂ ಮನವಿ ಮಾಡಲಾಗಿದೆ.

ಕರಾವಳಿಯಲ್ಲಿ ಹೈಕೋರ್ಟ್ ಪೀಠಕ್ಕೆ ಬೇಡಿಕೆ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮಧ್ಯಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವ ಮೂಲಕ ಸಾರ್ವಜನಿಕರ ಸಮಯ, ಹಣ ಮತ್ತು ಶ್ರಮ ಉಳಿತಾಯವಾಗುವುದರ ಜೊತೆಗೆ ತ್ವರಿತ ನ್ಯಾಯದಾನಕ್ಕೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕುಂದ ಕನ್ನಡ ಭಾಷೆ ಅಭಿವೃದ್ಧಿಗೆ ಸಭಾಭವನ: ಕುಂದಾಪುರ ಮತ್ತು ಉಡುಪಿ ಭಾಗದಲ್ಲಿ ಮಾತನಾಡುವ ಕುಂದ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಈಗಾಗಲೇ ರಚಿಸಲಾಗಿರುವ ಕುಂದ ಅಧ್ಯಯನ ಪೀಠದ ಸಭೆ, ಸಮಾರಂಭ ಹಾಗೂ ಕಾರ್ಯಚಟುವಟಿಕೆಗಳಿಗೆ ಸಭಾಭವನ ನಿರ್ಮಿಸಲು ಕುಂದಾಪುರ ಹೋಬಳಿಯ ಸರ್ವೆ ನಂ.21ರಲ್ಲಿರುವ ಸರ್ಕಾರಿ ಜಾಗವನ್ನು ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ.

ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಒತ್ತು: ಕರಾವಳಿ ಭಾಗದ ಯುವಕರ ವಲಸೆ ತಡೆಯಲು ಸರ್ಕಾರಿ ಇಂಜಿನಿಯರಿಂಗ್, ಪಾಲಿಟೆಕ್ನಿಕ್, ಐಟಿಐ, ಹೋಟೆಲ್ ಮ್ಯಾನೇಜ್ಮೆಂಟ್ ಸೇರಿದಂತೆ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಉದ್ದಿಮೆಗಳು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಂಡು ಅಗತ್ಯ ಅನುದಾನ ಒದಗಿಸುವಂತೆ ಹಾಗೂ ಬ್ರಹ್ಮಾವರದಲ್ಲಿರುವ ಕೃಷಿ-ತೋಟಗಾರಿಕೆ ಡಿಪ್ಲೊಮಾ ಕಾಲೇಜನ್ನು ಕೃಷಿ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸುವಂತೆ ಮನವಿ ಮಾಡಲಾಗಿದೆ.

ಕಲೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಪ್ರೋತ್ಸಾಹ: ಯಕ್ಷಗಾನ, ಬಯಲಾಟ ಹಾಗೂ ಸಾಂಪ್ರದಾಯಿಕ ಕಂಬಳ ಸೇರಿದಂತೆ ಕರಾವಳಿಯ ಸ್ಥಳೀಯ ಕಲೆ ಮತ್ತು ಪರಂಪರೆಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ನೀಡುವಂತೆ ಕೋರಲಾಗಿದೆ. ಸಾಂಪ್ರದಾಯಿಕ ಕಂಬಳಕ್ಕೆ ಪ್ರಸ್ತುತ ನೀಡುತ್ತಿರುವ ಅನುದಾನದಲ್ಲಿ ಸೂಕ್ತ ಪಾಲನ್ನು ಮೀಸಲಿಡುವಂತೆ ಮನವಿ ಮಾಡಲಾಗಿದೆ.

ಕೊರಗ ಸಮುದಾಯದ ಅಭಿವೃದ್ಧಿಗೂ ಬೇಡಿಕೆ: ಡಾ. ಮಹಮದ್ ಪೀರ್ ವರದಿಯಂತೆ ಭೂಮಿ ಮಂಜೂರು ಮಾಡುವ ಪ್ರಕ್ರಿಯೆ ಆರಂಭವಾಗಿದ್ದರೂ ಇನ್ನೂ ಭೂಮಿ ದೊರೆಯದ ಕೊರಗ ಸಮುದಾಯದ ಅರ್ಹ ಫಲಾನುಭವಿಗಳಿಗೆ ಶೀಘ್ರ ಭೂಮಿ ಮಂಜೂರು ಮಾಡುವಂತೆ ಕೋರಲಾಗಿದೆ. ಎಸ್ಟಿ ಮೀಸಲಾತಿಯಲ್ಲಿಯೇ ಕೊರಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ಮೂಲಕ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ.

ಕೊರಗ, ಕುಡುಬಿ, ಮರಾಠ ನಾಯ್ಕ ಸೇರಿದಂತೆ ಸ್ಥಳೀಯ ಸಮುದಾಯಗಳ ಗುಮ್ಮಟೆ ಕುಣಿತ, ಗೋಂದೋಳು, ಕೋಲಾಟ ಮತ್ತಿತರ ಸಾಂಸ್ಕೃತಿಕ ಪರಂಪರೆಗಳ ಸಂರಕ್ಷಣೆ ಮತ್ತು ಪ್ರೋತ್ಸಾಹಕ್ಕಾಗಿ ವಾರ್ಷಿಕ ವಿಶೇಷ ಅನುದಾನ ನೀಡುವಂತೆ ಆಗ್ರಹಿಸಲಾಗಿದೆ.

ಕಸ್ತೂರಿ ರಂಗನ್ ವರದಿ ಕುರಿತು ಸ್ಪಷ್ಟತೆಗೆ ಮನವಿ: ಪಶ್ಚಿಮ ಘಟ್ಟಗಳ ಸಂರಕ್ಷಣೆಯೊಂದಿಗೆ ರೈತರ ಹಿತಾಸಕ್ತಿಯನ್ನೂ ಗಮನದಲ್ಲಿಟ್ಟುಕೊಂಡು ಗ್ರಾಮವಾರು ಗಡಿ ಮತ್ತು ನಿಯಮಗಳನ್ನು ಸಡಿಲಿಸುವ ಕುರಿತು ಸಾರ್ವಜನಿಕರೊಂದಿಗೆ ಚರ್ಚಿಸಿ, ಕರಡು ಆದೇಶದಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಕೋರಲಾಗಿದೆ.

ಡಿಸಿ ಮನ್ನಾ ಭೂಮಿ ಹಂಚಿಕೆ ತ್ವರಿತಗೊಳಿಸಲು ಆಗ್ರಹ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅರ್ಹ ದಲಿತ ಫಲಾನುಭವಿಗಳಿಗೆ ದೊರಕಬೇಕಿರುವ ಡಿಸಿ ಮನ್ನಾ ಭೂಮಿಯ ಬಾಕಿ ಹಂಚಿಕೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಕಾಲಮಿತಿಯಲ್ಲಿ ಮುಗಿಸಿ ಹಕ್ಕುಪತ್ರ ನೀಡುವಂತೆ ಮನವಿ ಮಾಡಲಾಗಿದೆ.

ಮೀನುಗಾರಿಕಾ ಬಂದರುಗಳ ಕಾಮಗಾರಿ ಪೂರ್ಣಗೊಳಿಸಲು ಮನವಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 50:50 ಅನುದಾನದಲ್ಲಿ ಆರಂಭಗೊಂಡಿರುವ ಹೆಜಮಾಡಿ ಕೋಡಿಯ ಮೀನುಗಾರಿಕಾ ಬಂದರು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಕೋರಲಾಗಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರಿನ ವಿಸ್ತರಣೆ ಕಾಮಗಾರಿಯ ಸಂದರ್ಭದಲ್ಲಿ ಶಿಥಿಲಗೊಂಡಿರುವ ಹಳೆಯ ಬಂದರನ್ನು ಪುನರ್ನಿರ್ಮಿಸುವಂತೆಯೂ ಮನವಿ ಮಾಡಲಾಗಿದೆ.

ಇದರೊಂದಿಗೆ ಸಣ್ಣ ನೀರಾವರಿ ಕೆರೆ, ಕಾಲುವೆಗಳ ಪುನಶ್ಚೇತನ ಹಾಗೂ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಗಮನಹರಿಸುವುದು ಮತ್ತು ವರಾಹಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.


Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version